ಕರ್ನಾಟಕ

karnataka

ಗದಗ ಕಟೌಟ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್​ ವಿತರಿಸಿದ ಯಶ್​ ತಂಡ

By ETV Bharat Karnataka Team

Published : Jan 17, 2024, 12:18 PM IST

Updated : Jan 17, 2024, 1:04 PM IST

ಇತ್ತೀಚಿಗೆ ವಿದ್ಯುತ್​ ಅವಘಡದಲ್ಲಿ ಮೃತಪಟ್ಟ ಯಶ್​ ಅಭಿಮಾನಿಗಳ ಕುಟುಂಬಕ್ಕೆ ನಟನ ತಂಡದವರಿಂದ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಗಿದೆ.

Yash Team gave Rs 5 lakhs Compensation to the family of deceased fans
ಕಟೌಟ್ ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಿದ ಯಶ್​ ತಂಡ

ಮೃತ​ ಅಭಿಮಾನಿಗಳ ಕುಟುಂಬಕ್ಕೆ ಯಶ್​​ ತಂಡದಿಂದ ಸಾಂತ್ವಾನ

ಗದಗ: ಕಳೆದ ವಾರ ಮೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕಟೌಟ್​ ನಿಲ್ಲಿಸುವ ವೇಳೆ ವಿದ್ಯುತ್​​ ತಗುಲಿ ಮೂವರು ಮೃತಪಟ್ಟಿದ್ದರು. ಇಹಲೋಕ ತ್ಯಜಿಸಿದ ಅಭಿಮಾನಿಗಳ ಕುಟುಂಬದವರಿಗೆ ಇದೀಗ ರಾಕಿಂಗ್​ ಸ್ಟಾರ್​ ಯಶ್​ ಟೀಮ್​ ಕಡೆಯಿಂದ ಪರಿಹಾರ ವಿತರಣೆ ಮಾಡಲಾಗಿದೆ. ಮೃತ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಚೆಕ್ ನೀಡಲಾಗಿದೆ.

ಸೂರಣಗಿ ಗ್ರಾಮಕ್ಕೆ ಯಶ್​​ ತಂಡ ಭೇಟಿ:ಕನ್ನಡ ಚಿತ್ರರಂಗದ ಬಹುಬೇಡಿಕೆಯನಟ ಯಶ್ ಅವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ಅವರು ಇಂದು ದುರಂತ ಸಂಭವಿಸಿದ್ದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮನೆ ಮಕ್ಕಳನ್ನು ಕಳೆದುಕೊಂಡಿರುವ ಮೂರು ಕುಟುಂಬಗಳಿಗೆ ಸಾಂತ್ವನ ಹೇಳಿ, ಪರಿಹಾರ ಹಣದ ಚೆಕ್ ವಿತರಿಸಿದ್ದಾರೆ. ಪರಿಹಾರದ ಧನವಾಗಿ 5 ಲಕ್ಷ ರೂ. ನೀಡಲಾಗಿದೆ.

ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜನವರಿ 07 ರ ರಾತ್ರಿ ದುರಂತ ಸಂಭವಿಸಿತ್ತು. ಯಶ್​ ಹುಟ್ಟುಹಬ್ಬದ ಕಟೌಟ್​ ನಿಲ್ಲಿಸಲು ಮುಂದಾಗಿದ್ದ ಮೂವರು ಯುವಕರು ವಿದ್ಯುತ್​ ತಗುಲಿ ಮೃತಪಟ್ಟಿದ್ದರು. ಸೂರಣಗಿಯ ಮುರಳಿ, ನವೀನ ಹಾಗೂ ಹನಮಂತ ಎಂಬುವರು ಪ್ರಾಣ ಕಳೆದುಕೊಂಡಿದ್ದರು. ಈ ಮೂವರ ಕುಟುಂಬಕ್ಕೂ ತಲಾ ಐದು ಲಕ್ಷ ರೂ. ಚೆಕ್​ ವಿತರಣೆ ಮಾಡಲಾಗಿದೆ. ಘಟನೆಯಲ್ಲಿ ಇತರೆ ಮೂವರು ಯುವಕರಿಗೆ ಗಾಯಗೊಂಡಿದ್ದರು.

ಪೋಷಕರಿಗೆ ಸಾಂತ್ವನ ಹೇಳಿದ್ದ ಯಶ್​: ಅವಘಡದ ಮಾಹಿತಿ ತಿಳಿದು ಜ. 8ರಂದು ನಟ ಯಶ್​ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ,​ ಮೃತ ಯುವಕರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮೃತರ ಮನೆಗಳಿಗೆ ತೆರಳಿ ಪೋಷಕರಿಗೆ ಧೈರ್ಯ ತುಂಬಿದ್ದರು. ಈ ವೇಳೆ ಪೋಷಕರು ತಮ್ಮ ನೋವನ್ನು ತೋಡಿಕೊಂಡಿದ್ದರು. ಸಾಂತ್ವನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಯಶ್, ' ಅಭಿಮಾನ ತೋರಿಸುವುದಾದರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ, ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರೂ ಇಷ್ಟಪಡಲ್ಲ' ಎಂದು ಬುದ್ಧಿಮಾತು ಹೇಳಿದ್ದರು. ಬಳಿಕ ಗದಗದ ಜಿಮ್ಸ್ ಆಸ್ಪತ್ರೆಗೆ ತೆರಳಿ, ಗಾಯಾಳು ಯುವಕರ ಆರೋಗ್ಯ ವಿಚಾರಿಸಿದ್ದರು.

ಇದನ್ನೂ ಓದಿ :ಯಶ್​ ಅಭಿಮಾನಿಗಳ ಸಾವು: ನಾಳೆ ನಟನ ಆಪ್ತರಿಂದ ಮೃತರ ಕುಟುಂಬಕ್ಕೆ ಪರಿಹಾರದ ಚೆಕ್​ ವಿತರಣೆ

ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ:ಯುವಕರ ಮೃತಪಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ, ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದರು.

ಇದನ್ನೂ ಓದಿ :ರಾಮ ನಾಮ ಜಪಿಸುವಂತೆ ಮನವಿ ಮಾಡಿದ ಗಾಯಕಿ ಚಿತ್ರಾ ಮೇಲೆ ಸೈಬರ್ ದಾಳಿ

Last Updated : Jan 17, 2024, 1:04 PM IST

ABOUT THE AUTHOR

...view details