ದಾವಣಗೆರೆ/ ಹಾವೇರಿ : ಕೇಂದ್ರ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ತಡೆ ಬೆಂಬಲಿಸಿ ಹಾವೇರಿಯಲ್ಲಿ ರೈತರು ಹೆದ್ದಾರಿ ತಡೆ ನಡೆಸಿದರು.
ದಾವಣಗೆರೆ, ಹಾವೇರಿಯಲ್ಲಿ ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. 12 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆದಿದ್ದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಟೋಲ್ ಗೇಟ್ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನೂ ದಾವಣಗೆರೆ ತಾಲೂಕಿನ ಹೆಚ್ ಕಲಪನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 04 ರಲ್ಲಿ ನಡೆದ ರೈತರ ಹೆದ್ದಾರಿ ತಡೆಯಿಂದ ಜನ ಸಾಮಾನ್ಯರು ತೊಂದರೆ ಅನುಭವಿಸಿದರು. ಕೆಎಸ್ಆರ್ಟಿಸಿ ಹಾಗೂ ಕೆಲ ಖಾಸಗಿ ಬಸ್ ಸೇರಿದಂತೆ ಕಾರುಗಳಲ್ಲಿ ಪ್ರಯಾಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಟೆಗಟ್ಟಲೆ ರಸ್ತೆ ತಡೆ ಮಾಡಿದ್ದರಿಂದ ಆಸ್ಪತ್ರೆಗೆ ತೆರಳಬೇಕಾದವರು ತೊಂದರೆ ಅನುಭವಿಸಿದರು, ಇನ್ನು ಕೆಲವರು ಅಂತಿಮ ಸಂಸ್ಕಾರಕ್ಕೆ ತೆರಳಬೇಕಾದವರು ಕೂಡ ರಸ್ತೆ ತಡೆಯಿಂದ ತೊಂದರೆ ಅನುಭವಿಸಿ ಬಸ್ ನಿಂದ ಇಳಿದು ಹೆಜ್ಜೆ ಹಾಕಿದರು. ಇನ್ನು ಕೆಲವರು ರೈತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರೊಂದಿಗೆ ವಾಗ್ವಾದಕ್ಕೆ ಇಳಿದರು.
ಓದಿ : ಕೃಷಿ ಕಾಯ್ದೆ ವಿರೋಧಿಸಿ 'ಚಕ್ಕಾ ಜಾಮ್': ಭಾರೀ ಪೊಲೀಸ್ ಭದ್ರತೆ, ಹೆದ್ದಾರಿ ಬಂದ್ ಮಾಡಿ ರೈತರ ಪ್ರೊಟೆಸ್ಟ್