ಕರ್ನಾಟಕ

karnataka

ರಾಜ್ಯದಲ್ಲಿ ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಖಚಿತ: ಪ್ರಹ್ಲಾದ್ ಜೋಶಿ

By

Published : May 10, 2023, 11:55 AM IST

ರಾಜ್ಯದಲ್ಲಿ 113ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

Pralhad Joshi Casted His Vote
ಕುಟುಂಬಸ್ಥರ ಜೊತೆ ಬಂದು ಮತ ಚಲಾಯಿಸಿದ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಭಾಪತಿ ಹೊರಟ್ಟಿ ಪ್ರತಿಕ್ರಿಯೆ...

ಹುಬ್ಬಳ್ಳಿ: ಕೇಶ್ವಾಪುರದ ವಿವೇಕಾನಂದ ಕಾಲೋನಿಯ ರೋಟರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮತಗಟ್ಟೆ ನಂ. 109 ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಬೆಳಿಗ್ಗೆಯಿಂದ ಮತಗಟ್ಟೆಗಳ ಎದುರು ಜನರು ಸರತಿಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ರಾಜ್ಯದಾದ್ಯಂತ ಪ್ರಜಾತಂತ್ರ ಹಬ್ಬಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ" ಎಂದರು.

ಸುಶಿಕ್ಷಿತರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿತ್ತು. ಆದರೆ ಈ ವಿವೇಕಾನಂದ ಕಾಲೋನಿಯಲ್ಲಿ ಬಹುತೇಕ ಸುಶಿಕ್ಷಿತರೇ ಇದ್ದು, ಬೆಳಿಗ್ಗೆಯಿಂದಲೇ ಮತಚಲಾಯಿಸುವ ಉತ್ಸಾಹ ತೋರುತ್ತಿದ್ದಾರೆ. ಇದು ಬಿಜೆಪಿಗೆ ಬಹುಮತ ದೊರೆಯುವ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟರು. "ರಾಜ್ಯದಲ್ಲಿ 113ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು ಮತ್ತೊಮ್ಮೆ ಡಬ್ಬಲ್ ಎಂಜಿನ್ ಸರ್ಕಾರ ಬರುವುದು ಖಚಿತ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು: ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕುಟುಂಬ ಸಮೇತವಾಗಿ ಆಗಮಿಸಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಸದ್ಯ ರಾಜಕೀಯ ವ್ಯವಸ್ಥೆ ನೋಡಿದರೆ ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು ಎಂಬ ಪರಿಸ್ಥಿತಿ ಎದುರಾಗಿದೆ. ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿರುವ ಮಾಹಿತಿ ತಿಳಿದು ಬಂದಿದೆ. ಇದು ವಿಷಾದನೀಯ ಸಂಗತಿ. ಒಂದೊಂದು ಮತಕ್ಕೆ ಐದು ಸಾವಿರ ಕೊಟ್ಟಿದ್ದಾರೆ ಎಂಬುದು ಗೊತ್ತಾಗಿದೆ. ಕೆಲವು ಮತದಾರರು ಆಮಿಷಕ್ಕೆ ಒಳಗಾಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಈ ರೀತಿ ಆಗಬಾರದು‌" ಎಂದು ಕಳವಳ ವ್ಯಕ್ತಪಡಿಸಿದರು.

ಆಸೆ ಆಕಾಂಕ್ಷಿಗಳಿಗೆ ಬಲಿಯಾಗದೆ ಜನರು ಅಭಿವೃದ್ಧಿ ನೋಡಿ ಮತದಾನ ಮಾಡಬೇಕು. ಇವತ್ತಿನ ರಾಜಕಾರಣ ಕುಲಗೆಟ್ಟ ಹೋಗಿದೆ. ಅಭಿವೃದ್ಧಿ ಆಧಾರಿತ ರಾಜಕಾರಣ ಮೂಲೆ ಸೇರಿದೆ. ಕೇವಲ ಆರೋಪ, ಪ್ರತ್ಯಾರೋಪಗಳಿಗೆ ಪ್ರಚಾರ ಸೀಮಿತ ಆಗಿತ್ತು. ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ:'ಇದು ಕಾಂಗ್ರೆಸ್ vs ಬಿಜೆಪಿ ಚುನಾವಣೆ; ಶೆಟ್ಟರ್ vs ಕೇಂದ್ರದ ಚುನಾವಣೆ ಅಲ್ಲ'

ABOUT THE AUTHOR

...view details