ಹಾವೇರಿ:ಮಾಜಿ ಸಚಿವ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಹಾನಗಲ್ ಉಪಚುನಾವಣೆಗೆ ಡೇಟ್ ಫಿಕ್ಸ್ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣಾ ದಿನಾಂಕ ನಿಗದಿಯಾಗಿದೆ. ಅ. 8 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ಅ.30ರಂದು ಮತದಾನ ನಡೆಯಲಿದೆ. ನ.02ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸಿವೆ.
ಮಾಜಿ ಸಚಿವ ಸಿ.ಎಂ ಉದಾಸಿ ಅವರ ಸ್ಥಾನಕ್ಕೆ ಅವರ ಸೊಸೆ ರೇವತಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಉದಾಸಿ ಕುಟುಂಬ ಎಲ್ಲಿಯೂ ಸಹ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿಲ್ಲ. ಈ ಮಧ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಸೇರಿದಂತೆ 8 ಹೆಸರುಗಳು ಅಭ್ಯರ್ಥಿಗಳ ಆಕಾಂಕ್ಷಿ ಪಟ್ಟಿಯಲ್ಲಿವೆ.
ಕಾಂಗ್ರೆಸ್‌ನಲ್ಲಿ ಸಹ ಅಭ್ಯರ್ಥಿ ಆಯ್ಕೆ ಸುಲಭವಿಲ್ಲ. ಕಳೆದ ಭಾರಿ ಸಿ.ಎಂ.ಉದಾಸಿಗೆ ಬಾರಿ ಪೈಪೋಟಿ ನೀಡಿದ್ದ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾನಗಲ್‌ನಲ್ಲಿ ಮನೆ ಮಾಡಿ ಈಗಾಗಲೇ ಚುನಾವಣೆಗೆ ಬಾರಿ ಸಿದ್ಧತೆ ನಡೆಸಿದ್ದಾರೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಮಾನೆ ತಿಳಿಸಿದ್ದಾರೆ.
ಇನ್ನು ಉದಾಸಿಯವರಿಗೆ ಪ್ರಬಲ ಎದುರಾಳಿಯಾಗಿದ್ದ ಕಾಂಗ್ರೆಸ್ ಮನೋಹರ್ ತಹಶೀಲ್ದಾರ್ ಇದೀಗ ಹೊಸ ವರಸೆ ಆರಂಭಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಅದು ಹಿರಿಯತನಲ್ಲಿ ನನಗೆ ಸಿಗಲಿ, ಇಲ್ಲದಿದ್ದರೆ ಯುವಕರಿಗೆ ಸಿಗಬೇಕು ಎಂದಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಯುವ ಮುಖಂಡ ಪ್ರಕಾಶಗೌಡ ಪಾಟೀಲ್ ಸಹ ತಾವು ಟಿಕೆಟ್ ಆಕಾಂಕ್ಷಿ ಎಂದೇಳಿದ್ದಾರೆ.
ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿದ್ದರೆ, ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿ ಹೆಸರನ್ನು ಘೋಷಿಸಿದೆ. ನಿಯಾಜ್ ಶೇಕ್ ಎಂಬುವವರು ಈ ಬಾರಿ ತೆನೆಯಿಂದ ಸ್ಪರ್ಧೆಗಿಳಿದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಸಿಎಂ ಬೊಮ್ಮಾಯಿಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ: ಜೈಲಿನಲ್ಲಿ ಗನ್, ಸ್ಫೋಟಕ, ಚಾಕುಗಳಿಂದ ಮಾರಾಮಾರಿ: 24 ಮಂದಿ ಸಾವು, 48 ಮಂದಿಗೆ ಗಾಯ