ಕರ್ನಾಟಕ

karnataka

ನೀರಿನಲ್ಲಿ ಕೊಚ್ಚಿಹೋದ ಆಟೋ: ಜೀವ ಉಳಿಸಿಕೊಂಡು ಮನೆಗೆ ಬಂದ ಚಾಲಕ

By

Published : Sep 6, 2022, 8:35 PM IST

Auto wash out in rain water

ಗದಗ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು, ಮಳೆ ನೀರಿಗೆ ಆಟೋ ಕೊಚ್ಚಿಕೊಂಡು ಹೋಗಿದೆ. ಜೀವನಕ್ಕೆ ಆಧಾರವಾಗಿದ್ದ ಆಟೋ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

ಗದಗ:ನಗರದ ಸುತ್ತಮುತ್ತ ರಾತ್ರಿಯಿಂದ ಧಾರಾಕಾರ ಮಳೆಯಾಗಿದೆ. ಗದಗ ಹೊರ ವಲಯದ ಹುಲಕೋಟಿ ವ್ಯಾಪ್ತಿಯಲ್ಲೂ ವರುಣ ಅಬ್ಬರಿಸಿದ್ದಾನೆ. ರಾತ್ರಿ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು, ಹುಲಕೋಟಿ ಗ್ರಾಮದ ಹರ್ತಿ ರೋಡ್​​ನಲ್ಲಿ ಏಕಾಏಕಿ ಮಳೆ ನೀರು ನುಗ್ಗಿ ಬಾಡಿಗೆಗೆ ಹೊರಟಿದ್ದ ಆಟೋ ಕೊಚ್ಚಿಕೊಂಡು ಹೋಗಿದೆ.

ಅದೃಷ್ಟವಷಾತ್ ಆಟೋ ಚಾಲಕ ಕರಣ್ ಕರಿಯಣ್ಣವರ್ ಹಾಗೂ ಮಗ ಪ್ರವೀಣ್ ಜೀವಸಹಿತ ವಾಪಸ್ ಬಂದಿದಾರೆ. ರಾತ್ರಿ ಗ್ರಾಮದ ವೃದ್ಧ ಗುರುಪ್ಪ ಕೊಂಡಿಕೊಪ್ಪ ಅವರನ್ನ ಹರ್ತಿ ರೋಡ್ ಬಳಿಯ ಕುರಿ ದೊಡ್ಡಿ ಬಳಿ ಬಿಡಲು ಕರಣ್ ಅವರು ಮಗ ಪ್ರವೀಣ್ ಜೊತೆ ಹೋಗಿದ್ದರು. ಆದರೆ, ಜಮೀನು ಬಳಿಯಿಂದ ರಸ್ತೆಗೆ ನುಗ್ಗಿದ ನೀರು ಆಟೋ ಹಳ್ಳಕ್ಕೆ ದೂಡಿತ್ತು. ಆಟೋದಲ್ಲಿದ್ದ ಪ್ರವೀಣ್, ಈಜಿಕೊಂಡು ತಂದೆ ಹಾಗೂ ವೃದ್ಧನನ್ನ ರಕ್ಷಿಸಿದ್ದಾರೆ. ಆದರೆ, ಪೊದೆಯಲ್ಲಿ ಸಿಲುಕಿದ್ದ ಆಟೋವನ್ನ ಮೇಲೆತ್ತಲು ಸಾಧ್ಯವಾಗಿಲ್ಲ. ಹೀಗಾಗಿ ಆಟೋವನ್ನ ಅಲ್ಲೇ ಬಿಟ್ಟು ಮನೆ ಸೇರಿದ್ದಾರೆ.

ನೀರಿನಲ್ಲಿ ಕೊಚ್ಚಿಹೋದ ಆಟೋ

ಗದಗ ತಾಲೂಕಿನ ಹರ್ಲಾಪುರ ಗ್ರಾಮದವರಾದ ಕರಣ್, ಕಳೆದ 40 ವರ್ಷದಿಂದ ಹುಲಕೋಟಿಯಲ್ಲಿ ವಾಸವಾಗಿದ್ದಾರೆ. ಆಟೋ ನಂಬಿಕೊಂಡು ಈ ಕುಟುಂಬದ ನಾಲ್ವರು ಜೀವನ ಸಾಗಿಸುತ್ತಿದ್ದರು. ಆದರೆ ಈಗ ಆಟೋ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು ಕುಟುಂಬ ಕಂಗಾಲಾಗಿದೆ. ಆಟೋ ಮೇಲೆತ್ತಲು ಸಾಧ್ಯವಾಗ್ತಿಲ್ಲ. ಆಟೋ ಇಲ್ಲದೇ ಜೀವನ ಸಾಗಿಸುವುದು ಕಷ್ಟ. ದಯವಿಟ್ಟು ಸಹಾಯ ಮಾಡಿ ಎಂದು ಕರಣ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಹಳ್ಳದಲ್ಲಿ ಕೊಚ್ಚಿ ಹೋದ ಇಬ್ಬರು ಪೊಲೀಸರು, ಒಬ್ಬರ ಮೃತದೇಹ ಪತ್ತೆ..

ABOUT THE AUTHOR

...view details