ಗದಗ: ಜಿಲ್ಲೆಯಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ನಕಲಿ ಗೊಬ್ಬರ ಮಾರಿ ರೈತರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಪ್ರಕರಣ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ನಕಲಿ ಗೊಬ್ಬರ ತುಂಬಿದ ಲಾರಿಯನ್ನು ರೈತರೇ ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಹಿಂದೆ ಇದೇ ನಕಲಿ ಗೊಬ್ಬರವನ್ನು ಮಂಗಳಾ ಡಿ ಎಪಿ ಗೊಬ್ಬರ ಅಂತ ಹೇಳಿ ಸವಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಮಾರಾಟ ಮಾಡಿ ಕಾಲ್ಕಿತ್ತಿದ್ದರು. ಆದ್ರೆ ಗೊಬ್ಬರದಿಂದ ಯಾವುದೇ ಫಲಿತಾಂಶ ಕಾಣದ ಕಾರಣ ರೈತರಿಗೆ ಅನುಮಾನ ಮೂಡಿದೆ. ಮೋಸ ಹೋದ ನೂರಾರು ರೈತರು ರೊಚ್ಚಿಗೆದ್ದಿದ್ದಾರೆ.
ನಕಲಿ ಗೊಬ್ಬರ ಪೂರೈಕೆ ಆರೋಪ-ಲಾರಿ ಸಮೇತ ಇಬ್ಬರು ಸಿಬ್ಬಂದಿ ಪೊಲೀಸ್ ವಶಕ್ಕೆ ಹೀಗಾಗಿ ನಕಲಿ ಗೊಬ್ಬರ ಮಾರಾಟ ಮಾಡಿದ್ದ ಸಿಬ್ಬಂದಿಗೆ ಕರೆ ಮಾಡಿ ಮತ್ತೊಮ್ಮೆ 500 ಚೀಲದ ಗೊಬ್ಬರ ಬೇಕು ಅಂತ ರೈತರು ಕೇಳಿದ್ದಾರೆ. ಹಣ ಕೂಡಿಸಿ ನಕಲಿ ಗೊಬ್ಬರದ ಕಂಪನಿ ಸಿಬ್ಬಂದಿಗೆ ಕೊಟ್ಟ ಬಳಿಕ ಗೊಬ್ಬರದ ಲಾರಿ ಗ್ರಾಮಕ್ಕೆ ಬಂದಿದೆ. ಬಳಿಕ ಲಾರಿ ಸಮೇತ ಗೊಬ್ಬರ ಮಾರಾಟ ಮಾಡಲು ಬಂದಿದ್ದ ಸಿಬ್ಬಂದಿಯನ್ನು ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯಲ್ಲಿ ಬೈಕ್ ಅಪಘಾತ - ಇಬ್ಬರು ಸವಾರರು ಸಾವು
ಸ್ಥಳಕ್ಕೆ ರೋಣ ಕೃಷಿ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಮೇಲ್ನೋಟಕ್ಕೆ ನಕಲಿ ಗೊಬ್ಬರವಾಗಿದ್ದು, ಮಾದರಿಯನ್ನು ಬೆಂಗಳೂರು ಪ್ರಯೋಗಾಲಾಯಲಕ್ಕೆ ಕಳುಹಿಸಿದ್ದೇವೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಮತ್ತೆ ಎಲ್ಲಿಯಾದರೂ ಅನುಮಾನ ಬರುವ ರೀತಿಯಲ್ಲಿ ಗೊಬ್ಬರ ಮಾರಾಟಗಾರರು ಕಂಡು ಬಂದರೆ ಅವರನ್ನು ಹಿಡಿದುಕೊಡಿ ಅಂತ ಕೃಷಿ ಅಧಿಕಾರಿ ರವೀಂದ್ರ ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.
ರೈತ ಶ್ರೀಶೈಲ ಇಟಗಿ ಮಾತನಾಡಿ, "ನಾವೆಲ್ಲ ಹಣ ಕೂಡಿಸಿ ಗೊಬ್ಬರವನ್ನು ತರಿಸಿ ನಮ್ಮ ಜಮೀನಿನಲ್ಲಿ ಹಾಕಿದೆವು. ನಂತರ ನಕಲಿ ಗೊಬ್ಬರ ಹೇಗಿರುತ್ತೆ ಎಂಬುದರ ಬಗೆಗಿನ ಒಂದು ವೀಡಿಯೋವನ್ನು ನಾವು ನೋಡಿದೆವು. ಜೊತೆಗೆ ಗೊಬ್ಬರದಿಂದ ಯಾವುದೇ ಫಲಿತಾಂಶ ಕಂಡಿರಲಿಲ್ಲ. ನಮಗೂ ಅದನ್ನು ನೋಡಿದಾಗ ಉತ್ತಮ ಗೊಬ್ಬರ ಎಂದೆನಿಸಿರಲಿಲ್ಲ. ಹಾಗಾಗಿ ಬೇಕಂತಲೇ ಅವರನ್ನು ಹಿಡಿಯಲೆಂದೇ ಇನ್ನೊಂದು ಲೋಡ್ ತರಿಸಿದೆವು. ಇದೀಗ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆಂದು'' ತಿಳಿಸಿದರು.