ಕರ್ನಾಟಕ

karnataka

ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ: ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

By

Published : May 26, 2023, 1:49 PM IST

ಆಂಬ್ಯುಲೆನ್ಸ್​ ಸಿಬ್ಬಂದಿ ಅಶೋಕ ಪೂಜಾರ ಹಾಗೂ ಬಸವರಾಜ ರಾಥೋಡ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.

Delivery in Ambulance: Woman gave birth to baby boy
ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ: ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಹುಬ್ಬಳ್ಳಿ:ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ 108 ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆಯಾದ ಘಟನೆ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಗುಡೇನಕಟ್ಟೆ ಗ್ರಾಮದ ಆಫ್ರಿನ್ ದಾದಾಪೀರ ಅಜಮಕಾನವರ ಎಂಬುವವರೇ ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದಾರೆ.

ಇವರಿಗೆ ಬುಧವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು 108ಕ್ಕೆ ಕರೆ ಮಾಡಿದಾಗ ಅಲ್ಪ ಸಮಯದಲ್ಲಿಯೇ ಆಂಬ್ಯುಲೆನ್ಸ್ ಮನೆಗೆ ಬಂದಿದೆ. ನಂತರ ಗರ್ಭಿಣಿಯನ್ನು ಕರೆದುಕೊಂಡು ಹೋಗುವಾಗ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದುದನ್ನು ನೋಡಿದ ಆಂಬ್ಯುಲೆನ್ಸ್ ಸಿಬ್ಬಂದಿ ಅಶೋಕ ಪೂಜಾರ ಮತ್ತು ಬಸವರಾಜ ರಾಥೋಡ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು. ಆಫ್ರಿನ್ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಲೂಕಾಸ್ಪತ್ರೆಗೆ ಸೇರಿಸಲಾಗಿದೆ. 108 ಸಿಬ್ಬಂದಿ ಬಸವರಾಜ ರಾಥೋಡ ಹಾಗೂ ಅಶೋಕ ಪೂಜಾರಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಬಸ್​ನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದ ಕಂಡಕ್ಟರ್​: ಹತ್ತು ದಿನಗಳ ಹಿಂದೆಯಷ್ಟೇ ಸರ್ಕಾರಿ ಬಸ್​ನಲ್ಲಿಯೇ ನಿರ್ವಾಹಕಿ ನೋವು ಕಾಣಿಸಿಕೊಂಡ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಹೆರಿಗೆಗೆ ದಿನ ಹತ್ತಿರ ಬಂದಿದ್ದು, ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಹೋಗಲು ಆರ್ಥಿಕವಾಗಿ ಸಬಲವಾಗಿರ ಕಾರಣ ಗರ್ಭಿಣಿ ಕುಟುಂಬದ ಸದಸ್ಯರ ಜೊತೆ ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ಆಸ್ಪತ್ರೆಗೆ ಹೊರಟಿದ್ದರು. ಆ ಮಹಿಳೆ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದರು.

ಬಸ್​ ಬೆಂಗಳೂರು ಚಿಕ್ಕಮಗಳೂರು ಮಾರ್ಗಮಧ್ಯೆ ಸಂಚರಿಸುತ್ತಿದ್ದ ವೇಳೆ ಮಹಿಳೆಗೆ ಹೆರಿಗೆ ನೋವಿ ಕಾಣಿಸಿಕೊಂಡಿತ್ತು. ಸುತ್ತಮುತ್ತ ಹತ್ತಾರು ಕಿಲೋ ಮೀಟರ್​ ವರೆಗೆ ಯಾವುದೇ ಆಸ್ಪತ್ರೆ ಇರದ ಕಾರಣ, ಬಸ್​ ನಿರ್ವಾಹಕಿ ಬಸ್​ ನಿಲ್ಲಿಸಿ, ಬಸ್​ನಲ್ಲಿದ್ದ 45 ಪ್ರಯಾಣಿಕರನ್ನು ಕೆಳಗಿಳಿಸಿ, ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆರಿಗೆ ಮಾಡಿಸಿದ್ದರು. ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಷ್ಟೇ ಅಲ್ಲದೆ ಗರ್ಭಿಣಿ ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದ್ದ ಕಾರಣ, ತಕ್ಷಣದ ಖರ್ಚಿಗೆಂದು ಕಂಡಕ್ಟರ್​ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಳಿ ಹಣ ಸಂಗ್ರಹಿಸಿ, ತಾವೂ ಸ್ವಲ್ಪ ಹಣ ಸೇರಿಸಿ ಮಹಿಳೆಗೆ ಕೊಟ್ಟು ಕಳುಹಿಸಿದ್ದರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ನಿರ್ವಾಹಕಿ ಸಮಯಪ್ರಜ್ಞೆ ಹಾಗೂ ಮಾನವೀಯ ಗುಣಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಎಲ್ಲೆಡೆಯಿಂದಲೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ಆರೋಗ್ಯ ಕೇಂದ್ರದ ಬಾಗಿಲು ಬಂದ್​: ಆಸ್ಪತ್ರೆ ಹೊರಗೆ ಮಗುವಿಗೆ ಜನ್ಮ ನೀಡಿದ ಮಹಿಳೆ

ABOUT THE AUTHOR

...view details