ಕರ್ನಾಟಕ

karnataka

ಹೆಚ್ಚಾದ ಅಡಕೆ ಕಳ್ಳತನ : ಬಂಗಾರದ ಬೆಳೆ ಉಳಿಸಿಕೊಳ್ಳಲು ಎಸ್​​​​ಪಿ ನೀಡಿದ ಸಲಹೆ ಏನು?

By

Published : Dec 1, 2022, 7:55 PM IST

ಪ್ರಸ್ತುತ ಮಾರುಕಟ್ಟೆಯಲ್ಲಿ ಅಡಕೆ ಬೆಳಗೆ ಭಾರೀ ಬೇಡಿಕೆ ಇರುವ ಹಿನ್ನೆಲೆ ದಾವಣಗೆರೆಯಲ್ಲಿ ರೈತರು ಅಡಕೆ ಬೆಳೆಯನ್ನೇ ಹೆಚ್ಚಾಗಿ ಬೆಳೆದಿದ್ದಾರೆ. ಆದರೆ, ಅಡಕೆ ಕಳ್ಳರು ರಾತ್ರಿ ಸಮಯದಲ್ಲಿ ಹೊಲಗಳಿಗೆ ನುಗ್ಗಿ ಅಡಕೆ ಕಳ್ಳತನ ಮಾಡುತ್ತಿದ್ದ ಹಿನ್ನೆಲೆ ಅಂತಹ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಿ ಪೊಲೀಸ್​ ವಾಹನವನ್ನು ನಿಯೋಜನೆ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

kn_dvg
ದಾವಣಗೆರಯಲ್ಲಿ ಹೆಚ್ಚಿದ ಅಡಿಕೆ ಕಳ್ಳತನ

ದಾವಣಗೆರೆ: ಸದ್ಯ ಅಡಕೆಗೆ ಚಿನ್ನದ ಬೆಲೆ ಇರುವುದರಿಂದ‌ ದಾವಣಗೆರೆಯ ಶೇ 50ರಷ್ಟು ರೈತರು ಅಡಕೆ ಕೃಷಿಯಲ್ಲಿ ತೊಡಗಿ‌ಕೊಂಡಿದ್ದಾರೆ. ಕಷ್ಟಪಟ್ಟು ಅಡಕೆ ಬೆಳೆದಿರುವ ರೈತರು, ಫಸಲನ್ನು ಉಳಿಸಿಕೊಳ್ಳುವುದೇ ಸವಾಲಿನ‌ ಕೆಲಸವಾಗಿದೆ.

ಅಡಕೆ ಕಳ್ಳತನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದರಿಂದ ರೈತರಿಗೆ ಅಡಕೆ ಕಾಯುವುದೇ ಒಂದು‌ ಕೆಲಸವಾಗಿದೆ. ಆದರೇ ರೈತರಿಗೆ ಎಸ್ಪಿಯವರು ಕೂಡ ಒಂದೊಳ್ಳೆ ಉಪಾಯ ನೀಡಿದ್ದು,‌‌ ಅದನ್ನು ರೈತರು‌ ಚಾಚುತಪ್ಪದೇ ಪಾಲಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲೇ ಅತಿ ಹೆಚ್ಚು ಅಡಕೆ ಬೆಳೆಯುತ್ತಿದ್ದರಿಂದ ಚನ್ನಗಿರಿಯನ್ನು ಅಡಕೆ ನಾಡು ಎಂದು ನಾಮಕರಣ‌‌‌ ಮಾಡಲಾಗಿದೆ.

ಇಲ್ಲಿಯ ಕೆಂಪು ಅಡಕೆಗೆ ದೇಶದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಪ್ರಸಿದ್ದಿ ಪಡೆದಿದೆ. ಅಡಕೆ ಇಲ್ಲಿನ ರೈತರ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿಗೆ ಹೆಚ್ಚು ಅಡಕೆ ಬೆಳೆ ಪ್ರಸಿದ್ಧಿಗೆ ಬಂದಿದೆ. ಕಾರಣ 2010ರಲ್ಲಿ ಪ್ರತಿ ಕ್ವಿಂಟಾಲ್ ಅಡಕೆಗೆ ಕೇವಲ ಹತ್ತು ಸಾವಿರ ರೂಪಾಯಿಯಿಂದ 15 ಸಾವಿರ ರೂಪಾಯಿ ದರವಿತ್ತು. ಇದಾದ ನಾಲ್ಕು ವರ್ಷಗಳಲ್ಲಿ ಅಂದ್ರೆ 2014 ರಲ್ಲಿ ಅಡಕೆ ಬೆಲೆ ಕೇಳಿ ರೈತರೇ ಬೆಚ್ಚಿ ಬಿದ್ದಿದ್ದರು. ಕಾರಣ ಒಂದು ಕ್ವಿಂಟಾಲ್ ಅಡಿಕೆಗೆ 99 ಸಾವಿರದಿಂದ ಒಂದು ಲಕ್ಷ ರೂಪಾಯಿ ದರ ಸಿಕ್ಕಿತ್ತು.

ಇದನ್ನೆ ನೋಡಿ ಬಹುತೇಕ ರೈತರು ಅಡಿಕೆ ಬೆಳೆಯ ಮೊರೆ ಹೋಗಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಎರಡು ಲಕ್ಷ ಟನ್ ಅಡಕೆ ಉತ್ಪಾದನೆ ಇತ್ತು. ಇದೀಗ ಕಳೆದ ಐದಾರು ವರ್ಷದಲ್ಲಿ ರಾಜ್ಯದಲ್ಲಿ ಬರೋಬರಿ ನಾಲ್ಕು ಲಕ್ಷ ಟನ್ ಅಡಕೆ ಉತ್ಪಾದನೆ ಆಗುತ್ತದೆ. 2018ರಲ್ಲಿ ದರ ಕಡಿಮೆ ಆಗಿದ್ದು, ಪ್ರತಿ ಕ್ವಿಂಟಾಲ್​ಗೆ 33 ರಿಂದ 34 ಸಾವಿರ ದರವಿತ್ತು. ಪ್ರಸ್ತುತ ಅಡಿಕೆಗೆ 50 ರಿಂದ 55 ಸಾವಿರ ರೂಪಾಯಿ ದರ ನಡೆದಿದೆ. ಅಡಕೆ ಬೆಳೆ ಕಡಿಮೆ ಇರುವ ಕಾರಣಕ್ಕೆ ಅಡಕೆಗೆ ಭಾರೀ ಬೆಲೆ ಬಂದಿದೆ.

ಅಡಕೆಗೆ ಕಳ್ಳರ ಕಾಟ:ಇಂತಹ ಪರಿಸ್ಥಿತಿಯಲ್ಲಿ ಅಡಿಕೆ ಕಳ್ಳರ ಕಾಟ ಶುರುವಾಗಿದೆ. ದಿನವೂ ಅಡಿಕೆ ಕಳ್ಳತನದ ದೂರುಗಳು ಕೇಳಿ ಬರುತ್ತಿವೆ. ಕಳೆದ ಒಂದೇ ತಿಂಗಳಲ್ಲಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹನ್ನೊಂದು ಅಡಕೆ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಚನ್ನಗಿರಿ ತಾಲೂಕಿನ ಬಳೋಸಾಗರ, ಹರಿಹರ ತಾಲೂಕಿನ ನಂದಿತಾವರೆ, ದಾವಣಗೆರೆ ತಾಲೂಕಿನ ನೆರರ್ಲಗಿ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಕೆ ಕಳ್ಳತನ ಆಗಿದೆ.

ಇದನ್ನು ತಪ್ಪಿಸಲು ರೈತರಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಎಂದು ಎಸ್ಪಿ ಸಿಬಿ‌ ರಿಷ್ಯಂತ್ ಮನವಿ ಮಾಡಿದ್ದು,‌ ಅದನ್ನು‌‌ ಚಾಚು ತಪ್ಪದೇ ರೈತರು‌ ಮಾಡುತ್ತಿದ್ದಾರೆ. ನಿರಂತರ ಮಳೆಗೆ ಶೇಕಡಾ 50ರಷ್ಟು ಅಡಕೆ ಇಳುವರಿ ಕಡಿಮೆ ಆಗಿದೆ. ಕೆಲ ರೈತರು ನೀರಿನಿಂದ ತುಂಬಿದ ಅಡಕೆ ತೋಟದಲ್ಲಿ ಅಡಕೆ ಕೊಯ್ಲು ಮಾಡುತ್ತಿದ್ದಾರೆ. ಜೊತೆಗೆ ನಿರಂತರವಾಗಿ ನಾನಾ ರೋಗಗಳು ಅಡಕೆ ಬೆಳೆಗೆ ಕಂಡು ಬರುತ್ತಿವೆ. ಇತ್ತ ಕೇಂದ್ರ ಸರ್ಕಾರ ವಿದೇಶದಿಂದ ಅಡಕೆ ಆಮದು ಮಾಡಿಕೊಳ್ಳುತ್ತಿದೆ.

ಅಡಕೆ ಕಳ್ಳತನ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಆಯಾ ಗ್ರಾಮ ಪಂಚಾಯತ್​ ಸಹಾಯದಿಂದ ಸಿಸಿ ಕ್ಯಾಮರಾ ಅಳವಡಿಸಲು ಹೇಳಲಾಗಿದೆ. ಜೊತೆಗೆ ರಾತ್ರಿ ಹಗಲು ಗಸ್ತು ತಿರುಗುವ ಪೊಲೀಸ್ ವಾಹನಗಳನ್ನು ಅಡಕೆ ಕಳ್ಳತನ ಆಗುವ ಪ್ರದೇಶದಲ್ಲಿ ನಿಯೋಜನೆಗೊಳಿಸಲಾಗಿದೆ. ಅಲ್ಲದೇ ಅಡಕೆ ಕಟಾವು ಮಾಡುವಂತ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಅಲ್ಲೆ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ರೈತರಿಗೆ ಹೇಳಿರುವುದಾಗಿ ಎಸ್ಪಿ ರಿಷ್ಯಂತ್​ ತಿಳಿಸಿದ್ದಾರೆ.

ಇದನ್ನೂ ಓದಿ:10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್

ABOUT THE AUTHOR

...view details