ಕರ್ನಾಟಕ

karnataka

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ: ಗಂಡನ ಮನೆಯವರ ಮೇಲೆ ಸಂಬಂಧಿಕರ ಆರೋಪ

By

Published : Jul 12, 2023, 5:33 PM IST

Updated : Jul 12, 2023, 7:15 PM IST

ಚನ್ನರಾಯಪಟ್ಟಣ ತಾಲೂಕಿನ ನಟ್ಟೆಕೆರೆ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಆದರೆ, ಇದು ಸಹಜ ಸಾವಲ್ಲ, ಅಸಹಜ ಸಾವು ಎಂದು ಆಕೆಯ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

Married Woman Suspicious Death In Hassan
Married Woman Suspicious Death In Hassan

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ

ಹಾಸನ:ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ನಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ. ಅನುಷಾ (21) ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ. ಕಳೆದ ನಾಲ್ಕು ವರ್ಷಗಳ ಹಿಂದೆ ಚನ್ನರಾಯಪಟ್ಟಣ ತಾಲೂಕಿನ ನಟ್ಟೆಕೆರೆ ಗ್ರಾಮದ ಕಿರಣ್ ಜೊತೆ ಅನುಷಾ ವಿವಾಹವಾಗಿತ್ತು. ಆದರೆ, ಸೋಮವಾರ ಅನುಷಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸದ್ಯ ಈ ಸಾವಿನ ಬಗ್ಗೆ ಆಕೆಯ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ದೂರು ದಾಖಲು ಮಾಡಿದ್ದಾರೆ.

''ಹೃದಯಘಾತದಿಂದ ಅನುಷಾ ಮೃತಪಟ್ಟಿರುವ ಬಗ್ಗೆ ಸೋಮವಾರ ರಾತ್ರಿ ನಮಗೆ ಮಾಹಿತಿ ಬಂದಿತು. ಗಂಡನ ಮನೆಯವರು ಮಂಗಳವಾರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಆದರೆ, ಅನುಷಾಳ ಮೃತದೇಹ ಕಂಡು ನಮಗೆ ಅನುಮಾನ ಬಂದಿದೆ. ಅವಳ ಸಾವು ಸಹಜ ಸಾವಲ್ಲ, ಇದು ಹೃದಯಘಾತವೂ ಅಲ್ಲ. ಸಾವಿನ ಬಗ್ಗೆ ನಮಗೆ ಅನುಮಾನ ವ್ಯಕ್ತವಾಗುತ್ತಿದೆ'' ಎಂದು ಗಂಡನ ಮನೆಯವರ ವಿರುದ್ಧ, ಮೃತ ವಿವಾಹಿತ ಮಹಿಳೆ ಅನುಷಾ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

''ಹೃದಯಘಾತವಾಗಿ ಅನುಷಾ ಅರ್ಧ ಗಂಟೆಯಲ್ಲಿ ಮೃತಪಟ್ಟಿದ್ದಾರೆ ಎಂದು ಗಂಡನ ಮನೆಯವರು ನಮಗೆ ಮಾಹಿತಿ ನೀಡಿದರು. ಸುದ್ದಿ ತಿಳಿದು ಬಹಳ ನೋವಾಯಿತು. ತಕ್ಷಣ ನಾವು, ನಮ್ಮ ಸಂಬಂಧಿಕರು ಸೇರಿದಂತೆ ಗ್ರಾಮದವರೆಲ್ಲ ನಟ್ಟೆಕೆರೆಗೆ ಹೋದೆವು. ಆದರೆ, ಅಲ್ಲಿ ನಮಗೆ ಅವಳ ಮೃತದೇಹ ನೋಡಲು, ಮುಟ್ಟಲು ಯಾವುದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಹಾಗಾಗಿ ಅವರ ಸಾವಿನ ಬಗ್ಗೆ ನಮಗೆ ಅನುಮಾನ ವ್ಯಕ್ತವಾಗುತ್ತಿದೆ. ತಕ್ಷಣ ನುಗ್ಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದೆವು. ಬಳಿಕ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಅವರ ಮೃತದೇಹವನ್ನು ಶಿಫ್ಟ್​ ಮಾಡಲಾಯಿತು. ಆದರೆ, ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಹೆಚ್ಚಿನ ತನಿಖೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದರು''.

''ಹಾಸನಕ್ಕೆ ಬಂದ ಬಳಿಕ ಅನುಷಾಳ ಮೃತದೇಹ ನೋಡಿದೆವು. ಆಗ ಆಕೆಯ ಕತ್ತಿನಲ್ಲಿ ಮಾರ್ಕ್​ ಆಗಿದ್ದು ಕಂಡು ಬಂದಿತು. ನಮಗೆ ಆಕೆಯ ಸಾವಿನ ಬಗ್ಗೆ ಅನುಮಾನ ದಟ್ಟವಾಗಿದ್ದರಿಂದ ಎಸ್​ಪಿ ಕಚೇರಿಗೆ ತೆರಳಿ ನಮ್ಮ ನೋವು ಹೇಳಿಕೊಂಡೆವು. ಮೃತ ತಾಯಿಗೆ ಎರಡು ವರ್ಷದ ಮಗು ಇದೆ. ಅನುಷಾಗೆ ತಂದೆ ಇಲ್ಲ. ತಾಯಿ ಮಾತ್ರ ಇದ್ದು ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

ಹಾಗಾಗಿ ನಮಗೆ ನ್ಯಾಯ ಬೇಕೆಂದು ಅವರ ಮುಂದೆ ಹೇಳಿಕೊಂಡೆವು. ಇದರಿಂದ ಎಸ್​ಪಿ ಅವರು ನಮ್ಮ ಮುಂದೆಯೇ ಮರಣೋತ್ತರ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ಒಟ್ಟಿನಲ್ಲಿ ನಮಗೆ ನ್ಯಾಯ ಬೇಕು. ಮರಣೋತ್ತರ ಪರೀಕ್ಷಾ ವರದಿ ಏನೇ ಬರಲಿ, ಅವಳ ಸಾವಿನಲ್ಲಿ ನಮಗೆ ಅನುಮಾನವಿದೆ. ಒಂದು ವೇಳೆ ನಮ್ಮ ಅನುಮಾನ ನಿಜವೇ ಆಗಿದ್ದರೆ ಆರೋಪಿಗಳಿಗೆ ತಕ್ಷ ಶಿಕ್ಷೆ ಆಗಬೇಕು'' ಎಂದು ಮೃತ ವಿವಾಹಿತ ಮಹಿಳೆಯ ಸಂಬಂಧಿ ಪುಪ್ಪಲತಾ ನಗರದ ಶವಾಗಾರದ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಸಂಬಂಧಿಕರಿಂದಲೇ ಮಹಿಳೆ ಬರ್ಬರ ಹತ್ಯೆ: ರಕ್ಷಣೆಗೆ ಧಾವಿಸಿದ ನಾಲ್ವರು ಮಕ್ಕಳಿಗೆ ಗಂಭೀರ ಗಾಯ

Last Updated : Jul 12, 2023, 7:15 PM IST

ABOUT THE AUTHOR

...view details