ಕರ್ನಾಟಕ

karnataka

ದಾವಣಗೆರೆಯಲ್ಲಿ ಹೆಚ್ಚಾದ ಡೆಂಗ್ಯೂ, ಚಿಕುನ್ ಗುನ್ಯಾ ಹಾವಳಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಂದಣಿ

By ETV Bharat Karnataka Team

Published : Oct 10, 2023, 6:05 PM IST

Updated : Oct 10, 2023, 6:26 PM IST

ಜ್ವರ ಕಾಣಿಸಿಕೊಂಡ ತಕ್ಷಣ ಜನರು ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಿಹೆಚ್ಓ ಷಣ್ಮುಖಪ್ಪ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಂದಣಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಂದಣಿ

ಜಿಲ್ಲಾ ವೈದ್ಯಾಧಿಕಾರಿ ಹೇಳಿಕೆ

ದಾವಣಗೆರೆ :ರಾಜ್ಯದೆಲ್ಲೆಡೆ ವಾತಾವರಣ ಬದಲಾವಣೆಯಿಂದ ವೈರಲ್​ ಫಿವರ್​ ಕಾಣಿಸಿಕೊಳ್ಳುತ್ತಿದೆ. ದಾವಣಗೆರೆಯಲ್ಲೂ ಡೆಂಗ್ಯೂ ಹಾಗು ಚಿಕುನ್ ಗುನ್ಯಾ ಹಾವಳಿಯಿಂದಾಗಿ ದಿನನಿತ್ಯ ಜಿಲ್ಲಾಸ್ಪತ್ರೆಗೆ ರೋಗಿಗಳು ಧಾವಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ಹಾಗು ಆಯಾ ಭಾಗದ ಸರ್ಕಾರಿ ಆಸ್ಪತ್ರೆಗಳು ಜನಸಂದಣಿಯಿಂದ ಕೂಡಿವೆ.

ಡಿಹೆಚ್ಓ ಷಣ್ಮುಖಪ್ಪ ಪ್ರತಿಕ್ರಿಯಿಸಿದ್ದು, "2022 ರ ಜನವರಿಯಿಂದ ಅಕ್ಟೋಬರ್ 6ರ ತನಕ ನಗರದಲ್ಲಿ 47 ಪ್ರಕರಣ ಹಾಗು ದಾವಣಗೆರೆ ಗ್ರಾಮೀಣ ಭಾಗದಲ್ಲಿ 128 ಪ್ರಕರಣಗಳಿದ್ದು, ಒಟ್ಟು 175 ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. ಚಿಕುನ್ ಗುನ್ಯಾ 81 ಪ್ರಕರಣಗಳು ಕಂಡುಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಸ್ವಲ್ಪ ಕಡಿಮೆ ಇದೆ" ಎಂದರು.

"ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 61 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. ವೈರಲ್ ಫಿವರ್ ವಾತಾವರಣಕ್ಕೆ ಅನುಗುಣವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಸಾಕಷ್ಟು ಜನ ಆಸ್ಪತ್ರೆಗೆ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,480 ವೈರಲ್ ಫಿವರ್ ಪ್ರಕರಣಗಳು ದಾಖಲಾಗಿವೆ. ಇದನ್ನು ತಡೆಗಟ್ಟಲು ಆಶಾ ಕಾರ್ಯಕರ್ತೆಯರ ಮೂಲಕ ಸರ್ವೇ ಮಾಡಿಸಿ ಮುಂಜಾಗ್ರತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ".

"ನೀರು ನಿಲ್ಲದಂತೆ ಕೆಲವು ವಸ್ತುಗಳನ್ನು ನಿರ್ಮೂಲನೆ ಮಾಡುವ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್​.ಎಸ್.ಮಲ್ಲಿಕಾರ್ಜುನ್ ಅವರು​ ಡೆಂಗ್ಯೂ ರಥ ಉದ್ಘಾಟನೆ ಮಾಡಿದ್ದು, ಜಿಲ್ಲಾದ್ಯಂತ ಡೆಂಗ್ಯೂ ವೈರಲ್​ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಶಾಲೆಯಲ್ಲೂ ಎಚ್ಚರಿಕೆಯಿಂದಿರಲು ಶಿಕ್ಷಕರಿಗೆ ಸೂಚನೆ ಕೊಟ್ಟಿದ್ದೇವೆ. ಮೈ ಬಿಸಿಯಾಗುವುದು, ದೇಹದ ಭಾಗಗಳಲ್ಲಿ ನೋವು, ದೇಹ ದಣಿಯುವುದು ವೈರಲ್​ ಫಿವರ್​ ಲಕ್ಷಣಗಳು. ಜ್ವರ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು" ಎಂದು ಷಣ್ಮುಖಪ್ಪ ಹೇಳಿದರು..

ಸೊಳ್ಳೆ, ಡೆಂಘಿ ಪ್ರಕರಣಗಳ ನಿಯಂತ್ರಣ ಹೇಗೆ?:ಸೊಳ್ಳೆಗಳನ್ನು ನಿಯಂತ್ರಿಸಬೇಕು.‌ ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸಬೇಕು. ಇದು ಪ್ರಮುಖವಾಗಿ ಮಾಡಬೇಕಾದ ಕೆಲಸ. ಉಳಿದಂತೆ ಶುದ್ಧ ಹಾಗೂ ಕುದಿಸಿ ಆರಿಸಿದ ನೀರು ಕುಡಿಯುವುದು ಉತ್ತಮ.‌ ನೀರು ಶೇಖರಣೆಗೊಳ್ಳುವ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ ಹಾಗೂ ಟೆರೆಸ್ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತೆಂಗಿನ ಚಿಪ್ಪು, ವಾಹನಗಳ ಟಯರ್‌ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ‌ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಇದನ್ನೂ ಓದಿ :ಬೆಂಗಳೂರಿನಲ್ಲೇ 4427 ಡೆಂಘಿ ಪ್ರಕರಣಗಳು ಪತ್ತೆ: ಅಧಿಕಾರಿಗಳ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Last Updated : Oct 10, 2023, 6:26 PM IST

ABOUT THE AUTHOR

...view details