ಹಾವೇರಿ:ಜಿಲ್ಲೆಯಲ್ಲಿ ಇದೀಗ ರಾತ್ರಿ ರಾಣಿಯರದೇ ಮಾತು. ರಾತ್ರಿ ವೇಳೆಯಲ್ಲಿ ಮಾತ್ರ ಅರಳುವ ಈ ಶ್ವೇತ ಸುಂದರಿಯರ ಸೊಬಗಿಗೆ ಹೆಂಗಳೆಯರು ಮನಸೋತಿದ್ದಾರೆ. ಹಿಮಾಲಯದ ತಪ್ಪಲಿನಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಬೆಡಗಿಯರು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕಂಡು ಬರುತ್ತಿದ್ದಾರೆ. ಪ್ರತಿ ವರ್ಷ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಅದೂ ವರ್ಷದಲ್ಲಿ ಒಂದು ದಿನ ಕೇವಲ 5 ಗಂಟೆಗಳ ಕಾಲ ತಮ್ಮ ಬಿನ್ನಾಣದಿಂದ ಎಲ್ಲರ ಮನಸೆಳೆಯುವ ಈ ಬಿಳಿ ಸುಂದರಿಯರ ವಿಶೇಷವಿದು.
ಹಿಮಾಲಯ ತಪ್ಪಲು ಮತ್ತು ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬ್ರಹ್ಮಕಮಲ ಕಳೆದ ಕೆಲವು ವರ್ಷಗಳಿಂದ ಹಾವೇರಿ ಜಿಲ್ಲೆಯಾದ್ಯಂತ ಕಾಣಲಾರಂಭಿಸಿದೆ. ಜೂನ್ ಮತ್ತು ಜುಲೈ ತಿಂಗಳು ಬಂತೆಂದರೆ ಸಾಕು ಬ್ರಹ್ಮಕಮಲ ಗಿಡ ಹೂವುಗಳಿಂದ ಕಂಗೊಳಿಸುತ್ತದೆ. ಈ ಗಿಡದ ವಿಶೇಷ ಅಂದರೆ ಎಲೆಯಲ್ಲಿ ಬೇರು ಬಿಟ್ಟು ಎಲೆಯಲ್ಲಿ ಕಾಂಡವಾಗಿ ಎಲೆಯಲ್ಲಿ ಹೂ ಬಿಡುವುದು. ಕ್ಯಾಕಸ್ ಜಾತಿಗೆ ಸೇರಿದ ಈ ಬ್ರಹ್ಮಕಮಲದ ವೈಜ್ಞಾನಿಕ ನಾಮಧೇಯ ಎಪಿಪಿಲಮ್ ಆಕ್ಸಿಪೆಟಲ್. ವರ್ಷದಲ್ಲಿ ಒಂದು ಬಾರಿ ಅದೂ ರಾತ್ರಿ ವೇಳೆ ಕೇವಲ 5 ಗಂಟೆ ಅರಳುವ ಈ ಬ್ರಹ್ಮಕಮಲವನ್ನ ರಾತ್ರಿ ರಾಣಿಯೆಂದು ಕರೆಯಲಾಗುತ್ತದೆ.