ಹುಬ್ಬಳ್ಳಿ: ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗಿದ್ದು ಪೊಲೀಸರಿಗೆ ಕಳ್ಳತನವಾದ ಮೊಬೈಲ್ಗಳ ಹುಡುಕಾಟವೇ ದೊಡ್ಡ ಸವಾಲಾಗಿತ್ತು. ಇದರಿಂದ ಜಿಲ್ಲಾ ಪೊಲೀಸ್ ತಂಡವು ಕಳ್ಳತನವಾದ ಮೊಬೈಲ್ ಪತ್ತೆಗೆ ಸಹಾಯವಾಗಲು ಹೊಸ ತಂತ್ರಜ್ಞಾನ(KYM)ವನ್ನು ಬಳಸಿಕೊಳ್ಳಲು ಶುರುಮಾಡಿದರು. ಇದೀಗ ಇದೇ ತಂತ್ರಜ್ಞಾನದಿಂದ ಮೊಬೈಲ್ ಕಳೆದುಕೊಂಡ 112 ಮೊಬೈಲ್ಗಳನ್ನು ವಾರಸುದಾರರಿಗೆ ಕೊಡಲಾಗಿದೆ.
ಈ ಮೂಲಕ ತಂತ್ರಜ್ಞಾನ ಬಳಸಿ ಈ ಮಹತ್ವದ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಹೇಳಿದ್ದಾರೆ. ಹು-ಧಾ ಕಮೀಷನರೇಟ್ನಿಂದ ವಾರಸುದಾರರ ಮೊಬೈಲ್ ಫೋನ್ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾಧ್ಯಮವದರೊಂದಿಗೆ ಮಾತನಾಡಿ, ಕಳ್ಳತನವಾದ ಮೊಬೈಲ್ಗಳನ್ನು ವಾರಸುದಾರಿಗೆ ನೀಡುವ ಕಾರ್ಯಕ್ರಮ ಇದಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಕಳ್ಳತನವಾದ ಮೊಬೈಲ್ನ್ನು ನೂರಕ್ಕೆ ನೂರರಷ್ಟು ಪತ್ತೆ ಮಾಡಲು ಆಗುವುದಿಲ್ಲ. ಆದರೇ ವಿಶಿಷ್ಟ ತಂತ್ರಜ್ಞಾನ ಬಳಸಿ ಪ್ರಯತ್ನ ಮಾಡಲಾಗುತ್ತಿದ್ದು, ನಮಗೆ ಮಾಹಿತಿ ಬಂದ ತಕ್ಷಣ ಹುಡುಕಿಕೊಡುವ ಪ್ರಾಮಾಣಿಕ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅಲ್ಲದೇ ಪ್ರತಿ ತಿಂಗಳು ಮೊಬೈಲ್ ವಾಪಸ್ ಕೊಡುವ ಕಾರ್ಯ ನಿರಂತರವಾಗಿರಲಿದೆ ಎಂದು ತಿಳಿಸಿದ್ದಾರೆ.
ಕಳೆದ 2 ತಿಂಗಳಿನಲ್ಲಿ 500ಕ್ಕೂ ಹೆಚ್ಚು ಮೊಬೈಲ್ ಪತ್ತೆ ಮಾಡುವ ಕೆಲಸ ಮಾಡಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಮೊಬೈಲ್ ವಾಪಸ್ ಮಾಡಿದ ಸಾಧನೆ ಹು-ಧಾ ಪೊಲೀಸ್ ಕಮೀಷನರೇಟ್ ತಂಡ ಮಾಡಿದೆ. ಮುಂದೆಗೂ ಇಂತಹ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.