ಕರ್ನಾಟಕ

karnataka

ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿಲ್ಲ, ಮನುಷ್ಯನಾಗಿ ಪ್ರಚಾರಕ್ಕೆ ಬಂದಿದ್ದೇನೆ: ನಟ ಶಿವರಾಜ್ ಕುಮಾರ್

By

Published : May 6, 2023, 5:42 PM IST

ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ನಟ ಶಿವಣ್ಣ ಭರ್ಜರಿ ರೋಡ್ ಶೋ ನಡೆಸಿದರು. ಹುಬ್ಬಳ್ಳಿಯ ವಿವಿಧೆಡೆ ಬೃಹತ್ ರೋಡ್ ಶೋ ಮಾಡಿ, ಭರ್ಜರಿ ಮತ ಬೇಟೆ ನಡೆಸಿದ್ರು.

Actor Shivarajkumar
ನಟ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಮಾತನಾಡಿದರು.

ಹುಬ್ಬಳ್ಳಿ:''ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಮತಯಾಚನೆ ಮಾಡಿದ್ದು ಖುಷಿ ತಂದಿದೆ. ರೋಡ್‌ ಶೋ ವೇಳೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಾನು ಪ್ರಚಾರಕ್ಕೆ ಬಂದಿರುವ ಬಗ್ಗೆ ಟ್ರೋಲ್ ಮಾಡುವವರ ಬಗ್ಗೆ ನಾ ಏನೂ ಮಾತನಾಡಲ್ಲ'' ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ನಗರದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ರೋಡ್ ಶೋ ನಡೆಸಿ ಮಾತನಾಡಿ, ''ಯಾತಕ್ಕೆ ಟ್ರೋಲ್ ಮಾಡಬೇಕು, ಟ್ರೋಲ್ ಮಾಡುವವರು ತಮ್ಮ ಮನಸ್ಸಿಗೆ ಪ್ರಶ್ನೆ ಮಾಡಿಕೊಳ್ಳಿ ಇದು ಸರಿನಾ ಅಂತಾ ಯೋಚಿಸಲಿ'' ಎಂದು ಟ್ರೋಲ್​ ಮಾಡುವವರ ವಿರುದ್ಧ ಶಿವಣ್ಣ ಸಿಟ್ಟಾದರು. ''ಇವತ್ತು ರೋಡ್‌ ಶೋ‌‌ನಲ್ಲಿ ಇಷ್ಟೊಂದು ಜನ ಬಂದಿದ್ದಾರೆ. ಇವರೆಲ್ಲ ಟ್ರೋಲ್ ಮಾಡಲಿಕ್ಕೆ ಬಂದಿದ್ದಾರೆಯೇ. ಇಲ್ಲಿ ಬಂದವರೆಲ್ಲ ಕಾಂಗ್ರೆಸ್‌ನವರಲ್ಲ, ಬಿಜೆಪಿಯವರು ಇದ್ದಾರೆ ಹಾಗೂ ಪಕ್ಷೇತರರು ಇದ್ದಾರೆ. ಇವತ್ತು ನಮ್ಮ ಕರ್ತವ್ಯವನ್ನು ನಾವು ಮಾಡಲಿಕ್ಕೆ ಬಂದಿದ್ದೇವೆ. ಇದಕ್ಕೆ ಜನರು ಉತ್ತಮ ಪ್ರೀತಿ ತೋರಿಸುತ್ತಿದ್ದಾರೆ'' ಎಂದರು.

ಹುಬ್ಬಳ್ಳಿಗೂ ನಮಗೂ ಒಳ್ಳೆಯ ಸಂಬಂಧ:''ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಐಡಿಯಾಲಜಿ ಇರುತ್ತದೆ. ಅವರದ್ದೇ ಕೆಲವು ಆಸೆಗಳು ಇರ್ತಾವೆ. ಅದಕ್ಕಾಗಿ ಬಂದಿರುತ್ತೇವೆ. ಅದನ್ನು ಬಿಟ್ಟು ನಾವು ಯಾರನ್ನ ದೋಷಿಸಲು ಇಲ್ಲಿಗೆ ಬಂದಿಲ್ಲ. ಟ್ರೋಲ್ ಮಾಡುವ ಅವಶ್ಯಕತೆ ಇಲ್ಲ. ಯಾತಕ್ಕೆ ಮಾಡಬೇಕು, ಮನುಷ್ಯನ ಅರ್ಥ ಮಾಡಿಕೊಂಡರೆ ಸಾಕು. ಎಷ್ಟು ದಿನ ಟ್ರೋಲ್ ಮಾಡ್ತಿರಿ, ಮನುಷ್ಯ ಯಶಸ್ವಿ ಆಗಬೇಕಾದ್ರೆ ಹಾರ್ಟ್ ಮತ್ತು ಮೆದುಳು ಮೊದಲು ಸರಿಯಾಗಿರಬೇಕು. ಮೊದಲು ನಿಮ್ಮ ಹೃದಯವನ್ನ ಕೇಳಿ ಆ ಮೇಲೆ ಟ್ರೋಲ್ ಮಾಡಿ. ಹುಬ್ಬಳ್ಳಿಗೂ ನಮಗೂ ಒಳ್ಳೆಯ ಸಂಬಂಧ ಇದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಬರ್ತಾ ಇದ್ದೆ. ಇವತ್ತು ಪ್ರಚಾರಕ್ಕಾಗಿ ಬಂದಿದ್ದೇನೆ ಎಂದು ಅವರು ತಿಳಿಸಿದರು.

ಬೇರೆ ಯಾರನ್ನೂ ಟೀಕೆ ಮಾಡಲು ನಾ ಬಂದಿಲ್ಲ-ಶಿವಣ್ಣ:ಪ್ರಶಾಂತ ಸಂಬರಗಿ ಟ್ವಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ''ನಮ್ಮಲ್ಲಿ ದುಡ್ಡು ಇಲ್ವಾ? ಆ ರೀತಿ ಹೇಳೋದು ತಪ್ಪು. ನಾನು ಹಣ ಪಡೆದುಕೊಂಡು ಪ್ರಚಾರಕ್ಕೆ ಬಂದಿಲ್ಲ. ನಾನು ಹಾರ್ಟ್‌ನಿಂದ, ಒಬ್ಬ ಮನುಷ್ಯನಾಗಿ ಪ್ರಚಾರಕ್ಕೆ ಬಂದಿದ್ದೇನೆ. ಇಲ್ಲಿ ವ್ಯಾಪಾರಕ್ಕೋಸ್ಕರ ಇಲ್ಲಿ ಬಂದಿಲ್ಲ. ಪ್ರೀತಿ ಹಾಗೂ ವಿಶ್ವಾಸಗೋಸ್ಕರ ಇಲ್ಲಿ ಬಂದಿದ್ದೇನೆ. ಬೇರೆ ಯಾರನ್ನೂ ಟೀಕೆ ಮಾಡಲು ನಾ ಬಂದಿಲ್ಲ. ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡಬೇಕು. ಆ ಬಗ್ಗೆ ನಾನ್ ‌ಮಾತನಾಡುತ್ತೇನೆ. ಇಲ್ಲಿ ಬೇರೆಯವರ ಬಗ್ಗೆ ನಾನು ಮಾತನಾಡಿದ್ದೇನಾ'' ಎಂದು ಅವರು ಪ್ರಶ್ನಿಸಿದರು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಚಾರ: ಜಗದೀಶ್ ಶೆಟ್ಟರ್ ಪರ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಿಂದ ಬೃಹತ್ ರೋಡ್ ಶೋ ಮಾಡಿ ಭರ್ಜರಿ ಮತಬೇಟೆ ನಡೆಸಿದ್ರು. ನಾಗಶೆಟ್ಟಿಕೊಪ್ಪದಿಂದ ರಾಮನಗರದವರೆಗೂ ಶಿವರಾಜಕುಮಾರ್ ರೋಡ್ ಶೋ ನಲ್ಲಿ ಅಭೂತಪೂರ್ವ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ ಹ್ಯಾಟ್ರಿಕ್ ಹೀರೋಗೆ ಅಭಿಮಾನಿಗಳು ಅದ್ಧೂರಿ ಸ್ವಾಗತಿಸಿದರು. ಜನರತ್ತ ಕೈಬೀಸಿ ಹಸ್ತಕ್ಕೆ ಮತ ನೀಡುವಂತೆ ಶಿವಣ್ಣ ಮನವಿ ಮಾಡಿದ್ರು.

ಇದನ್ನೂ ಓದಿ:ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸವದಿ ಸಹೋದರರ ಸಕ್ಕರೆ ಕಾರ್ಖಾನೆ ಅವ್ಯವಹಾರ ಸಿಬಿಐ ತನಿಖೆಗೆ ಮನವಿ: ರಮೇಶ್ ಜಾರಕಿಹೊಳಿ

ABOUT THE AUTHOR

...view details