ಕರ್ನಾಟಕ

karnataka

ಸುವರ್ಣಸೌಧದ ಬಳಿ ಶಾಸಕರ ಭವನ ಕಟ್ಟಿಸುವ ಬಗ್ಗೆ ಚರ್ಚೆ ನಡೆದಿದೆ: ಬಸವರಾಜ್ ಹೊರಟ್ಟಿ

By ETV Bharat Karnataka Team

Published : Nov 29, 2023, 6:28 PM IST

Updated : Nov 29, 2023, 6:41 PM IST

ಬೆಳಗಾವಿ ಸುವರ್ಣ ಸೌಧದ ಬಳಿ ಶಾಸಕರ ಭವನ ಕಟ್ಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.

ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ

ಸುವರ್ಣ ಸೌಧದ ಬಳಿ ಶಾಸಕರ ಭವನ

ಧಾರವಾಡ : ಬೆಳಗಾವಿ ಸುವರ್ಣ ಸೌಧ ರಸ್ತೆ ಪಕ್ಕದಲ್ಲಿ 20 ಎಕರೆ ಜಮೀನಿದೆ. ಅಲ್ಲಿಯೇ ಶಾಸಕರ ಭವನ ಮಾಡಬೇಕೆಂದು ಚರ್ಚೆ ನಡೆದಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿವೇಶನ ಸಮಯದಲ್ಲಿ ವಸತಿಗಾಗಿಯೇ 4 ಕೋಟಿ ರೂ. ಖರ್ಚು ಆಗುತ್ತಿದೆ. ಶಾಸಕರ ಭವನ ಕಟ್ಟಿಸಿದರೆ ಈ ಖರ್ಚು ಅನ್ನು ಕಡಿಮೆ ಮಾಡಬಹುದು. ಉಳಿದ ಸಮಯದಲ್ಲಿ ಖಾಲಿ ಬೀಳುವುದರಿಂದ ತಾಜ್ ನಂತಹ ದೊಡ್ಡ ಹೋಟೆಲ್ ನವರಿಗೆ ಮಾತನಾಡಿಸಿ ಒಪ್ಪಂದದ ಮೇಲೆ ಕೊಡಬಹುದು. ಶಾಸಕರಿಗಾಗಿ ಅದರಲ್ಲಿ 10 ರೂಮ್​ಗಳನ್ನು ಖಾಯಂ ಆಗಿ ಇಡಬೇಕು. ಉಳಿದ ರೂಮ್ ಅವರು ಉಪಯೋಗಿಸಬಹುದು. ಅಧಿವೇಶನದ ವೇಳೆ ಎಲ್ಲ ರೂಂ ಗಳನ್ನು ಶಾಸಕರಿಗೆ ನೀಡುವ ಚರ್ಚೆ ಮಾಡಿದ್ದೇವೆ ಎಂದರು

ಅಭಿವೃದ್ಧಿ ಬಗ್ಗೆ ಬಿ.ಆರ್. ಪಾಟೀಲ್ ಸಿಎಂಗೆ ಪತ್ರ ಬರೆದಿದ್ದು, ಬೆಳಗಾವಿ ಅಧಿವೇಶನದಲ್ಲಿ ಪತ್ರದ ವಿಚಾರ ಚರ್ಚೆಗೆ ಬರುತ್ತಾ ಎಂಬುದನ್ನು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸುಳಿವು ಕೊಟ್ಟಿದ್ದಾರೆ. ಈಗ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಕಲಾಪದ ವೇಳೆ ಅದರ ಬಗ್ಗೆ ಮಾತನಾಡಿದರೆ ಅವಕಾಶ ಕೊಡುತ್ತೇನೆ. ಚರ್ಚೆ ಮಾಡಲು ಅವಕಾಶ ನೀಡುತ್ತೇನೆ. ಅಧಿವೇಶನದ ವೇಳೆ ಯಾವುದಕ್ಕೂ ಸ್ಪಂದಿಸಿಲ್ಲ ಅಂತಾರೆ.

ಅದಕ್ಕಾಗಿ ಮಂತ್ರಿಗಳು ಹೆಚ್ಚಿನ ಸಮಯ ಅಧಿವೇಶನದಲ್ಲಿ ಕುಳಿತುಕೊಳ್ಳಬೇಕು. ಜಿಲ್ಲಾ ಪ್ರವಾಸ ಮಾಡಬೇಕು, ಜನರ ಕಷ್ಟಕ್ಕೆ ಸ್ಪಂದಿಸಬೇಕು. ಅಲ್ಲದೆ, ಶಾಸಕರು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ತಯಾರಿ ಮಾಡಿಕೊಂಡು ಬರಬೇಕು. ಕಾರ್ಯಕ್ರಮ ಜಾರಿಗೆ ತರುವಂತೆ ಕೆಲಸ ಸರ್ಕಾರ ಮಾಡಬೇಕು. ದುರ್ದೈವದಿಂದ ಈ ಕೆಲಸ ಬಹಳ ಕಡಿಮೆಯಾಗಿದೆ. ಇದು ಸುಧಾರಣೆ ಆಗಬೇಕು ಎಂದು ಬಸವರಾಜ್ ಹೊರಟ್ಟಿ ತಿಳಿಸಿದರು.

ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಹೆಚ್ಚು ಚರ್ಚೆ ಮಾಡುವ ವಿಚಾರಕ್ಕೆ ಮಾತನಾಡಿದ ಬಸವರಾಜ್ ಹೊರಟ್ಟಿ, ಡಿಸೆಂಬರ್ 5, 6 ರಂದು ಪ್ರಶ್ನೋತ್ತರ ಬಳಿಕ ಉತ್ತರ ಕರ್ನಾಟಕ ಚರ್ಚೆ ಬಗ್ಗೆ ಸಮಯ ನೀಡುತ್ತೇನೆ. ಯಾರು ಏನು ಬೇಕಾದರೂ ಕೇಳಬಹುದು, ಅದನ್ನು ಅಜೆಂಡಾದಲ್ಲಿ ಹಾಕಿಸಿದ್ದೇನೆ. ಈ ಹಿಂದೆ ಅಧಿವೇಶನದಲ್ಲಿ ಗುರುವಾರ, ಶುಕ್ರವಾರ ಮಾತ್ರ ಚರ್ಚೆ ಇತ್ತು. ಆದರೇ, ಆಗ ಸಮಯ ಸಿಗುತ್ತಿರಲಿಲ್ಲ, ಚರ್ಚೆ ಸರಿಯಾಗಿ ಆಗುತ್ತಿರಲಿಲ್ಲ. ರಾಜ್ಯದ ಯಾರೇ ಶಾಸಕರು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಿದರೆ, ಅವರಿಗೆ ಮೊದಲ ಪ್ರಾಶಸ್ತ್ಯ ಕೊಡುತ್ತೇನೆ. ಪಕ್ಷ ಭೇದ ಮರೆತು, ಉತ್ತರ ಕರ್ನಾಟಕ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತೇನೆ. ಸರ್ಕಾರಕ್ಕೆ ಮಾರ್ಗದರ್ಶನ ಕೊಡುವ ಕೆಲಸ ಮಾಡುತ್ತೇನೆ ಎಂದು ನುಡಿದರು.

ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಅಧಿವೇಶಕ್ಕೆ ಭಾಗಿಯಾಗದ ಹಿನ್ನೆಲೆ ಕೆಲವರು ಹೆಚ್ಚಾಗಿ ಅಧಿವೇಶನ ಪ್ರತಿಭಟನೆಗೆ ಮಾತ್ರ ಸೀಮಿತ ಅಂತ ಹೇಳುತ್ತಾರೆ. ಅದಕ್ಕೆ ಈ ಬಾರಿ ನಾನು ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೇನೆ. ಕಡ್ಡಾಯವಾಗಿ ಎಲ್ಲರೂ ಅಧಿವೇಶನಕ್ಕೆ ಭಾಗಿಯಾಗಲು ಕೋರಿದ್ದೇನೆ. ಈ ಹಿಂದಿನಂತೆ ನಾವು ಹೆಚ್ಚು ಶಾಸಕರಿಂದ ನಿರೀಕ್ಷೆ ಮಾಡುವ ಹಾಗಿಲ್ಲ. ಶಾಸಕರು ಸಹಿ ಮಾಡಿ ಹೋಗುತ್ತಾರೆ. ಕೆಲವು ಬಾರಿ ಬರೋದೇ ಇಲ್ಲ. ಇವತ್ತಿನ ರಾಜಕಾರಣದಲ್ಲೀ ಕಮಿಟ್ಮೆಂಟ್ ಇಲ್ಲ. ಎಲ್ಲ ಪಕ್ಷದಲ್ಲಿ ಇದೇ ರೀತಿ ಆಗಿದೆ. ಸರ್ಕಾರ ಇರಲಿ ಪ್ರತಿಪಕ್ಷ ಇರಲಿ, ಎಲ್ಲರೂ ಕುಳಿತುಕೊಂಡು ಗಂಭೀರ ಚರ್ಚೆ ಮಾಡಿದರೆ ಅದರಿಂದ ಫಲಿತಾಂಶ ಬರಲಿದೆ. ಬೆಳಗಾವಿ ಅಧಿವೇಶನ ಯಶಸ್ವಿ ಮಾಡಲು ಹೇಳಿದ್ದೇನೆ. ಈ ಬಗ್ಗೆ ಸಿಎಂ ಸೇರಿ ನಾಲ್ಕೈದು ಸಚಿವರ ಜೊತೆ ಮಾತನಾಡಿದ್ದೇನೆ.

ಪ್ರತಿ ಬಾರಿಗಿಂತ ಈ ಬಾರಿ ಸುಧಾರಣೆ ಆಗುವ ಭರವಸೆ ಇದೆ. ಬೆಳಗಾವಿ ಅಧಿವೇಶನಕ್ಕೆ ಹೆಚ್ಚಿನ ಸಮಯಾವಕಾಶ ಕೊಡಬೇಕು. ಕನಿಷ್ಠ 20 ರಿಂದ 25 ದಿನ ಅಧಿವೇಶನಕ್ಕೆ ಕೊಡಬೇಕು. ಯಾವ ಸರ್ಕಾರ ಬಂದರೂ 15 ದಿನಕ್ಕೆ ಮುಕ್ತಾಯವಾಗುತ್ತದೆ. ಅದು ಸರಿಯಲ್ಲ, ಇನೊಂದು ವಾರ ಮುಂದೆ ಅಧಿವೇಶನ ನಡೆಸುವ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಬಸವರಾಜ್ ಹೊರಟ್ಟಿ ಭರವಸೆ ನೀಡಿದರು.

ಇದನ್ನೂ ಓದಿ :ನಿಗ‌ಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ನೀಡಿದರೆ ಸರ್ಕಾರದ ವಿರುದ್ಧ ಪಿಐಎಲ್ ಸಲ್ಲಿಕೆ: ಭೀಮಪ್ಪ ಗಡಾದ

Last Updated : Nov 29, 2023, 6:41 PM IST

ABOUT THE AUTHOR

...view details