ಹಾಸನ:ಕಳೆದೊಂದು ವಾರದಿಂದ ಬೆಳಗ್ಗೆ ಎದ್ದ ತಕ್ಷಣ ದೇವರ ಮುಖ ನೋಡುವುದನ್ನು ಬಿಟ್ಟು ಬೇರೆ ಇನ್ನೇನೋ ನೋಡಲಾಗುತ್ತದೆ. ದಯಮಾಡಿ ಡ್ರಗ್ಸ್ ದಂಧೆ ಬಗ್ಗೆ ಪ್ರಸಾರ ಮಾಡುತ್ತಿರುವುನ್ನು ನಿಲ್ಲಿಸಿ ಎಂದು ಮಾಧ್ಯಮಗಳ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಟಿವಿಯಲ್ಲಿ ಪ್ರಸಾರವಾಗುತ್ತಿರುವ ಡ್ರಗ್ಸ್ ದಂಧೆ ಬಗ್ಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅದರ ಬಗ್ಗೆ ಒಂದು ವಾರ ತೋರಿಸಿದ್ದೀರಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ನಿಜ. ಈ ವಿಷಯವನ್ನು ಬಿಟ್ಟು ರಾಜ್ಯದಲ್ಲಿ ಬೇರೆ ಏನೂ ಇಲ್ಲವೇ? ಕೊರೊನಾದಿಂದ ಜನ ಸಾಯುತ್ತಿದ್ದಾರೆ. ಬೇರೆ ಹಲವು ಸಮಸ್ಯೆಗಳಿವೆ. ಅದರ ಬಗ್ಗೆ ತೋರಿಸಿ. ರಾಜ್ಯದ ಎಲೆಕ್ಟ್ರಾನಿಕ್ ಮೀಡಿಯಾಗೆ ಒಳ್ಳೆಯ ಹೆಸರಿದೆ. ಮಾಧ್ಯಮದವರು ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸಬೇಕು. ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಪ್ಪು ಮಾಡಿದಾಗ ಮಾಧ್ಯಮ ಎಚ್ಚರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಜಮೀರ್ ಅಹ್ಮದ್ ಜೊತೆ ಜೆಡಿಎಸ್ ಶಾಸಕರು ಶ್ರೀಲಂಕಾಕ್ಕೆ ಹೋಗಿ ಬಂದ ವಿಚಾರದ ಬಗ್ಗೆ ಮಾತನಾಡುತ್ತಾ, ನನಗೆ ಹಾಸನ, ಹೊಳೆನರಸೀಪುರ, ಬೆಂಗಳೂರು ಸೇರಿದಂತೆ ಇತರೆಡೆ ಸಭೆ-ಸಮಾರಂಭ ಇದ್ದಾಗ ಹೋಗಿ ಬಂದಿದ್ದೇನೆ. ಆದರೆ, ಕ್ಯಾಸಿನೋ ಬಗ್ಗೆ ನನಗೆ ಗೊತ್ತಿಲ್ಲ. ಕ್ಯಾಸಿನೋ ನಡೆಸುವವರೆ ಸರ್ಕಾರ ಉರುಳಿಸಿದ್ದಾರೆ. ಅದು ಈಗ ಮುಗಿದು ಹೋದ ಅಧ್ಯಾಯ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.