ಕರ್ನಾಟಕ

karnataka

ಜೇನು ನೊಣಗಳಿಂದ ಕಚ್ಚಿಸಿಕೊಂಡ್ರೂ ಸಿಹಿ ಹಂಚಿದ್ದೇನೆ: ಸಿಎಂ ಬೊಮ್ಮಾಯಿ

By

Published : Mar 26, 2023, 1:24 PM IST

ಮುಸ್ಲಿಮರನ್ನು ಇಡಬ್ಲ್ಯುಎಸ್‌ಗೆ ಸೇರ್ಪಡೆ ಮಾಡಿರುವುದು ಮತ್ತು ಒಳ ಮೀಸಲಾತಿ ವಿಚಾರದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ, ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರ 30 ವರ್ಷಗಳಿಂದ ಇತ್ತು. ಆದರೆ, ಕಾಂಗ್ರೆಸ್​ನವರು ಮೂಗಿಗೆ ತುಪ್ಪ ಹಚ್ಚಿ ಕೊನೆ ಘಳಿಗೆಯಲ್ಲಿ ಕೈ ಕೊಟ್ಟರು. ನಮಗೆ ಬದ್ಧತೆ ಇದೆ. ಇದರ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟ ಉಪ ಸಮಿತಿ ರಚಿಸಿ, ಕಾನೂನು ಪ್ರಕಾರ ಮಾಡಿದ್ದೇವೆ. ನಾವು ಮಾಡಲು ಆಗದ್ದನ್ನು ಬಿಜೆಪಿಯವರು ಮಾಡಿದ್ದಾರೆ ಅಂತಾ ಹತಾಶೆಯಿಂದ ಕಾಂಗ್ರೆಸ್​ನವರು ಮಾತನಾಡುತ್ತಿದ್ದಾರೆ. ಅದ್ಯಾವುದಕ್ಕೂ ಬೆಲೆ ಇಲ್ಲ. ಅವರು ಯಾವಾಗಲೂ ಎಸ್ ಸಿ, ಎಸ್ ಟಿ ಸಮುದಾಯದವರನ್ನು ಯಾಮಾರಿಸಿಕೊಂಡೇ ಬಂದಿದ್ದಾರೆ ಎಂದರು.

ಸಾಮಾಜಿಕ, ಅಭಿವೃದ್ಧಿ ವಿಚಾರದಲ್ಲಿ ಸಂಘ ಸಂಸ್ಥೆಗಳ ಜೊತೆ ಚರ್ಚಿಸಿ ಹಲವಾರು ತೀರ್ಮಾನ ಮಾಡಿದ್ದೇವೆ. ನಿರ್ಣಾಯಕ ತೀರ್ಮಾನ ಕೈಗೊಳ್ಳಲು ನಮ್ಮ ಬದ್ಧತೆಯೇ ಕಾರಣ. ಇವರೆಲ್ಲ ಜೇನುಗೂಡಿಗೆ ಕೈ ಹಾಕ್ತಿದ್ದಾರೆ ಅಂತ ಹೇಳ್ತಿದ್ರು. ಜೇನು ಗೂಡಿಗೆ ಕೈ ಹಾಕದೇ ಇದ್ದಲ್ಲಿ ತುಪ್ಪ ಸಿಗುವುದಿಲ್ಲ ಅಂತ ಗೊತ್ತಿತ್ತು. ನಾನು ಜೇನುಗೂಡಿಗೆ ಕೈ ಹಾಕ್ತೇನೆ, ಜೇನುನೊಣದಿಂದ ಕಚ್ಚಿಸಿಕೊಂಡರೂ ಪರವಾಗಿಲ್ಲ, ಆ ಜನಾಂಗಕ್ಕೆ ಜೇನಿನ ಹನಿಯನ್ನ ಕೊಡಿಸಲು ಸಿದ್ಧ ಅಂತ ಹೇಳಿದ್ದೆ. ಈಗ ಅದನ್ನು ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಒಳ ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸು; ಸಿಎಂಗೆ ಮಾದಿಗ ಸಮುದಾಯದಿಂದ ಅಭಿನಂದನೆ

ಮುಸ್ಲಿಮರನ್ನು ಇಡಬ್ಲ್ಯುಎಸ್ ಸೇರ್ಪಡೆ ಮಾಡಿರೋ ವಿಚಾರದ ಕುರಿತು ಪ್ರತಿಕ್ರಿಯಿಸಿ, ಮೊದಲು 4 % ಮೀಸಲಾತಿ ಇತ್ತು. ಈಗ ಶೇ. 10 ರಷ್ಟು ಮೀಸಲಾತಿ ಇರೋ ಕಡೆ ಹಾಕಿದ್ದೇವೆ. ಅದು ಹೇಗೆ ಅನ್ಯಾಯ ಆಗುತ್ತದೆ. ಅಲ್ಪಸಂಖ್ಯಾತರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಂಡಿದ್ದೇವೆ ಎಂದ ತಿಳಿಸಿದರು.

ಮಹದಾಯಿ ಯೋಜನೆ ಕಾಮಗಾರಿ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣಾ ಪ್ರಕ್ರಿಯೆ ಇದಕ್ಕೆ ತೊಡಕಾಗಲ್ಲ. ನೀತಿ ಸಂಹಿತೆ ಜಾರಿಯಾದ್ರು ಟೆಂಡರ್ ಪ್ರಕ್ರಿಯೆ ನಡೆಯುತ್ತೆ. ಅಷ್ಟರೊಳಗಾಗಿ ಅರಣ್ಯ ಇಲಾಖೆ ಕ್ಲಿಯರೆನ್ಸ್ ಸಿಗೋ ವಿಶ್ವಾಸವಿದೆ. ಚುನಾವಣೆ ನಂತರ ಕಾಮಗಾರಿ ಆರಂಭವಾಗುತ್ತದೆ. ಚುನಾವಣೆ ಘೋಷಣೆ ಆದ ನಂತರವೇ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತೆ. ಸರಿಯಾದ ಸಮಯದಲ್ಲಿ ನಮ್ಮ ಪಟ್ಟಿ ಬಿಡುಗಡೆಯಾಗುತ್ತೆ. ಇವತ್ತಿನ ಕೋರ್ ಕಮಿಟಿಯಲ್ಲಿ ಚುನಾವಣಾ ನಿರ್ವಹಣೆ ಬಗ್ಗೆ ಚರ್ಚೆಯಾಗುತ್ತೆ ಎಂದರು.

ಇದನ್ನೂ ಓದಿ:ಎಸ್​ಸಿ ಒಳಮೀಸಲಾತಿ, ಒಕ್ಕಲಿಗರಿಗೆ ಶೇ 6, ಲಿಂಗಾಯತರಿಗೆ ಶೇ 7 ಮೀಸಲಾತಿ ಪ್ರಮಾಣ ಘೋಷಣೆ: ಮುಸ್ಲಿಮರ ಓಬಿಸಿ ಕೋಟಾ ರದ್ದು

ಸಿಎಂ ಮನೆಗೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ‌: ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ ಆದರ್ಶ ನಗರದಲ್ಲಿನ ಸಿಎಂ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಆಗಮಿಸಿದ್ದರು. ಜಾರಕಿಹೊಳಿ ಭೇಟಿ ಕುತೂಹಲ ಕೆರಳಿಸಿದ್ದು, ಸಿಎಂ ಜೊತೆಗೆ ಒಂದು ಗಂಟೆಗೂ ಹೆಚ್ಚಿನ ಕಾಲ ಸುದೀರ್ಘ ಚರ್ಚೆ ನಡೆಸಿ ವಾಪಸ್‌ ಹೊರಟರು.

ಇದನ್ನೂ ಓದಿ:ರಾಜ್ಯದ ದೊಡ್ಡ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಸಾಲದು: ಒಕ್ಕಲಿಗರ ಹೋರಾಟ ಸಮಿತಿ

ನಂತರ ಮಾತನಾಡಿದ ಜಾರಕಿಹೊಳಿ, ಅಥಣಿ ಕ್ಷೇತ್ರದ ಟಿಕೆಟ್ ವಿಚಾರವನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಮೀಸಲಾತಿ ನೀಡಿರುವುದು ಒಳ್ಳೆಯ ನಿರ್ಣಯ. ನಾವು ಹಿಂದುಳಿದವರ ಮೀಸಲಾತಿ ಕಸಿದುಕೊಂಡಿಲ್ಲ ಎಂದರು.

ABOUT THE AUTHOR

...view details