ಕರ್ನಾಟಕ

karnataka

ಟಗರು ಸಾಕಣೆಯಲ್ಲಿ ಯಶ ಕಂಡ ಕನಕಾಪುರ ಗ್ರಾಮದ ರೈತ ಮಹಿಳೆ.. ಇವರು ಗಳಿಸುತ್ತಿರುವ ಆದಾಯವೆಷ್ಟು ಗೊತ್ತಾ?

By

Published : Jan 6, 2022, 7:48 AM IST

ಕನಕಾಪುರ ಗ್ರಾಮದ ಸಾಮಾನ್ಯ ಮಹಿಳೆ ಮಹಾದೇವಕ್ಕ ಹರಿಹರ ಎಂಬುವರು ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆದು ಟಗರು ಸಾಕಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಧಿಕ ಲಾಭ ಗಳಿಸುತ್ತಿದ್ದಾರೆ.

goat farming
ಟಗರು ಸಾಕಾಣಿಕೆಯಲ್ಲಿ ಯಶ ಕಂಡ ಮಹಾದೇವಕ್ಕ

ಹಾವೇರಿ: ಕೃಷಿ ಆಧಾರಿತ ಟಗರು ಸಾಕಣೆ ಉದ್ಯಮ ಹಾವೇರಿ ತಾಲೂಕಿನ ಕನಕಾಪುರ ಗ್ರಾಮದ ರೈತ ಮಹಿಳೆ ಮಹಾದೇವಕ್ಕ ಹರಿಹರ ಅವರಿಗೆ ಆರ್ಥಿಕ ಬಲ ತಂದುಕೊಟ್ಟಿದೆ.

ಕನಕಾಪುರ ಗ್ರಾಮದ ಸಾಮಾನ್ಯ ಮಹಿಳೆ ಮಹಾದೇವಕ್ಕ ಹರಿಹರ ಅವರಿಗೆ ಒಂದು ಗಂಡು, ಎರಡು ಹೆಣ್ಣು ಮಕ್ಕಳಿದ್ದಾರೆ. ಪತಿ ನಿಧನರಾಗುತ್ತಿದ್ದಂತೆ ದಿಕ್ಕು ದೋಚದಂತಾಗಿದ್ದ ಮಹಾದೇವಕ್ಕ , ಮನೆ ನಡೆಸಲು ಕಿರಾಣಿ ಅಂಗಡಿ ತೆರೆದರು. ಅದು ಸಹ ಕೊರೊನಾ ಬಂದ ಹಿನ್ನೆಲೆ ಲಾಭಕ್ಕಿಂತ ನಷ್ಟವೇ ಅಧಿಕವಾಯಿತು. ಇಂತಹ ಸಮಯದಲ್ಲಿ ಮಹಾದೇವಕ್ಕಳ ಕೈಹಿಡಿದಿದ್ದು ಟಗರು ಸಾಕಣೆ.

ಕನಕಾಪುರ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ 68 ಸಾವಿರ ರೂಪಾಯಿ ಕುರಿ ದೊಡ್ಡಿ ನಿರ್ಮಾಣಕ್ಕಾಗಿ ಹಣ ಬಿಡುಗಡೆಯಾಯಿತು. 68 ಸಾವಿರ ರೂಪಾಯಿಯಿಂದ ಕುರಿ ದೊಡ್ಡಿ ಕಟ್ಟಿದ ಮಹಾದೇವಕ್ಕ, ಆರಂಭದಲ್ಲಿ 13 ಕುರಿ ಮರಿಗಳನ್ನು ತಂದು ಸಾಕಣೆ ಆರಂಭಿಸಿದರು.

ಟಗರು ಸಾಕಣೆಯಲ್ಲಿ ಯಶ ಕಂಡ ಮಹಾದೇವಕ್ಕ

ಆರಂಭದ ಏಳು - ಬೀಳುಗಳನ್ನು ಸುಧಾರಿಸಿಕೊಂಡ ನಂತರ ತನ್ನ ದೊಡ್ಡಿಯಲ್ಲಿ ಸುಮಾರು 25 ಟಗರುಗಳ ಸಾಕಣೆ ಮಾಡುತ್ತಿದ್ದಾರೆ. ಟಗರು ಮರಿಗಳನ್ನ ಹಾವೇರಿ ಮಾರುಕಟ್ಟೆಯಿಂದ ತಂದು ದೊಡ್ಡಿಯಲ್ಲಿ ಮೇಯಿಸುತ್ತಾರೆ. ಟಗರು ದೊಡ್ಡದಾಗುತ್ತಿದ್ದಂತೆ ದೊಡ್ಡಿಗೆ ಬರುವ ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಆದಾಯಗಳಿಸುತ್ತಿದ್ದಾರೆ.

ಐದು ಸಾವಿರಕ್ಕೆ ಕುರಿ ಮರಿ ಖರೀದಿ 18-20 ಸಾವಿರಕ್ಕೆ ಮಾರಾಟ

ವರ್ಷದಲ್ಲಿ ಆರು ತಿಂಗಳಿಗೆ ಒಂದು ಬಾರಿಯಂತೆ ಎರಡು ಬಾರಿ ಟಗರು ಮರಿಗಳನ್ನು ತಂದು ದೊಡ್ಡ ಟಗರುಗಳನ್ನ ಮಾರಾಟ ಮಾಡಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಅದಾಯ ಗಳಿಸುತ್ತಿದ್ದಾರೆ. ಐದಾರು ಸಾವಿರ ರೂಪಾಯಿಗೆ ಟಗರು ಮರಿ ತಂದು ಅವುಗಳನ್ನು ಆರು ತಿಂಗಳು ಸಾಕಣೆ ಮಾಡಿ ನಂತರ 18 ರಿಂದ 20 ಸಾವಿರ ರೂಪಾಯಿಗೆ ಒಂದು ಟಗರು ಮಾರಾಟ ಮಾಡುತ್ತಿದ್ದಾರೆ.

ಇನ್ನು ಟಗರುಗಳು ನೀಡುವ ಗೊಬ್ಬರವನ್ನು ಸಹ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಗ್ರಾಮದ ರೈತರೊಬ್ಬರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಒಂದು ವರ್ಷದ ತನಕ ಬರುವ ಟಗರಿನ ಗೊಬ್ಬರವನದ್ನು ಆ ರೈತರಿಗೆ ನೀಡಿದ್ರೆ ಅವರು ಒಂದು ವರ್ಷ ಟಗರುಗಳಿಗೆ ಬೇಕಾಗುವ ಮೇವು ನೀಡುತ್ತಿದ್ದಾರೆ.

ಮಹಾದೇವಕ್ಕನ ಈ ಟಗರು ಸಾಕಣೆ ಕೆಲಸ ಗ್ರಾಮಸ್ಥರಿಗೆ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಮಹಾದೇವಕ್ಕನಿಗೆ ವರದಾನವಾಗಿ ಪರಿಣಮಿಸಿದೆ. ಜೊತೆಗೆ ಮನಸ್ಸಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಹಾದೇವಕ್ಕ ಉದಾಹರಣೆಯಾಗಿದ್ದಾರೆ.

ABOUT THE AUTHOR

...view details