ಕರ್ನಾಟಕ

karnataka

ಮುಂದುವರೆದ ಆನೆ ದಾಳಿ: ಸಕಲೇಶಪುರದಲ್ಲಿ ಕಾಫಿ ಬೆಳೆಗಾರ ಮೃತ

By

Published : Jun 2, 2021, 9:53 PM IST

ಕಾಫಿ ಬೆಳೆಗಾರ ಬಿಡ್ಡಯ್ಯ ( 59) ಬುಧವಾರ ಬೆಳಗ್ಗೆ 7 ಗಂಟೆಯ ವೇಳೆ ತಮ್ಮ ಮನೆಯ ಸಮೀಪವಿರುವ ಕಾಫಿ ತೋಟಕ್ಕೆ ಹೋಗುವಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನೆ ದಾಳಿಯಿಂದ ಬಿಡ್ಡಯ್ಯ ಅವರ ತಲೆ ಸಂಪೂರ್ಣವಾಗಿ ಜಜ್ಜಿಹೋಗಿದೆ.

Coffee grower Biddyaya
ಕಾಫಿ ಬೆಳೆಗಾರ ಬಿಡ್ಡಯ್ಯ

ಸಕಲೇಶಪುರ(ಹಾಸನ):ತಾಲೂಕಿನ ಬೆಳಗೋಡು ಹೋಬಳಿ ಕಿರುಹುಣಸೆ ಗ್ರಾಮದಲ್ಲಿ ಕಾಡಾನೆ ದಾಳಿಯ ಪರಿಣಾಮ ಕಾಫಿ ಬೆಳೆಗಾರರೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.

ಕಾಫಿ ಬೆಳೆಗಾರ ಬಿಡ್ಡಯ್ಯ (59) ಬುಧವಾರ ಬೆಳಗ್ಗೆ 7 ಗಂಟೆಯ ವೇಳೆ ತಮ್ಮ ಮನೆಯ ಸಮೀಪವಿರುವ ಕಾಫಿ ತೋಟಕ್ಕೆ ಹೋಗುವಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನೆ ದಾಳಿಯಿಂದ ಬಿಡ್ಡಯ್ಯ ಅವರ ತಲೆ ಸಂಪೂರ್ಣವಾಗಿ ಜಜ್ಜಿ ಹೋಗಿದೆ.

ಕಳೆದ ಮೂರು ತಿಂಗಳಲ್ಲಿ ಕಿರುಹುಣಸೆ ಭಾಗದಲ್ಲೇ ಇಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಇನ್ನೂ ಕೆಲವರು ಕಾಡಾನೆ ದಾಳಿಯಿಂದ ಅಪಾರ ನೋವನ್ನು ಅನುಭವಿಸಿದ್ದಾರೆ. ತಾಲೂಕಿನಲ್ಲಿ ಸಾವು-ನೋವುಗಳಲ್ಲದೆ ಭಾರಿ ಪ್ರಮಾಣದ ಬೆಳೆ ನಷ್ಟವಾಗುತ್ತಿದೆ. ಕಾಡಾನೆಗಳ ಹಾವಳಿಯಿಂದ ಕಿರುಹುಣಸೆ, ವಡೂರು, ಕುಣಿಗನಹಳ್ಳಿ, ಜಮ್ಮನಹಳ್ಳಿ, ರಾಜೇಂದ್ರಪುರ, ಕಬ್ಬಿನಗದ್ದೆ ಮುಂತಾದ ಗ್ರಾಮಗಳ ಗ್ರಾಮಸ್ಥರು ನಿತ್ಯ ಆತಂಕದಲ್ಲೇ ಇರಬೇಕಾಗಿದ್ದು, ಜೀವನೋಪಾಯಕ್ಕೆ ಆಧಾರವಾಗಿರುವ ಜಮೀನುಗಳನ್ನು ಹಾಳು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಲೇ ಹೆಚ್ಚು ಸಾವು- ನೋವುಗಳು ಸಂಭವಿಸುತ್ತಿವೆ. ಕಾಡಾನೆ ಸಮಸ್ಯೆಗೆ ಯಾವುದೇ ರೀತಿಯ ಶಾಶ್ವತ ಪರಿಹಾರ ದೊರಕುತ್ತಿಲ್ಲ ಎಂದು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದ ಡಿ ಎಫ್ ಓ ಬಸವರಾಜ್, ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಸೇರಿದಂತೆ ಇತರ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಮೃತರ ಮಗ ಗಣಪತಿ ತನ್ನ ತಂದೆಯ ಸಾವಿಗೆ ಅರಣ್ಯ ಇಲಾಖೆಯವರೇ ಕಾರಣ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ.

ಈ ವೇಳೆ ಕುನಿಗನನಹಳ್ಳಿ ಗ್ರಾಮ ಪಂಚಾಯತ್​ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಕಳೆದ 2 ತಿಂಗಳ ಹಿಂದೆ ಇದೇ ಕಿರುಹುಣಸೆ ಗ್ರಾಮದಲ್ಲಿ ಶಿವಪ್ಪ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾಗ ಅರಣ್ಯ ಇಲಾಖೆಯವರು ಪರಿಹಾರವಾಗಿ ಒಟ್ಟು 7.5 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಕೇವಲ 2 ಲಕ್ಷ ರೂ. ಚೆಕ್ ಮಾತ್ರ ನೀಡಿದ್ದು, ಬಾಕಿ ಹಣ ಆ ಕುಟುಂಬಕ್ಕೆ ನೀಡಿರುವುದಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಡಿ ಎಫ್ ಓ ಬಸವರಾಜ್ ಮಾತನಾಡಿ, ಕಾಡಾನೆ ದಾಳಿಯಿಂದ ಬಿಡ್ಡಯ್ಯ ಅವರು ಮೃತಪಟ್ಟಿರುವುದು ಬಹಳ ಬೇಸರದ ಸಂಗತಿ. ಅವರು ಇಲಾಖೆಯ ಕಾರ್ಯಾಚರಣೆಗೆ ತುಂಬಾ ಸಹಕರಿಸುತ್ತಿದ್ದರು. ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ 40 ಕಿ.ಮೀ ದೂರ ರೈಲು ಬ್ಯಾರಿಕೇಡ್ ಅಳವಡಿಸಬೇಕಾಗಿದ್ದು, ಕೊಡಗಿನ ಭಾಗದಲ್ಲಿ 4.5 ಕಿ.ಮೀ ರೈಲು ಬ್ಯಾರಿಕೇಡ್ ನ್ನು ಕಳೆದ ವರ್ಷ ಅಳವಡಿಸಲಾಗಿದೆ. ಈ ಬಾರಿ 22 ಕಿ.ಮೀ ದೂರ ರೈಲು ಬ್ಯಾರಿಕೇಡ್ ಅಳವಡಿಸಲು ಸರ್ಕಾರಕ್ಕೆ ಪ್ರಪೋಸಲ್ ಕಳುಹಿಸಲಾಗಿದೆ ಎಂದರು.

ರೈಲು ಬ್ಯಾರಿಕೇಡ್ ಗಳನ್ನು ಅಳವಡಿಸಿದ ನಂತರ ಹೈಕೋರ್ಟ್ ಹಾಗೂ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರ ಇನ್ನೆರಡು ಕಾಡಾನೆಗಳನ್ನು ಹಿಡಿಯಲು ಅನುಮತಿ ನೀಡಿದೆ. ಆದರೆ, ಕೋವಿಡ್ ಹಿನ್ನೆಲೆ ದುಬಾರೆಯಿಂದ ಸಾಕಾನೆಗಳು ಹಾಗೂ ಮಾವುತರು ಆಗಮಿಸಲು ಸಾಧ್ಯವಾಗಿಲ್ಲ. ಸರ್ಕಾರ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಇದೀಗ ಫ್ರಂಟ್​ಲೈನ್​ ಎಂದು ಪರಿಗಣಿಸಿದ್ದು, 7 ನೇ ತಾರೀಖಿನ ಒಳಗೆ ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಿಸಿ ಕಾರ್ಯಾಚರಣೆ ಆರಂಭಿಸುತ್ತೇವೆ. ಕೆಲವೊಂದು ತಾಂತ್ರಿಕ ದೋಷದಿಂದ ಶಿವಪ್ಪ ಅವರ ಕುಟುಂಬಕ್ಕೆ ಬರಬೇಕಾಗಿದ್ದ ಪರಿಹಾರ ಹಣ ಇನ್ನೂ ಸಂಪೂರ್ಣವಾಗಿ ದೊರಕಿಲ್ಲ. ಇನ್ನೆರಡು ದಿನಗಳಲ್ಲಿ ಅವರ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಓದಿ:ಸಂಪೂರ್ಣ ರೈತರಾದ ಹೆಚ್​​ಡಿಕೆ.. ಹೊಸ ಟ್ರ್ಯಾಕ್ಟರ್​ ಖರೀದಿಸಿ ಫುಲ್​ ರೌಂಡ್ಸ್​

ABOUT THE AUTHOR

...view details