ಕರ್ನಾಟಕ

karnataka

ಹಾಸನ ತಹಶೀಲ್ದಾರ್ ಬಂಧನಕ್ಕೆ ವಾರಂಟ್ ಜಾರಿ

By ETV Bharat Karnataka Team

Published : Nov 24, 2023, 7:23 AM IST

Updated : Nov 24, 2023, 2:19 PM IST

Arrest warrant against Hassan Tehsildar: ಹಾಸನ ತಹಶೀಲ್ದಾರ್ ಶ್ವೇತಾ ಅವರ ಬಂಧನಕ್ಕೆ ಸಿಟಿ ಸಿವಿಲ್ ಕೋರ್ಟ್ ವಾರಂಟ್ ಜಾರಿಗೊಳಿಸಿದೆ.

ಹಾಸನ ತಹಶೀಲ್ದಾರ್ ಶ್ವೇತ ಬಂಧನಕ್ಕೆ ವಾರಂಟ್ ಜಾರಿ
ಹಾಸನ ತಹಶೀಲ್ದಾರ್ ಶ್ವೇತ ಬಂಧನಕ್ಕೆ ವಾರಂಟ್ ಜಾರಿ

ಹಾಸನ:ಜಮೀನು ವ್ಯಾಜ್ಯ ಪ್ರಕರಣವೊಂದರಲ್ಲಿ ಸಾಕ್ಷ್ಯ ಹೇಳಲು ಕೋರ್ಟ್‌ಗೆ ಹಾಜರಾಗದ ಹಾಸನ ತಹಶೀಲ್ದಾರ್ ಶ್ವೇತಾ ವಿರುದ್ಧ ಸಿಟಿ ಸಿವಿಲ್ ಕೋರ್ಟ್ ಬಂಧನ ವಾರಂಟ್‌ ಹೊರಡಿಸಿದೆ. ಶ್ವೇತಾ ಅವರನ್ನು ಕರೆದುಕೊಂಡು ಹೋಗಲು ಗುರುವಾರ ಕೋರ್ಟ್‌ ಸಿಬ್ಬಂದಿ ಮತ್ತು ವಕೀಲರು ಕಚೇರಿಗೆ ಆಗಮಿಸಿದ್ದರು. ಆದರೆ ಶ್ವೇತಾ ಕಚೇರಿಯಲ್ಲಿರಲಿಲ್ಲ.

ಪ್ರಕರಣವೇನು?:ಹಾಸನ ತಾಲೂಕಿನ ಹೇಮಾ ಎಂಬವರ ಭೂಮಿ 6/1 ಭಾಗಕ್ಕೆ ಆದೇಶವಾಗಿದ್ದು, ನಂತರ ಹದ್ದುಬಸ್ತ್‌ಗಾಗಿ ಸ್ವಾಧೀನ ಮಾಡಬೇಕು ಎಂದು ಕೋರ್ಟ್‌ ಆದೇಶಿಸಿತ್ತು. 2014ರಿಂದ ಇಲ್ಲಿವರೆಗೂ ಈ ಕುರಿತು ಲಿಖಿತ ರೂಪದಲ್ಲಿ ಕಡತವಾಗಿರಲಿಲ್ಲ. ತಹಶೀಲ್ದಾರ್ ಈ ರೀತಿ​ ನಿರ್ಲಕ್ಷ್ಯವಹಿಸಿದರೆ ರೈತರ ಕಥೆ ಏನಾಗಬೇಕು?, ಪ್ರಕರಣ ದಾಖಲು ಮಾಡಿದ ನಂತರ ಇಬ್ಬರೂ ಸಾವನ್ನಪ್ಪಿದ್ದಾರೆ. ಇನ್ನೆಷ್ಟು ಜನ ಸಾಯಬೇಕು? 2008ರಿಂದ ಇಲ್ಲಿಯವರೆಗೂ ಎಷ್ಟು ಹದ್ದುಬಸ್ತ್ ಮತ್ತು ದುರಸ್ತಿ ಮಾಡಿದ್ದಾರೆ, ಲೆಕ್ಕ ಕೊಡಲಿ ಎಂದು ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹಾಸನ ಸಿಟಿ ಸಿವಿಲ್ ಕೋರ್ಟ್ ಜಮೀನು ಹದ್ದುಬಸ್ತ್ ಕುರಿತು ಸಾಕ್ಷ್ಯ ಹೇಳಲು ಕೋರ್ಟ್‌ಗೆ ಆಗಮಿಸದ ತಹಶೀಲ್ದಾರ್‌ರನ್ನು ಬಂಧಿಸುವಂತೆ ಆದೇಶ ಮಾಡಿದೆ. ಹೀಗಾಗಿ ಗುರುವಾರ ವಾರಂಟ್ ಸಮೇತ ತಾಲೂಕು ಕಚೇರಿಗೆ ವಕೀಲ ಎಸ್.ಎನ್.ಮೂರ್ತಿ ನೇತೃತ್ವದಲ್ಲಿ ಕೋರ್ಟ್‌ ಸಿಬ್ಬಂದಿ ಬಂದಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಕಾಣಿಸಿಕೊಳ್ಳಲಿಲ್ಲ.

"ಯಾರಾದರೂ ಬ್ರೋಕರ್‌ಗೆ ಹದ್ದುಬಸ್ತ್ ದುರಸ್ತಿ ಮಾಡಲು ಕೊಟ್ಟರೂ ಒಂದು ತಿಂಗಳಲ್ಲಿ ಮಾಡುತ್ತಾರೆ. ಅದರೆ, ಇಲ್ಲಿ ನೇರವಾಗಿ ಕಚೇರಿಗೆ ಬಂದು ಅರ್ಜಿ ನೀಡಿ 10 ವರ್ಷಗಳ ಕಳೆದರೂ ಕೆಲಸ ಆಗಿಲ್ಲ" ಎಂದು ವಕೀಲ ಮೂರ್ತಿ ದೂರಿದರು. "ಬೆಳಿಗ್ಗೆ ಕಚೇರಿಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ, ಬೇರೆ ಕಡೆ ಹೋಗುವುದಾದರೆ ಮಾಹಿತಿ ಕೊಟ್ಟು ಹೊರಹೋಗಬೇಕು. ಆದರೆ ಅವರು ಸಹಿ ಹಾಕದೇ ಹೊರಹೋಗಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನಾಂಬೆ ಜಾತ್ರೆಯ ಕೆಲಸ ಕಾರ್ಯಗಳು ಇದ್ದ ಕಾರಣ ನ್ಯಾಯಾಲಯದ ವಾರಂಟ್ ಬಗ್ಗೆ ಪೂರ್ವಭಾವಿಯಾಗಿ ಮಾಹಿತಿ ಇರಲಿಲ್ಲ. ಇದರಿಂದಾಗಿ ಕೋರ್ಟ್​ಗೆ ಹಾಜರಾಗಲು ಸಾಧ್ಯವಾಗಿಲ್ಲ. ನ.23 ರಂದು ವಾರಂಟ್ ಜೊತೆ ವಕೀಲರು ಕಚೇರಿಗೆ ಬಂದಾಗಲೇ ವಿಷಯ ಗೊತ್ತಾಗಿದೆ. ಆ ವೇಳೆ ನಾನು ಸ್ಥಳ ಪರಿಶೀಲನೆ ಅಂಗವಾಗಿ ವೃತ್ತದಲ್ಲಿದ್ದರಿಂದ ಕಚೇರಿಯ ಶಿರಸ್ತೇದಾರರು ಈ ಬಗ್ಗೆ ನನಗೆ ಮಾಹಿತಿ ನೀಡಿದ್ದರು. ಈ ಪ್ರಕರಣದ ಕಡತವನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೂ ರವಾನಿಸಲಾಗಿದ್ದು, ಅಲ್ಲಿಂದ ಆದೇಶ ಬಂದ ನಂತರವೇ ಮುಂದಿನ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ಪ್ರಕರಣ ಸಂಬಂಧ ತಹಶೀಲ್ದಾರ್ ಕಚೇರಿ ಹಂತದಲ್ಲಿ ಯಾವುದೇ ಕ್ರಮ ಜರುಗಿಸುವುದು ಬಾಕಿ ಇರುವುದಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಬಂಧನ ವಾರೆಂಟ್: ದಾವಣಗೆರೆ ವಿರಕ್ತ ಮಠದತ್ತ ಭಕ್ತರ ದಂಡು

Last Updated :Nov 24, 2023, 2:19 PM IST

ABOUT THE AUTHOR

...view details