ಕರ್ನಾಟಕ

karnataka

ಕನ್ನಡ ಭಾಷೆ ವಿಚಾರ: ನ್ಯಾಯಾಲಯದಲ್ಲಿನ ಹಿನ್ನಡೆಗೆ ನಾಡೋಜ ಡಾ.ಮಹೇಶ್ ಜೋಶಿ ಕಳವಳ

By

Published : Apr 9, 2022, 1:09 PM IST

Updated : Apr 9, 2022, 1:17 PM IST

ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾಗೂ ನನ್ನ ಸ್ವಂತ ಜಿಲ್ಲೆಯೂ ಆಗಿರುವುದರಿಂದ ಈ ಸಮ್ಮೇಳನದ ಬಗ್ಗೆ ವಿಶೇಷ ಕಾಳಜಿ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದರು.

Kannada Sahitya Parishat  president Mahesh Joshi
ಡಾ.ಮಹೇಶ್ ಜೋಶಿ

ಕುಷ್ಟಗಿ(ಕೊಪ್ಪಳ): ಕನ್ನಡ ಭಾಷೆಯ ಬಗ್ಗೆ ಜನರಿಗೆ ಅಪಾರ ಗೌರವವಿದೆ. ಹಾಗೆಯೇ ಒಳಗಡೆ ಕೆಂಡವೂ ಇದೆ. ಈ ಹಿನ್ನೆಲೆಯಲ್ಲಿ ಕನ್ನಡ ಶಾಲೆ ಉಳಿಸಿ, ಕನ್ನಡ ಬೆಳೆಸಿ ಎನ್ನುವ ದುಂಡು ಮೇಜಿನ ಸಭೆಯ ವಿಚಾರವನ್ನು ಸರ್ಕಾರ ಆದ್ಯತೆ ಮೇರೆಗೆ ಜಾಗರೂಕವಾಗಿ ಪರಿಗಣಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.

ನಾಡೋಜ ಡಾ.ಮಹೇಶ್ ಜೋಶಿ

ಕುಷ್ಟಗಿಯ ಸರ್ಕ್ಯೂಟ್ ಹೌಸ್​​ನಲ್ಲಿ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮಗೆ ನ್ಯಾಯಾಲಯದಲ್ಲಿ ಹಿನ್ನೆಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಯುವಿಕೆಗೆ, ಕನ್ನಡ ಕಲಿಸುವುದಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯ ತಡೆಯಾಜ್ಞೆ ತಂದಿದೆ. ಕಾನೂನಿನಲ್ಲಿ ಹೆಸರು ಮಾಡಿರುವ ಅನುಭವದ ಹಿನ್ನೆಲೆಯಲ್ಲಿ ವಕೀಲರನ್ನು ಸರ್ಕಾರ ನಿಯೋಜಿಸಿ ಕಾಲಹರಣ ಮಾಡದೇ ಅತೀ ಶೀಘ್ರದಲ್ಲಿ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಬೇಕು. ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು, ಜ್ಞಾನ, ಅನುಭವದ ಹಿನ್ನೆಲೆ ಒತ್ತಾಯದಿಂದ ಪ್ರಬಲವಾದ ವಾದ ಮಂಡಿಸಿ, ತಡೆಯಾಜ್ಞೆ ತೆರವುಗೊಳಿಸಿ ಕನ್ನಡಕ್ಕೆ ನ್ಯಾಯಕ್ಕೆ ಕಲ್ಪಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ನಾಡೋಜ ಡಾ.ಮಹೇಶ್ ಜೋಶಿ

ಹಾವೇರಿ ಸಮ್ಮೇಳನ ಬೇರೆ ಸಮ್ಮೇಳನಗಿಂತ ವಿಭಿನ್ನ: ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾಗೂ ನನ್ನ ಸ್ವಂತ ಜಿಲ್ಲೆಯೂ ಆಗಿರುವುದರಿಂದ ಈ ಸಮ್ಮೇಳನದ ಬಗ್ಗೆ ವಿಶೇಷ ಕಾಳಜಿ ಇದೆ. ಕನ್ನಡದ ಹಬ್ಬ ನನ್ನ ತವರಿನಲ್ಲಿ ನಡೆಯುತ್ತಿರುವಾಗ ಯಾವುದೇ ತೊಂದರೆ ಇಲ್ಲದೇ, ಊಟ ವ್ಯವಸ್ಥೆ, ಸಾರಿಗೆ ಇತ್ಯಾದಿ ಸುಗಮವಾಗಿ ನಡೆಸಲು ಉತ್ಸುಕನಾಗಿದ್ದೇನೆ. ಸಮ್ಮೇಳನದಲ್ಲಿ ಆಗುವ ಚರ್ಚೆಗಳು ಸರ್ಕಾರ ಹಾಗೂ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಗೋಷ್ಠಿಗಳಾಗಲಿವೆ ಎಂದರು.

ಕೊರೊನಾ ಹಿನ್ನೆಲೆ ಎರಡು ವರ್ಷ ಸಮ್ಮೇಳನಗಳು ನಡೆದಿಲ್ಲ. ಹೀಗಾಗಿ ಸಮ್ಮೇಳನದ ಬಗ್ಗೆ ಕನ್ನಡಿಗರ ಸಾಕಷ್ಟು ನಿರೀಕ್ಷೆ ಇದೆ. ಈ ಸಮ್ಮೇಳನ ಬೇರೆ ಸಮ್ಮೇಳನಕ್ಕಿಂತ ವಿಭಿನ್ನವಾಗಿರುತ್ತದೆ. ಹಾವೇರಿಯಲ್ಲಿ ನಡೆಯುವ ಸಮ್ಮೇಳನ ಹಿಂದೆಯೂ ಆಗಿಲ್ಲ, ಮುಂದೆಯೂ ಆಗಬಾರದು ಎನ್ನುವ ನಿಟ್ಟಿನಲ್ಲಿ ಸಮ್ಮೇಳನ ನಡೆಸಲಾಗುವುದು ಎಂದರು.

ಕೊರೊನಾದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಲಾವಿದರನ್ನು ಸಾಹಿತಿಗಳನ್ನು ಕಳೆದುಕೊಂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಬಡವಾಗಿದೆ. ಹೀಗಾಗಿ ಈ ಎಲ್ಲಾ ಅರ್ಥಗರ್ಭಿತ ಚಿಂತನೆಗಳೊಂದಿಗೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ನಿರ್ಣಯಗಳನ್ನು ಯಾವುದೇ ಹಿಂಜರಿತವಿಲ್ಲದೇ ಕೈಗೊಳ್ಳಲಾಗುವುದು ಎಂದು ಡಾ. ಮಹೇಶ್ ಜೋಶಿ ಭರವಸೆ ನೀಡಿದರು.

Last Updated : Apr 9, 2022, 1:17 PM IST

ABOUT THE AUTHOR

...view details