ಕರ್ನಾಟಕ

karnataka

ಹೋಳಿ ಸಂಭ್ರಮ: ಈ ವರ್ಷವೂ ಜೀವಂತ ಕಾಮರತಿಯನ್ನು ನಗಿಸದ ಜನ

By

Published : Mar 7, 2023, 10:58 PM IST

ಹಾವೇರಿಯಲ್ಲಿ ವಿಶಿಷ್ಟ ಆಚರಣೆ - ಹೋಳಿ ಹಬ್ಬದ ಪ್ರಯುಕ್ತ ಜೀವಂತ ಕಾಮರತಿ ನಗಿಸುವ ಸ್ಪರ್ಧೆ- ಈ ವರ್ಷವೂ ಕಾಮರತಿಯನ್ನು ನಗಿಸದ ಜನರು

holi-celebration-at-haveri-unique-live-kamarathi-laughing-competition
ಹೋಳಿ ಸಂಭ್ರಮ :ಈ ವರ್ಷವೂ ಜೀವಂತ ಕಾಮರತಿಯನ್ನು ನಗಿಸದ ಜನ

ಹೋಳಿ ಸಂಭ್ರಮ :ಈ ವರ್ಷವೂ ಜೀವಂತ ಕಾಮರತಿಯನ್ನು ನಗಿಸದ ಜನ

ಹಾವೇರಿ :ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ರಂಗಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಹೋಳಿ ಹುಣ್ಣಿಮೆ ಬರುತ್ತಿದ್ದಂತೆ ಹಲವು ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಇಂತಹ ಆಚರಣೆಗಳಲ್ಲಿ ಒಂದು ಜೀವಂತ ಕಾಮ ಮತ್ತು ರತಿ ಸ್ಥಾಪನೆ ಮಾಡಲಾಗುತ್ತದೆ.

ಜೀವಂತ ಕಾಮರತಿ ನಗಿಸುವ ಸ್ಪರ್ಧೆ :ಜಿಲ್ಲೆಯ ರಾಣೆಬೆನ್ನೂರು ಮತ್ತು ಹಾವೇರಿ ನಗರದಲ್ಲಿ ಕಳೆದ ಕೆಲ ವರ್ಷಗಳಿಂದ ಜೀವಂತ ಕಾಮರತಿಯನ್ನು ಕುಳ್ಳಿರಿಸಲಾಗುತ್ತದೆ. ಅದಕ್ಕಾಗಿ ಒಂದು ವೇದಿಕೆ ಸಿದ್ದಪಡಿಸಿ ಅದರಲ್ಲಿ ಸಿಂಗಾರಗೊಂಡ ಕಾಮ ಮತ್ತು ರತಿಯನ್ನು ಕೂಡಿಸಲಾಗುತ್ತದೆ. ಈ ರೀತಿ ಕುಳ್ಳಿರಿಸಿ ಮನರಂಜನೆಗಾಗಿ ಅವರನ್ನು ನಗಿಸುವ ಸ್ಪರ್ಧೆ ಆಯೋಜಿಸಲಾಗುತ್ತದೆ. ಕಾಮರತಿಯನ್ನು ನಗಿಸಿದವರಿಗೆ ಆಕರ್ಷಕ ನಗದು ಬಹುಮಾನ ಇರಿಸಲಾಗಿರುತ್ತದೆ. ನಗದು ಬಹುಮಾನ ಗೆಲ್ಲಲು ಪ್ರೇಕ್ಷಕರು, ಅಭಿಮಾನಿಗಳು ದೂರ ದೂರದ ಊರುಗಳಿಂದ ಆಗಮಿಸಿ ಜೀವಂತ ಕಾಮ ರತಿ ನಗಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಮಹಿಳೆಯರು ಮಕ್ಕಳು ವೃದ್ದರು ಸೇರಿದಂತೆ ಎಲ್ಲರೂ ಪ್ರಯತ್ನಿಸಿದರೂ ಕಾಮ ರತಿ ಮಾತ್ರ ಇದುವರೆಗೆ ನಕ್ಕಿಲ್ಲ. ಹಾಡು,ಹಾಸ್ಯ ಚಟಾಕಿ, ನೃತ್ಯ ಸೇರಿದಂತೆ ಏನು ಮಾಡಿದರೂ ಇದುವರೆಗೆ ಕಾಮ ರತಿ ನಕ್ಕಿಲ್ಲ. ನಗಿಸಲು ಬಂದವರು ಎಷ್ಟೇ ಪ್ರಯತ್ನಪಟ್ಟರೂ ಕಾಮರತಿ ಒಂದು ಕಿರುನಗೆಯನ್ನು ಬೀರುವುದಿಲ್ಲ.

ರಾಣೆಬೆನ್ನೂರಿನಲ್ಲಿ ಕಳೆದ 64 ವರ್ಷಗಳಿಂದ ಜೀವಂತ ಕಾಮರತಿ ಕುಳ್ಳಿರಿಸಲಾಗುತ್ತಿದೆ. ಪ್ರತಿವರ್ಷ ನಗರದ ಒಂದೊಂದು ಪ್ರದೇಶದಲ್ಲಿ ಕುಳ್ಳಿರಿಸಿ ಅವರ ನಗಿಸುವ ಪ್ರಯತ್ನ ಮಾಡಲಾಗುತ್ತದೆ. ಪ್ರಸ್ತುತ ವರ್ಷ ರತಿ ಪಾತ್ರಧಾರಿಯಾಗಿ ಕುಮಾರ ಹಡಪದ ಮತ್ತು ಕಾಮನ ಪಾತ್ರಧಾರಿಯಾಗಿ ಗದಿಗೆಪ್ಪ ದೊಡ್ಡಪ್ಪನವರ ಕುಳ್ಳಿರಿಸಲಾಗಿತ್ತು. ಇಬ್ಬರನ್ನು ನಗಿಸಿದವರಿಗೆ ಸುಮಾರು ನಾಲ್ಕು ಲಕ್ಷ ನಾಲ್ಕು ಸಾವಿರ ರೂಪಾಯಿ ಬಹುಮಾನ ಇಡಲಾಗಿತ್ತು. ನಗಿಸಲು ಬಂದವರೇ ನಗೆಪಾಟಲಿಗೆ ಒಳಗಾದರೆ ಹೊರತು ಕಾಮ ಮತ್ತು ರತಿ ಮಾತ್ರ ತುಟಿ ಪಿಟಿಕ್ ಎನ್ನಲಿಲ್ಲ.

ಹಾವೇರಿಯಲ್ಲೂ ಭರ್ಜರಿ ಆಚರಣೆ:ಇನ್ನು ಹಾವೇರಿ ನಗರದಲ್ಲಿ ಈ ರೀತಿ ಜೀವಂತ ಕಾಮ ರತಿಯನ್ನು ಕಳೆದ 11 ವರ್ಷದಿಂದ ಕುಳ್ಳಿರಿಸಲಾಗುತ್ತದೆ. ಪ್ರಸ್ತುತ ವರ್ಷ ಹಾವೇರಿಯ ಯಾಲಕ್ಕಿ ಓಣಿಯಲ್ಲಿ ಜೀವಂತ ಕಾಮ ರತಿಯನ್ನು ಕುಳ್ಳಿರಿಸಲಾಗಿತ್ತು. ಕಾಮನಾಗಿ ಗೂರಪ್ಪ ಶೀಮಿಕೇರಿ ಮತ್ತು ರತಿಯಾಗಿ ಲೈಂಗಿಕ ಅಲ್ಪಸಂಖ್ಯಾತೆ ತನುಶ್ರೀಯನ್ನು ಕುಳ್ಳಿರಿಸಲಾಗಿತ್ತು. ಹಾವೇರಿಯಲ್ಲಿ ಕುಳ್ಳಿರಿಸಿದ ಜೀವಂತ ಕಾಮರತಿ ನಗಿಸಲು ಆರಂಭದಲ್ಲಿ ಐದು ಸಾವಿರ ಬಹುಮಾನ ಇಡಲಾಗಿತ್ತು.

ಆದಾದ ಬಳಿಕ ಬಹುಮಾನದ ಮೊತ್ತವನ್ನು ಏರಿಕೆ ಮಾಡಿದರೂ ಯಾರೂ ಕೂಡ ಕಾಮ ರತಿಯನ್ನು ನಗಿಸುವಲ್ಲಿ ಸಫಲರಾಗಲಿಲ್ಲ. ಈ ಸಂದರ್ಭದಲ್ಲಿ ಚಿಕ್ಕಮಕ್ಕಳು ಹಾಡು ಹೇಳುವ ಮೂಲಕ ನಗಿಸಲು ಮುಂದಾದರು. ಇನ್ನು ಕೆಲವರು ಸಿನಿಮಾ ಡೈಲಾಗ್ ಹೇಳಿದರು. ಕೆಲವರು ನರ್ತಿಸಿದರೂ ಸಹ ಕಾಮ ರತಿ ನಗಲಿಲ್ಲ. ಆದರೆ, ಕಾಮರತಿಯನ್ನು ನೋಡಲು ಬಂದಿದ್ದ ಸಾವಿರಾರು ಜನ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

ಈ ಕುರಿತಂತೆ ಮಾತನಾಡಿದ ಕಾಮ ಪಾತ್ರಧಾರಿ ಗೂರಣ್ಣ ಶೀಮಿಕೇರಿ, ಕಳೆದ 10 ವರ್ಷಗಳಿಂದ ನಾನು ಕಾಮನ ಪಾತ್ರದಾರಿಯಾಗಿ ನಟನೆ ಮಾಡುತ್ತಿದ್ದೇನೆ. ರತಿ ಪಕ್ಕದಲ್ಲಿ ನಾನು ಕುಳಿತ ಬಳಿಕ ನನಗೆ ಯಾವುದೇ ರೀತಿಯ ನಗು ಬರುವುದಿಲ್ಲ. ರತಿ ಪಕ್ಕದಲ್ಲಿರುವವರೆಗೆ ಮುಖದಲ್ಲಿ ಗಂಭೀರತೆ ಇರುತ್ತದೆ. ಪ್ರೇಕ್ಷಕರು ಯಾವುದೇ ರೀತಿಯ ನಗೆ ಚಟಾಕಿ ಹಾರಿಸಿದರೂ ನಾನು ನಗುವದಿಲ್ಲ. ಆದೇನೋ ಗೊತ್ತಿಲ್ಲ ಉಳಿದ ದಿನ ನಾನು ಸರಿಯಾಗಿಯೇ ಇರುತ್ತೇನೆ ಎನ್ನುತ್ತಾರೆ.

ಇನ್ನು ರತಿ ಪಾತ್ರದಾರಿ ತನುಶ್ರೀ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಾನು ಲೈಂಗಿಕ ಅಲ್ಪಸಂಖ್ಯಾತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಳೆದ 10 ವರ್ಷದಿಂದ ರತಿ ಪಾತ್ರಧಾರಿಯಾಗಿ ಕುಳಿತುಕೊಳ್ಳುತ್ತಿದ್ದೇನೆ. ಆದರೆ ಪ್ರೇಕ್ಷಕರ ಯಾವುದೇ ರೀತಿಯ ಹಾಸ್ಯಕ್ಕೂ ನಾನು ನಗುವುದಿಲ್ಲ. ಓರ್ವ ಲೈಂಗಿಕ ಅಲ್ಪಸಂಖ್ಯಾತೆಗೆ ಈ ರೀತಿಯ ಸ್ಥಾನ ನೀಡಿದ್ದಕ್ಕೆ ಹೋಳಿ ಆಚರಣೆ ಸಮಿತಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಮದುವೆಯಾಗದೇ ಇರುವ ಪುರುಷ ಅಥವಾ ಮಹಿಳೆಯರಿಗೆ ಈ ಸಂದರ್ಭದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಂದ ಕಂಕಣ ಕಟ್ಟಿಸಲಾಗುತ್ತದೆ. ಈ ರೀತಿ ಮಾಡಿದರೆ ಮದುವೆಯಾಗದವರಿಗೆ ಮದುವೆಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಮಕ್ಕಳಾಗದ ದಂಪತಿಗೆ ಲೈಂಗಿಕ ಅಲ್ಪಸಂಖ್ಯಾತರಿಂದ ಉಡಿ ತುಂಬಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ :ಬೆಳಗಾವಿ, ಕಾರವಾರದಲ್ಲಿ ಸಂಭ್ರಮದ ಹೋಳಿ ಆಚರಣೆ, ಬಣ್ಣದಲ್ಲಿ ಮಿಂದೆದ್ದ ಜನತೆ

ABOUT THE AUTHOR

...view details