ಕರ್ನಾಟಕ

karnataka

ದಾವಣಗೆರೆಯಲ್ಲಿ ನಿರಂತರ ಮಳೆ.. ಅಪಾಯದ ಮಟ್ಟ ತಲುಪಿದ ಕೆರೆಗಳು

By

Published : Oct 18, 2022, 7:23 PM IST

ದಾವಣಗೆರೆಯಲ್ಲಿ ನಿರಂತರ ಮಳೆಯಿಂದಾಗಿ ತಾಲೂಕಿನ ಕೊಡಗನೂರು ಗ್ರಾಮದಲ್ಲಿರುವ ಕೆರೆ ಏರಿ ಕುಸಿಯುವ ಭೀತಿಯಲ್ಲಿ ರೈತರಿದ್ದಾರೆ.

ಕೆರೆ ಜಾಗದಲ್ಲಿ ಜೆಸಿಬಿ ಕಾರ್ಯಾಚರಣೆ
ಕೆರೆ ಜಾಗದಲ್ಲಿ ಜೆಸಿಬಿ ಕಾರ್ಯಾಚರಣೆ

ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆಯಲ್ಲಿ ಈ ಬಾರಿ ಮಳೆ ಮತ್ತೆ ಸುರಿದಿದೆ. ಜಿಲ್ಲೆಯ ಕೆರೆ ಕಟ್ಟೆಗಳು ತುಂಬಿ ಕೋಡಿಬಿದ್ದಿವೆ. ಆದರೆ ಸಾಕಷ್ಟು ಕೆರೆಗಳು ನೀರಿನ‌ ಸೆಳವಿಗೆ ಕೆರೆಯ ಏರಿಗಳು ಕುಸಿದಿವೆ. ಇದರಿಂದ‌ ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆ ಇಟ್ಟು ದುರಸ್ತಿ ಕಾರ್ಯದಲ್ಲಿ ತೊಡಗಿದೆ. ದಾವಣಗೆರೆಯ‌ ಬಹುತೇಕ ಅಣಜಿ ಕೆರೆ, ಕೊಡಗನೂರು ಕೆರೆ, ಮರಿಕುಂಟೆ ಕೆರೆ, ಹದಡಿ‌ಕೆರೆ, ಕೆರೆಯಾಗಲಹಳ್ಳಿಯ ಕೆರೆ ಹೀಗೆ ಒಂದಾ ಎರಡು ಸಾಕಷ್ಟು ಕೆರೆ ಏರಿಗಳು ಬಿರುಕು ಬಿದ್ದಿವೆ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಏರಿ ಕುಸಿದಿದ್ದು, ಅಪಾಯದ ಮಟ್ಟಕ್ಕೆ ತಲುಪಿದೆ. ನಿರಂತರ ಮಳೆಯಿಂದಾಗಿ ತಾಲೂಕಿನ ಕೊಡಗನೂರು ಗ್ರಾಮದಲ್ಲಿರುವ ಕೆರೆ ಏರಿ ಕುಸಿಯುವ ಭೀತಿಯಲ್ಲಿ ರೈತರಿದ್ದಾರೆ. ದಾವಣಗೆರೆ - ಹೊಳಲ್ಕೆರೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಹೆಚ್ಚು ಮಳೆಯಿಂದಾಗಿ ಕೆರೆ ಕೂಡ ತುಂಬಿದ್ದರಿಂದ ಒಂದು ನಾಲ್ಕೈದು ಅಡಿಗಿಂತ ಜಾಸ್ತಿ ಆಳದಷ್ಟು ಕೆರೆ ಏರಿ ಕುಸಿದಿದೆ.

ಇನ್ನು, ಕೆರೆ ಏರಿ ಹಾನಿಯಾದ್ರೆ ಲಕ್ಷಾಂತರ ಹೆಕ್ಟೇರ್ ಜಮೀನು, ವಸತಿ ಪ್ರದೇಶ ಮುಳುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಕೆರೆ ಏರಿ ಒಡೆದು ಅನಾಹುತವಾಗಬಹುದು ಎಂದು ರೈತರಲ್ಲಿ‌ ಆತಂಕ ಮನೆ ಮಾಡಿದೆ. ಇನ್ನು ಕೆರೆ ಏರಿ ಕುಸಿದಿದ್ದರಿಂದ ತಾತ್ಕಾಲಿಕವಾಗಿ ರಸ್ತೆ ಸಂಚಾರ ಬಂದ್ ಮಾಡಿ ಅಧಿಕಾರಿಗಳು ಮಣ್ಣು ಏರುವ ಕೆಲಸ ಮಾಡ್ತಿದ್ದು, ಜಿಲ್ಲಾಡಳಿತ ಕೆರೆ ಏರಿ ಮೇಲೆ ನಿಗಾ ಇರಿಸಿದೆ‌.‌

ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ಹಾಗೂ ಶಾಸಕ ಪ್ರೋ ಲಿಂಗಣ್ಣ ಕೆರೆ ಬಳಿ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಕೊಡಗನೂರು ಕೆರೆಯ ಏರಿ‌ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಏರಿಯ ಪಕ್ಕದಲ್ಲಿ ಇರುವ ಖರಬ್ ಜಮೀನಿನ ಮೂಲಕ ರಸ್ತೆ ಮಾಡಿ ಭಾರಿ ವಾಹನಗಳು ಸಾಗಲು ಅನುಕೂಲ ಮಾಡ್ತಿವೆ. ಕೆರೆ ನೀರು ಹೊರಕ್ಕೆ ಬಿಡದೆ ಕಾಮಗಾರಿ ಮಾಡುವ ಮೂಲಕ ಕೆರೆಯನ್ನು ಹಾಗು ನೀರನ್ನು ರಕ್ಷಿಸುತ್ತೇವೆ ಎಂದು ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿಯವರು ರೈತರಿಗೆ ಭರವಸೆ ನೀಡಿದರು.

ಶಾಸಕ ಪ್ರೋ ಲಿಂಗಣ್ಣ ಅವರು ಮಾತನಾಡಿದರು

ಅಣಜಿ, ಹದಡಿ ಕೆರೆಗಳ ಏರಿ ಕುಸಿತ, ಮರಿಕುಂಟೆ ಕೆರೆ ಏರಿ ಸೋರಿಕೆ..ದಾವಣಗೆರೆ ತಾಲೂಕಿನಲ್ಲಿ ಅಧಿಕ ಮಳೆಯಿಂದಾಗಿ ಅಣಜಿ ಕೆರೆ ಹಾಗು ಮರಿಕುಂಟೆ ಕೆರೆ ಕೋಡಿಬಿದ್ದಿವೆ. 1980 ರಲ್ಲಿ ಅಣಜಿ ಕೆರೆ ತುಂಬಿತ್ತು. ಅದಾದ ಬಳಿಕ ನಾಲ್ಕು ದಶಕಗಳ ಬಳಿಕ ಇದೀಗ‌ ಕೆರೆ ತುಂಬಿ ಕೋಡಿ ಬಿದ್ದಿದೆ.

ಕೆರೆ ತುಂಬಿದ್ದರಿಂದ ಲಕ್ಷಗಟ್ಟಲೆ ಮೆಕ್ಕೆಜೋಳ ಬೆಳೆಯುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನೊಂದು ದುಃಖಕರ ವಿಚಾರ ಅಂದ್ರೆ ಈ ಕೆರೆ ಕೋಡಿ ಬಿದ್ದ ಸ್ಥಳದಲ್ಲಿ ಭಾರಿ ಮಣ್ಣು ಸವಕಳಿಯಾಗುತ್ತಿರುವುದ್ದರಿಂದ ಸಾಕಷ್ಟು ಕಡೆ ಬಿರುಕು ಬಿಟ್ಟಿದೆ. ಇದರಿಂದ ರೈತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ದಾವಣಗೆರೆ-ಜಗಳೂರು ರಾಜ್ಯಹೆದ್ದಾರಿಯಲ್ಲೇ ಈ ಕೆರೆಯ ಕೋಡಿ ಬಿದ್ದಿದ್ದರಿಂದ ಭಾರೀ ಪ್ರಮಾಣದ ವಾಹನಗಳ ಸಂಚಾರದಿಂದ ಕೆರೆಯ ಕೋಡಿ ಒಡೆಯುವ ಸಾಧ್ಯತೆ ದಟ್ಟವಾಗಿದೆ. ಆದರೆ ಇದೀಗ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದ್ದು, ಇಲ್ಲೂ ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ಹಾಗು ಶಾಸಕ ಪ್ರೋ ಲಿಂಗಣ್ಣ ಕೆರೆ ಬಳಿ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಇಲ್ಲೂ ಕೂಡ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಕೆರೆ ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಹದಡಿ ಕೆರೆಯನ್ನು ರಕ್ಷಿಸಿದ ಜಿಲ್ಲಾಡಳಿತ..ತಾಲೂಕಿನ ಕೂಗಳತೆಯಲ್ಲಿರುವ ದಶಕ ಪೂರೈಸಿರುವ ಹದಡಿ ಕೆರೆ ಏರಿ ಬಿರುಕು ಬಿಟ್ಟು ಕುಸಿದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಒಟ್ಟು 1500 ಎಕರೆ ಜಮಿನಿಗೆ ನೀರುಣಿಸುತ್ತಿದ್ದು, ಭತ್ತ, ಕಬ್ಬು, ಮೆಕ್ಕೆಜೋಳ ಹೀಗೆ ವಿವಿಧ ಬೆಳೆಗಳನ್ನು ಈ ಹದಡಿ ಕೆರೆ ನೀರಿನ ಆಶ್ರಯದಲ್ಲಿ ಬೆಳೆಯುತ್ತಿರುವ ರೈತರಲ್ಲಿ ಆತಂಕ ಸೃಷ್ಠಿಸಿತ್ತು. ಇಲ್ಲಿಯತನಕ ಮೂರ್ನಾಲ್ಕು ಬಾರಿ ಈ ಕೆರೆಯ ಕಳಪೆ ಕೆಲಸ ಮಾಡಿದ್ದರಿಂದ ಇದೀಗ ಮತ್ತೆ ಈ ಕೆರೆಯ ಏರಿ ಕುಸಿತ ಕಂಡಿರುವುದು ಆತಂಕ ಮನೆ ಮಾಡಿದೆ.

1983 ರಲ್ಲಿ ಈ ಕೆರೆಯಲ್ಲಿ ನೀರು ಭರ್ತಿಯಾಗಿ ಕೆರೆಯು ಏರಿ ಕುಸಿತ ಕಂಡು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿತ್ತು. 1983 ರಲ್ಲಿ ನಡೆದಂತ ದುರಂತ ಮತ್ತೆ ಮರಳಿದರೆ ಲಕ್ಷಾಂತರ ಎಕರೆ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಜಿಲ್ಲಾಡಳಿತ ಕೆರೆಯ ಏರಿಯನ್ನು ಬಂದೋಬಸ್ತ್ ಮಾಡಿ ರೈತರ ಆತಂಕ‌ ದೂರಮಾಡಿದೆ.

ಶಾಸಕ ಪ್ರೊ ಲಿಂಗಣ್ಣ ಏನ್ ಅಂದ್ರು ಗೊತ್ತಾ..ಪ್ರಕೃತಿ ವಿಕೋಪಕ್ಕೆ ಯಾರು ಹೊಣೆ ಹೇಳಿ. ಮಳೆ ಸಾಕಷ್ಟು ಬಂದಿದೆ. ಅನಾಹುತಕ್ಕೆ ಯಾರು ಹೊಣೆ ಅಲ್ವಾ, ನಮ್ಮ ಸರ್ಕಾರ ರೈತರೊಂದಿಗೆ ಇದೆ. ಕೊಡಗನೂರು ಕೆರೆ ಏರಿ ಕುಸಿತ ಕಂಡಿದ್ದರಿಂದ ಕಾಮಗಾರಿ ಎಸ್ಟಿಮೇಟ್ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ನಾವು ಜನರೊಂದಿಗಿದ್ದೇವೆ. ನಾನು ಕೆರೆ ಕುಸಿತದ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡಿದ್ದೇನೆ. ಇದಕ್ಕೆ ಯಾರು ಹೊಣೆ‌ ಹೇಳಿ. ಏನ್ಮಾಡಕ್ಕೆ ಆಗುತ್ತದೆ. ಕೆರೆ ರಕ್ಷಣೆ ಮಾಡಲು ಎಕ್ಸ್​ಪರ್ಟ್​ಗಳಿದ್ದಾರೆ. ಅವರು ಚಿಂತಿಸಿ ಕಾಮಗಾರಿ ಆರಂಭಿಸಿದ್ದಾರೆ. ಕೊಡಗನೂರು ಕೆರೆ ರಕ್ಷಣೆ ಆಗುತ್ತದೆ ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಪ್ರೋ ಲಿಂಗಣ್ಣ ರೈತರಿಗೆ ಧೈರ್ಯ ತುಂಬಿದರು.

ಓದಿ:ಬೆಂಗಳೂರಲ್ಲಿ ವರುಣನ ಅಬ್ಬರ.. ಮಳೆಗೆ ವಾಹನ ಸವಾರರು-ಬಡಾವಣೆ ನಿವಾಸಿಗಳು ತತ್ತರ

ABOUT THE AUTHOR

...view details