ಸಕಲೇಶಪುರ: ತಾಲೂಕಿನ ಕುನಿಗಹಳ್ಳಿ ಸಮೀಪದ ಹಳೆಕೆರೆ ಗ್ರಾಮದ ಬಳಿ ಇಂದು ಕಾಡಾನೆಯೊಂದು ವ್ಯಕ್ತಿಯೋರ್ವನ ಮೇಲೆ ದಾಳಿ ಮಾಡಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂದ್ರು (44) ಕಾಡಾನೆ ದಾಳಿಗೀಡಾಗಿರುವ ವ್ಯಕ್ತಿ. ಗ್ರಾಪಂ ಮಾಜಿ ಸದಸ್ಯರಾಗಿರುವ ಇವರು ಮನೆಯ ಹಿಂಭಾಗದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ಗಾಯಗೊಳಗಾದ ಅವರನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹಾಸನದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಯಿತು.
ಗ್ರಾಮಸ್ಥರ ಆಕ್ರೋಶ:
ಆಸ್ಪತ್ರೆ ಎದುರು ಸೇರಿದ ಗ್ರಾಮಸ್ಥರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಇದೇ ಗ್ರಾಮದಲ್ಲಿ ಶಿವಪ್ಪ ಗೌಡ ಎಂಬುವವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಈ ಘಟನೆ ಈಗ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರಬೇಕು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ವಾಹನಕ್ಕೆ ಕಲ್ಲು ಹೊಡೆಯುವ ಹಂತಕ್ಕೆ ತೆರಳಿದ್ದರು. ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಗಾರ್ಡ್ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಿಪಕ್ಷದಲ್ಲಿದ್ದವರು ಧ್ವನಿ ಎತ್ತಬೇಕು, ಆಡಳಿತದಲ್ಲಿದ್ದವರು ಕೆಲಸ ಮಾಡಬೇಕು: ಶೋಭಾ ಕರಂದ್ಲಾಜೆ
ಎ.ಸಿ.ಎಫ್, ಆರ್.ಎಫ್.ಓ ಮೊಬೈಲ್ ಆಫ್ ಮಾಡಿದ್ದಾರೆ. ಅವರು ಎಲ್ಲಿಗೆ ಹೋಗಿದ್ದಾರೆ. ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಪ್ರತಿಭಟನೆ:
ಹಳೆಕೆರೆ ಗ್ರಾಮದ ಸುತ್ತಮುತ್ತ ಕಾಡಾನೆ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ಗ್ರಾಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬರಬೇಕು ಎಂದು ಆಗ್ರಹಿಸಿ ತಾಪಂ ಸದಸ್ಯ ಯಡೇಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಪಟ್ಟಣದ ಎಸ್.ಬಿ.ಎಂ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲ ನಿಮಿಷಗಳ ಕಾಲ ರಸ್ತೆ ತಡೆ ಮಾಡಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಯಿತು.