ಕರ್ನಾಟಕ

karnataka

ರೈತರ ಕೈ ಹಿಡಿದ ಆಲೆಮನೆ; ಸಕ್ಕರೆ ಕಾರ್ಖಾನೆಗಿಂತ ಅಧಿಕ ಲಾಭ

By

Published : Dec 9, 2022, 6:49 PM IST

ಸಕ್ಕರೆ ಕಾರ್ಖಾನೆಗೆ ಸೆಡ್ಡು ಹೊಡೆದು ಪ್ರಾರಂಭಿಸಿದ ಆಲೆಮನೆ ಕಬ್ಬು ಬೆಳೆಗಾರರಿಗೆ ಲಾಭ ತಂದು ಕೊಟ್ಟಿದೆ. ಇಲ್ಲಿ ತಯಾರಾದ ಬೆಲ್ಲ ಹಾವೇರಿ ಮತ್ತು ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಮಾರಾಟವಾಗುತ್ತಿದೆ.

farmers-getting-more-profit-in-alemane
ರೈತರ ಕೈ ಹಿಡಿದ ಆಲೆಮನೆ; ಸಕ್ಕರೆ ಕಾರ್ಖಾನೆಗಿಂತ ಅಧಿಕ ಲಾಭ ಪಡೆಯುತ್ತಿರುವ ರೈತರು

ಹಾವೇರಿ:ಜಿಲ್ಲೆಯಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆಯು ಸಂಗೂರು ಗ್ರಾಮದ ಬಳಿ ಆರಂಭಗೊಂಡು ಸುಮಾರು 4 ದಶಕಗಳು ಗತಿಸಿವೆ. ಆರಂಭದಲ್ಲಿ ಕಬ್ಬು ಬೆಳೆಗಾರರಿಗೆ ಲಾಭ ತರುತ್ತಿದ್ದ ಕಾರ್ಖಾನೆ ನಂತರ ನಷ್ಟದ ಹಾದಿ ಹಿಡಿಯಿತು. ಅಲ್ಲದೇ ಕಾರ್ಖಾನೆಗೆ ಕಬ್ಬು ಸಾಗಿಸುವುದು, ಅದಕ್ಕೊಂದು ದರ ನಿಗದಿ ಮಾಡುವುದರಲ್ಲೇ ಕಾಲ ಕಳೆದು ವರ್ಷಗಳುರುಳಿದರೂ ಕಬ್ಬಿನ ಬಾಕಿ ಹಣ ಸಿಗದೆ ರೈತರು ಕಂಗಾಲಾಗಿದ್ದರು.

ಈ ಎಲ್ಲಾ ವಿಚಾರಗಳಿಂದ ನೊಂದ ಕಬ್ಬು ಬೆಳೆಗಾರರು ತಾವೇ ಸ್ವಂತ ಆಲೆಮನೆ ಆರಂಭಿಸಿದರು. ಸಕ್ಕರೆ ಕಾರ್ಖಾನೆಗೆ ಸೆಡ್ಡು ಹೊಡೆದು ಪ್ರಾರಂಭಿಸಿದ ಆಲೆಮನೆ ಕಬ್ಬು ಬೆಳೆಗಾರರಿಗೆ ಲಾಭ ತಂದು ಕೊಟ್ಟಿದೆ. ಪರಿಣಾಮವಾಗಿ ಹಾನಗಲ್​ ತಾಲೂಕಿನಲ್ಲೇ 25 ಕ್ಕೂ ಅಧಿಕ ಆಲೆಮನೆಗಳಿವೆ.

ಆಲೆಮನೆಯಲ್ಲಿ ತಯಾರಾದ ಬೆಲ್ಲ

ಬೆಲ್ಲ ತಯಾರಿಸುವ ವಿಧಾನ: ರೈತರು ಜಮೀನಿನಿಂದ ತಂದ ಕಬ್ಬಿನಿಂದ ಹಾಲು ತೆಗೆಯಲಾಗುತ್ತದೆ. ನಂತರ ಕೊಪ್ಪರಿಗೆಯಲ್ಲಿ ಬಿಸಿ ಮಾಡಿ ಅದರಲ್ಲಿನ ತ್ಯಾಜ್ಯವನ್ನು ತೆಗೆಯಲಾಗುತ್ತದೆ. ಅಲ್ಲಿ ಮತ್ತಷ್ಟು ಶಾಖದಲ್ಲಿ ಕುದಿಯುವ ಕಬ್ಬಿನ ಹಾಲನ್ನು ತೆಗೆದು ಮೂರನೆಯ ಕೊಪ್ಪರಗಿ ಹಾಕಿ, ಬೆಲ್ಲದ ಹದ ಬರುವವರಿಗೆ ಕಬ್ಬಿನ ಹಾಲನ್ನು ಕಾಯಿಸಲಾಗುತ್ತದೆ. ಬಳಿಕ ಮೂರನೆಯ ಕೊಪ್ಪರಗಿಯಿಂದ ಬೆಲ್ಲದ ಪಾಕವನ್ನು ಕಲ್ಲಿನ ಚೌಕಟ್ಟಿನಲ್ಲಿ ಹಾಸಿ, 15 ನಿಮಿಷ ಹಾಗೆಯೇ ಬಿಟ್ಟರೆ ಬೆಲ್ಲ ರೆಡಿ. ಈ ರೀತಿ ತಯಾರಿಸಿದ ಬೆಲ್ಲವನ್ನು ಬಕೆಟ್​ನಲ್ಲಿ ಕಟ್ಟಿಗೆ ಚೌಕಗಳಲ್ಲಿ ಹಾಕುತ್ತಾರೆ.

ಆರಂಭದಲ್ಲಿ ಕಾರ್ಖಾನೆಗಿಂತ ಅಧಿಕ ಆದಾಯ ಬರುತ್ತಿದ್ದರಿಂದ ಹಲವಾರು ಜನ ಆಲೆಮನೆ ಆರಂಭಿಸಿದ್ದರು. ಆಲೆಮನೆ ಮಾಲೀಕರು ತಮ್ಮ ಜಮೀನಿನ ಅಲ್ಲದೇ ಬೇರೆ ಜಮೀನಿನ ಕಬ್ಬನ್ನು ಸಹ ತಮ್ಮ ಆಲೆಮನೆಯಲ್ಲಿ ನುರಿಸಿ ಕೊಡುತ್ತಿದ್ದರು. ಆದರೆ ಪ್ರಸ್ತುತ ಬೆಲೆ ಏರಿಳಿತ ಸ್ವಲ್ಪ ನಷ್ಟದ ಕಡೆ ಮುಖಮಾಡುವಂತೆ ಮಾಡಿದೆ. ಸಕ್ಕರೆ ಕಾರ್ಖಾನೆ ನಿಗದಿಮಾಡಿದ ಹಣಕ್ಕಿಂತ ಸ್ವಲ್ಪ ಏರಿಕೆದರದಲ್ಲಿ ಆಲೆಮನೆ ಮಾಲೀಕರು ರೈತರಿಂದ ಕಬ್ಬು ಖರೀದಿಸಿ ಬೆಲ್ಲ ತಯಾರಿಸುತ್ತಿದ್ದಾರೆ.

ರೈತರ ಕೈ ಹಿಡಿದ ಆಲೆಮನೆ

ಈ ಕೆಲಸ ಮಾಡಲು ಉತ್ತರ ಪ್ರದೇಶದಿಂದ ಕೂಲಿ ಕಾರ್ಮಿಕರು ಬರುತ್ತಾರೆ. ಅವರಿಗೆ ಕ್ವಿಂಟಲ್‌​ ಬೆಲ್ಲ ತಯಾರಿಸಿದರೆ ಇಷ್ಟು ಹಣ ಎಂದು ನಿಗದಿ ಮಾಡಲಾಗುತ್ತದೆ. ಸುಮಾರು 8 ಜನರ ಗುಂಪು ದಿನಕ್ಕೆ 15 ಟನ್ ಕಬ್ಬು ನುರಿಸಿ 15 ಕ್ವಿಂಟಲ್ ಬೆಲ್ಲ ತಯಾರಿಸುತ್ತಾರೆ. ಈ ರೀತಿ ತಯಾರಿಸಿದ ಬೆಲ್ಲವನ್ನು ರಟ್ಟಿನ ಬಾಕ್ಸ್​​ನಲ್ಲಿಟ್ಟು ಮಾರಾಟ ಮಾಡಲಾಗುತ್ತದೆ. ಹಾವೇರಿ ಮತ್ತು ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಇಲ್ಲಿ ತಯಾರಾದ ಬೆಲ್ಲ ಪೂರೈಕೆಯಾಗುತ್ತಿದೆ.

ಇದನ್ನೂ ಓದಿ:ಸಂಭ್ರಮಕ್ಕೆ ಸಾಕ್ಷಿಯಾದ‌ ಆಲೆಮನೆ ಹಬ್ಬ: ನೊರೆ ಹಾಲು, ಜೋನಿ ಬೆಲ್ಲ ಸವಿದು ಖುಷಿಪಟ್ಟ ಜನ

ABOUT THE AUTHOR

...view details