ಕರ್ನಾಟಕ

karnataka

ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ: ಸಿದ್ದರಾಮಯ್ಯ

By

Published : Mar 15, 2023, 4:05 PM IST

ಮಹಾರಾಷ್ಟ್ರದವರು ನಮ್ಮ ರಾಜ್ಯದಲ್ಲಿರುವ ಹಳ್ಳಿಗಳಿಗೆ ಬಂದು ಹೆಲ್ತ್ ಸ್ಕೀಂ ಮಾಡುತ್ತಿದ್ದಾರೆ. ಇದು ನಮ್ಮ ಸಾರ್ವಭೌಮತೆಗೆ ಸವಾಲು. ರಾಜ್ಯದ ಒಂದಿಂಚೂ ನೆಲವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು. ಭಾಷೆ, ಸಂಸ್ಕೃತಿ, ನೆಲ-ಜಲ ಆರೂವರೆ ಕೋಟಿ ಜನರ ಹಕ್ಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

basavaraja-bommai-does-not-care-about-the-state-siddaramaiah-lashed-out
ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ: ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ: ಸಿದ್ದರಾಮಯ್ಯ ವಾಗ್ದಾಳಿ

ಹುಬ್ಬಳ್ಳಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸರ್ಕಾರ ಸತ್ತು ಹೋಗಿದೆಯಾ..? ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ ಸಿಎಂ ಆಗಿ ಮುಂದುವರೆಯೋಕೆ ಅಸಮರ್ಥರು. ಕೂಡಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಮಹಾಜನ್ ವರದಿಯೇ ಅಂತಿಮ, 1966ರಲ್ಲಿ ವರದಿ ಸಲ್ಲಿಕೆಯಾಗಿದೆ. ಅಂದಿನಿಂದ ನಾವೂ ಒಪ್ಪಿಕೊಂಡಿದ್ದೇವೆ. ಆದರೆ ಅವರು ತಕರಾರು ಮಾಡುತ್ತಲೆ ಇದ್ದಾರೆ. ಮಹಾಜನ್ ಮಹಾರಾಷ್ಟ್ರದವರೇ ಆಗಿದ್ದಾರೆ. ಈಗ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು‌ ಸುಮ್ಮನಿವೆ. ಸರ್ಕಾರ ಸತ್ತು ಹೋಗಿದೆಯಾ..? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದವರು ನಮ್ಮ ರಾಜ್ಯದಲ್ಲಿರುವ ಹಳ್ಳಿಗಳಿಗೆ ಬಂದು ಹೆಲ್ತ್ ಸ್ಕೀಂ ಮಾಡುತ್ತಾರೆ ಅಂದರೆ ಏನರ್ಥ. ಇದು ನಮ್ಮ ಸಾರ್ವಭೌಮತೆಗೆ ಸವಾಲು. ರಾಜ್ಯದ ಒಂದಿಂಚೂ ನೆಲವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು. ಭಾಷೆ, ಸಂಸ್ಕೃತಿ, ನೆಲ-ಜಲ ಆರೂವರೆ ಕೋಟಿ ಜನರ ಹಕ್ಕು. ಅದಕ್ಕೆ ಧಕ್ಕೆ ಬಂದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರ ಸುಮ್ಮನೇ ಕುಳಿತಿವೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಮಹಾರಾಷ್ಟ್ರದಲ್ಲಿಯೂ ಕನ್ನಡಿಗರು ಇದ್ದಾರೆ. ಅಲ್ಲಿನ ಜನ ಕರ್ನಾಟಕಕ್ಕೆ ಸೇರುತ್ತೇವೆ ಅಂದಿದ್ದಾರೆ. ಹಾಗಂತ ನಾವು ಅಲ್ಲಿ ಮಧ್ಯಪ್ರವೇಶ ಮಾಡೋಕೆ ಆಗುತ್ತಾ. ಸೌಲಭ್ಯ ಕೊಡ್ತೀವಿ ಅಂತ ಹೇಳೋಕೆ ಆಗುತ್ತಾ..? ಎಂದು ಪ್ರಶ್ನಿಸಿದರು.

ಹೇಳಿಕೆ ಕೊಟ್ಟವರು ಏಕನಾಥ್ ಶಿಂಧೆ ಸರ್ಕಾರದ ಸೀನಿಯರ್ ಲೀಡರ್. ನಾವು ಪದೇ ಪದೇ ಶಾಂತವಾಗಿದ್ದೇವೆ ಅಂದರೆ ಮೌನವಾಗಿದ್ದೇವೆ ಎಂದರ್ಥವಲ್ಲ. ಪದೇ ಪದೇ ಕೆಣಕಲು ಬರಬೇಡಿ
ಕೂಡಲೇ ಕೇಂದ್ರ ಸರ್ಕಾರ ಏಕನಾಥ್ ಶಿಂಧೆ ಸರ್ಕಾರವನ್ನು ಕಿತ್ತೊಗೆಯಬೇಕು. ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ ಆಗಿದ್ದಾರೆ. ಅವರು ಸಿಎಂ ಆಗಿ ಮುಂದುವರೆಯೋಕೆ ಅಸಮರ್ಥರು, ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.

ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಮುಚ್ಚಕೂಡದು: ಬಡವರು, ಆರ್ಥಿಕವಾಗಿ ಹಿಂದುಳಿದವರ ಹಸಿವನ್ನು ನೀಗಿಸುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರದ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಡವರ ಹೊಟ್ಟೆಯ ಮೇಲೆ ಬರೆ ಹಾಕುವ ಕೆಲಸವನ್ನು ಮಾಡುತ್ತಿರುವ ಬಿಜೆಪಿ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ.

ಮಾಜಿ ಪ್ರಧಾನಮಂತ್ರಿ ದಿ. ಇಂದಿರಾ ಗಾಂಧಿಯವರ ಹೆಸರು ಇರುವ ಕಾರಣಕ್ಕೆ ಕಡಿಮೆ ದರದಲ್ಲಿ ಬಡವರ ಹಸಿವನ್ನು ನೀಗಿಸುವ ಮೂಲಕ ಉಪಹಾರ, ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದ್ದಾರೆ. ಇದು ಸಾರ್ವಜನಿಕರ ಹಾಗೂ ಬಡವರಿಗೆ ಮಾಡುವ ದೊಡ್ಡ ಅನ್ಯಾಯವಾಗಿದೆ ಎಂದರು.

ಹಸಿವು ಮುಕ್ತ ರಾಜ್ಯ ನಿರ್ಮಾಣದ ಕನಸನ್ನು ಕಂಡಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸುಮಾರು 400 ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿತ್ತು. ಬಡವರು, ವಿದ್ಯಾರ್ಥಿಗಳು, ಆಟೋ ಚಾಲಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ರಾಜಕೀಯ ಉದ್ದೇಶದಿಂದ ಮುಚ್ಚಲು ಹೊರಟಿರುವುದು ಜನ ವಿರೋಧಿ ನಡೆಯಾಗಿದೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟಿನ್ ಮುಚ್ಚಕೂಡದು ಎಂದು ಎಚ್ಚರಿಕೆ ನೀಡಿದರು.

ಪ್ರಧಾನಿ ಮೋದಿಯವರಿಗೆ ಗುತ್ತಿಗೆದಾರರು ಪತ್ರ ಬರೆದು ಒಂದು ವರ್ಷ ಆಯ್ತು. ತನಿಖೆ ಮಾಡಿಸಲಿಲ್ಲ. ರುಕ್ಸಾ ಅನುದಾನರಹಿತ ವಿದ್ಯಾ ಸಂಸ್ಥೆ ಅವರು ಅನುದಾನ ಒಳಪಡಿಸಲು ಪತ್ರ ಬರೆದರೆ 40 ಪರ್ಸೆಂಟ್​ ಕಮಿಷನ್ ಪಡೆಯುತ್ತಾರೆ. ಬೊಮ್ಮಾಯಿ‌ ದಾಖಲಾತಿ ನೀಡಿ ಎನ್ನುತ್ತಾರೆ. ಪತ್ರ ದಾಖಲಾತಿ ಇಲ್ಲವಾ?. ಎಲ್ಲ ಕಡೆ ಲಂಚ ವರ್ಗಾವಣೆ, ಉದ್ಯೋಗ ಪಡೆಯಲು ಲಂಚ ಪಡೆಯುತ್ತಿದ್ದಾರೆ. ಎಡಿಜಿಪಿ ಯಾಕೆ‌ ಜೈಲಿಗೆ ಹೋದರು. ಈಶ್ವರಪ್ಪ ರಾಜೀನಾಮೆ ಕೊಟ್ಟರು, ಸುಮ್ಮನೆ ಕೊಟ್ಟರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ:ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರದ ಯೋಜನೆ ಜಾರಿ; ಸಿಎಂ ರಾಜೀನಾಮೆ ನೀಡಲಿ: ಡಿಕೆಶಿ

ABOUT THE AUTHOR

...view details