ಕರ್ನಾಟಕ

karnataka

ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಹಿಟ್ಲರ್ ವಂಶಸ್ಥರು: ಸಿದ್ದರಾಮಯ್ಯ ವಾಗ್ದಾಳಿ

By

Published : Mar 4, 2023, 11:23 AM IST

Updated : Mar 4, 2023, 12:27 PM IST

ಬಿಜೆಪಿ ಸುಳ್ಳಿನ ಫ್ಯಾಕ್ಟರಿ. ಇವರು ಹಿಟ್ಲರ್ ವಂಶಸ್ಥರು, ಸಾಮಾಜಿಕ ನ್ಯಾಯಕ್ಕೆ ವಿರೋಧ ವ್ಯಕ್ತಪಡಿಸುವವರು. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು ಇಂತವರಿಗೆ ಯಾರೂ ಮತ ಹಾಕಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

siddaramaiah
ಸಿದ್ದರಾಮಯ್ಯ

ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ

ಧಾರವಾಡ: ಗೆಲ್ಲುವವರಿಗೆ ಮಾತ್ರ ನಾವು ಟಿಕೆಟ್ ಕೊಡುವುದು, ನನ್ನ ಹಿಂದೆ ಬಂದು ನಿಂತರೆ ಕೊಡುವುದಕ್ಕೆ ಆಗಲ್ಲ. 10 ಜನರಲ್ಲಿ ಒಬ್ಬರಿಗೆ ಮಾತ್ರ ನಮ್ಮ ಕೆಪಿಸಿಸಿಯ ವರದಿ ಮೇಲೆ‌ ಟಿಕೆಟ್​ ಕೊಡುತ್ತೇವೆ. ಈ ಬಾರಿ‌ ಮತದಾರರು ಕೋಮು ಪಕ್ಷವಾದ ಬಿಜೆಪಿಯನ್ನು ತೆಗೆದು ಹಾಕಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿನ ಕಡಪಾ‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ 2018 ರಲ್ಲಿ ಸಹ ಜನರ ಆಶೀರ್ವಾದ ಇರಲಿಲ್ಲ. ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಆಗ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿತ್ತು, ನಾವು 80 ಸ್ಥಾನ ಗೆದ್ದಿದ್ದೆವು. ರಾಜ್ಯಪಾಲರು ಆಗ ಯಡಿಯೂರಪ್ಪಗೆ ಪ್ರಮಾಣ ವಚನಕ್ಕೆ ಅವಕಾಶ ನೀಡಿದ್ರು. ಆದರೆ, ಯಡಿಯೂರಪ್ಪ ಬಹುಮತ ಸಾಬೀತು ಮಾಡಲು ಆಗಲಿಲ್ಲ. ಆ ಮೇಲೆ ರಾಜೀನಾಮೆ ನೀಡಿದ್ರು. ಬಳಿಕ ಕುಮಾರಸ್ವಾಮಿಯನ್ನ ಸಿಎಂ ಮಾಡಿದ್ದು, ನಾವು ಹೆಚ್ಚು ಸ್ಥಾನ ಗೆದ್ದರೂ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಬೆಂಬಲ‌‌ ನೀಡಿದ್ದೆವು. ಆದರೆ, ಕುಮಾರಸ್ವಾಮಿ ತಾಜ್​ವೆಸ್ಟೆಂಡ್​ನಲ್ಲಿ ಕುಳಿತು ಸರ್ಕಾರ ನಡೆಸಿದ್ರು ಎಂದು ಹರಿಹಾಯ್ದರು.

ನಾವು ಭ್ರಷ್ಟಾಚಾರದ ಆರೋಪ ಮಾಡಿದಾಗ ಬೊಮ್ಮಾಯಿ ದಾಖಲಾತಿ‌ ಕೊಡಿ ಅಂತಾರೆ. 40% ಕಮಿಷನ್ ಪಡೆದಿರುವುದು ಗುತ್ತಿಗೆದಾರರ ಪತ್ರ ದಾಖಲೆ ಅಲ್ಲವಾ?, ಸಂತೋಷ್​ ಪಾಟೀಲ್ ಎಂಬ ಗುತ್ತಿಗೆದಾರ ಕೆಲಸ ಮಾಡಿ ಕಮಿಷನ್ ಕೊಡದೆ ಆತ್ಮಹತ್ಯೆ ಮಾಡಿಕೊಂಡ. ಕೆ ಎಸ್ ​ಈಶ್ವರಪ್ಪನೇ ಸಂತೋಷ್​ ಸಾವಿಗೆ ಕಾರಣ, ಇದು ದಾಖಲೆ ಅಲ್ಲವಾ ಬೊಮ್ಮಾಯಿ ಅವರೇ ಎಂದು ಪ್ರಶ್ನಿಸಿದರು. ನಿನ್ನೆ ಮಾಡಾಳ್ ವಿರುಪಾಕ್ಷಪ್ಪ ಎಂಬ ಶಾಸಕನ ಮಗ ಪ್ರಶಾಂತ ಗುತ್ತಿಗೆದಾರನ ಬಳಿ ಲೋಕಾಯುಕ್ತಗೆ ಸಿಕ್ಕಿ ಬಿದ್ದಿದ್ದಾನೆ. ವಿರುಪಾಕ್ಷಪ್ಪ ಯಡಿಯೂರಪ್ಪನವರ ಸ್ಟ್ರಾಂಗ್ ಫಾಲೋವರ್, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದವರು ಸಾಕ್ಷಿ ಅಲ್ಲವಾ‌? ಎಂದು ಬೊಮ್ಮಾಯಿ ಅವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು.

ಪಿಎಸ್ಐ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಆಗಿದೆ. ಕಣ್ಣು ಮುಚ್ಚಿ ಬೆಕ್ಕು ಹಾಲು‌ ಕುಡಿದರೆ ಏನೂ ಕಾಣುವುದಿಲ್ಲ ಅಂತಾ ಇವರು ಅಂದುಕೊಂಡಿದ್ದಾರೆ. ಆದ್ರೆ, ಜನ ಕಣ್ಣು ಮುಚ್ಚಿ ಕುಳಿತಿಲ್ಲ. ಇದು ಎಲ್ಲರಿಗೂ ಅರ್ಥ ಆಗುತ್ತದೆ. ಕಳೆದ 40 ವರ್ಷದಲ್ಲಿ ಇಂತಹ ಕೆಟ್ಟ ಸರ್ಕಾರವನ್ನ ನಾನು ನೋಡಿಲ್ಲ, ಈ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾ?, ಬರಬಾರದು. ಮೋದಿ ಅವರು ಪ್ರಧಾನಿ ಆದ ಮೇಲೆ ನಾ ಖಾವುಂಗಾ, ನಾ ಖಾನೆ ದುಂಗಾ ಎಂದ್ರು. ಬೊಮ್ಮಾಯಿ ಸರ್ಕಾರ ನಮ್ಮನ್ನು ಸುಲಿಗೆ ಮಾಡಿದೆ ಎಂದರು.

ಇದನ್ನೂ ಓದಿ:ಲಂಚ ಸ್ವೀಕಾರ ಪ್ರಕರಣ: ಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದು ಕಾಂಗ್ರೆಸ್​​ನಿಂದ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ

ಇವರಿಂದ ರಾಜ್ಯ ಉಳಿಯಲ್ಲ, ಭ್ರಷ್ಟಾಚಾರ ವ್ಯಾಪಕವಾಗಿದೆ. ಈಗ 50, 60% ಭ್ರಷ್ಟಾಚಾರ ಆಗಿದೆ. ಆರ್ಥಿಕ ದಿವಾಳಿ ಮಾಡಿದ್ದಾರೆ. ನಾನು ಅಧಿಕಾರ ಬಿಟ್ಟಾಗ ರಾಜ್ಯದ ಮೇಲೆ 2 ಲಕ್ಷದ 42 ಸಾವಿರ ಕೋಟಿ ಸಾಲ ಇತ್ತು. ಈಗ ಅವರು ಹೇಳಿದ ಪ್ರಕಾರ, 3 ಲಕ್ಷದ 72 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇವರು ಮಜಾ ಮಾಡೋಕೆ, ಲೂಟಿ ಮಾಡೋಕೆ ಬಂದಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಯಾರಾದರೂ ಭಾಗವಹಿಸಿದ್ದಾರಾ?. ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ. ಮಹಾತ್ಮ ಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ್ಯ ಬಂದಿದ್ದು, ಒಬ್ಬ ಆರ್ ಎಸ್ ಎಸ್ ನವರಾದರೂ ಭಾಗವಹಿಸಿದ್ದಾರಾ?,‌ ಇವರಿಗೆ ಅಧಿಕಾರ ಕೊಡಬೇಕಾ?, ಮೋದಿ ಹೇಳ್ತಾರೆ ಅಚ್ಛೇ ದಿನ್​ ಅಂತ, ಅದು ಬಂತಾ?, ಮಜ್ಜಿಗೆಗೆ ಟ್ಯಾಕ್ಸ್ ಹಾಕಿದ್ರು ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ, ಎಲ್ಲಿದೆ ಒಳ್ಳೆಯ ದಿನಗಳು. ಗೊಬ್ಬರದ ಬೆಲೆ ಹೆಚ್ಚಾಗಿದೆ, ಬೆಲೆ ಏರಿಸಿ ರೈತರಿಗೆ 6 ಸಾವಿರ ಕೊಡುತ್ತೇನೆ ಅಂತಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು, ಇವರನ್ನು ಕಿತ್ತು ಹಾಕಬೇಕು. ಸುಳ್ಳು ಹೇಳಿ ಕೆಲಸ ಮಾಡದೇ ನಾವು ಮಾಡಿದ‌ ಕೆಲಸಕ್ಕೆ ಗುದ್ದಲಿ ಪೂಜೆ ಮಾಡ್ತಾರೆ. ಇವರು ಹಿಟ್ಲರ್ ವಂಶಸ್ಥರು, ಸಾಮಾಜಿಕ ನ್ಯಾಯಕ್ಕೆ ವಿರೋಧ ಮಾಡುವ ಇವರು ಮನುಸ್ಮೃತಿ ಯಲ್ಲಿ ನಂಬಿಕೆ ಇಟ್ಟವರು. ದಲಿತರು, ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಯಾರೂ ಅವರಿಗೆ ವೋಟು ಹಾಕಬಾರದು ಎಂದು ವಾಗ್ದಾಳಿ ನಡೆಸಿದರು.

Last Updated :Mar 4, 2023, 12:27 PM IST

ABOUT THE AUTHOR

...view details