ಕರ್ನಾಟಕ

karnataka

ಹಾಸನ ನಗರಸಭೆ ಸದಸ್ಯನ ಕೊಲೆ: ಇಬ್ಬರ ಬಂಧನ

By

Published : Jun 2, 2022, 1:22 PM IST

ನಗರಸಭೆ ಸದಸ್ಯ, ಜೆಡಿಎಸ್ ನಾಯಕ ಪ್ರಶಾಂತ್ ನಾಗರಾಜ ಕೊಲೆ ಪ್ರಕರಣ ಸಂಬಂಧ ಪೂರ್ಣಚಂದ್ರ ಮತ್ತು ಅರುಣ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ನಗರಸಭೆ ಸದಸ್ಯನ ಕೊಲೆ
ಹಾಸನ ನಗರಸಭೆ ಸದಸ್ಯನ ಕೊಲೆ

ಹಾಸನ: ಜೆಡಿಎಸ್ ಪಕ್ಷದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ ಕೊಲೆ ಪ್ರಕರಣದ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಾಲಿ ನಗರಸಭಾ ಸದಸ್ಯ ಪ್ರಶಾಂತ್​ ಅವರು ಬುಧವಾರ ಕೆಲಸ ಮುಗಿಸಿಕೊಂಡು ತಮ್ಮ ಮನೆಯತ್ತ ಹೊರಟಿದ್ದ ವೇಳೆ ಲಕ್ಷ್ಮಿಪುರ ಬಡಾವಣೆ ಜವನಹಳ್ಳಿ ಮಠದ 3ನೇ ಕ್ರಾಸ್ ಬಳಿ ಆಟೋದಲ್ಲಿ ಬಂದ ಪೂರ್ಣ ಚಂದ್ರ, ಅರುಣ್ ಹಾಗೂ ಸಹಚರರು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಸ್ಥಳದಲ್ಲಿಯೇ ಕೊಚ್ಚಿ ಕೊಲೆಗೈದಿದ್ದರು.

ಪ್ರಕರಣದ ಬಳಿಕ ಜೆಡಿಎಸ್ ನಾಯಕ ರೇವಣ್ಣ ಹಾಗೂ ಕಾರ್ಯಕರ್ತರು, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಅಲ್ಲಿಯವರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದಂತೆ ಪಟ್ಟುಹಿಡಿದಿದ್ದರು. ಇಂದು ಬೆಳಗ್ಗೆ ಕೂಡ ಪ್ರಜ್ವಲ್ ರೇವಣ್ಣ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಅಂತ ಆಗ್ರಹ ಮಾಡಿದರು. ಇಡೀ ರಾತ್ರಿ ವಿಶೇಷ ತಂಡಗಳನ್ನು ರಚನೆ ಮಾಡಿ 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ:ಕೆರೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ ಪೂರ್ಣಚಂದ್ರ ಅವರ ಪತ್ನಿಗೂ ಕೊಲೆಯಾದ ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜ್ ಮಧ್ಯೆ ಸಂಬಂಧ ಇತ್ತು ಎನ್ನಲಾಗಿದೆ. ಇತ್ತೀಚಿಗೆ ಆರೋಪಿಯ ಪತ್ನಿ ಹೆಸರಲ್ಲಿದ್ದ ಸೈಟ್ ಮಾರಾಟ ಮಾಡಿಸಿದ್ದು, ಈ ವಿಚಾರವಾಗಿ ಪೂರ್ಣಚಂದ್ರ ಮತ್ತು ಪ್ರಶಾಂತ್ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಬಳಿಕ ಕೆಲವರ ಸಮ್ಮುಖದಲ್ಲಿ, ರಾಜಿ ಪಂಚಾಯಿತಿ ಮಾಡಲಾಗಿತ್ತು ಎನ್ನಲಾಗಿದೆ. ಪ್ರಮುಖ ಆರೋಪಿ ಪೂರ್ಣಚಂದ್ರ ಸೇಡು ತೀರಿಸಿಕೊಳ್ಳಲು ಆತನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ವಾರಗಟ್ಟಲೆ ಆತನ ಚಲನವಲನಗಳನ್ನು ವೀಕ್ಷಣೆ ಮಾಡಿ ನಿನ್ನೆ ಒಂಟಿಯಾಗಿ ಮನೆ ಕಡೆಗೆ ಹೋಗುವಾಗ ಜವನಹಳ್ಳಿ ಮಠದ ರಸ್ತೆಯಲ್ಲಿ ಯಾರು ಇಲ್ಲದ ವೇಳೆ ಪ್ರಶಾಂತ್ ಬೈಕ್ ಅಡ್ಡಗಟ್ಟಿ ತನ್ನ ಸಹಚರರೊಂದಿಗೆ ಹಲ್ಲೆ ಮಾಡಿ ಸ್ಥಳದಲ್ಲಿಯೇ ಬರ್ಬರವಾಗಿ ಕೊಚ್ಚಿ ಪರಾರಿಯಾಗಿದ್ದರು.

ಇನ್ನು ಈ ಸಂಬಂಧ ಪ್ರಮುಖ ಆರೋಪಿಯಾಗಿ ಪೂರ್ಣಚಂದ್ರ ಹಾಗೂ ಅರುಣ್ ಎಂಬಾತನನ್ನು ಬಂಧಿಸಿ, ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸುವ ವಿಶ್ವಾಸವನ್ನು ಪೊಲೀಸ್ ಇಲಾಖೆ ವ್ಯಕ್ತಪಡಿಸಿದೆ.

(ಇದನ್ನೂ ಓದಿ: ಹಾಸನ ನಗರಸಭೆ ಸದಸ್ಯನ ಬರ್ಬರ ಕೊಲೆ.. ಆಟೋದಲ್ಲಿ ಬಂದು ರಸ್ತೆಯಲ್ಲೇ ಕೊಚ್ಚಿ ಕೊಂದ್ರು!)

ABOUT THE AUTHOR

...view details