ಕರ್ನಾಟಕ

karnataka

ವಿದ್ಯುತ್ ಕೊಡದಿದ್ರೆ 1 ಲಕ್ಷ ಹೆಕ್ಟೇರ್ ಭತ್ತದ ಬೆಳೆ ನಾಶ: ಬೆಸ್ಕಾಂ ಎದುರು ರೈತರ ಅಳಲು

By ETV Bharat Karnataka Team

Published : Oct 17, 2023, 10:17 AM IST

ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಎದುರಾಗಿದೆ. ಇದರಿಂದ ಪಂಪ್ ಸೆಟ್​ಗಳಿಂದ ನೀರು ಹರಿಸಲು ರೈತರು ಪರದಾಡುತ್ತಿದ್ದಾರೆ. ಇತ್ತ ಸಮಸ್ಯೆ ನೀಗಿಸಲು ಸರ್ಕಾರ, ವಿದ್ಯುತ್ ಖರೀದಿಗೆ ಮುಂದಾಗಿದೆ.

farmers protest
ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

ದಾವಣಗೆರೆ: ಈ ವರ್ಷ ಮಳೆ ಇಲ್ಲದೆ ಬರ ಎದುರಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ವಿದ್ಯುತ್ ಅಭಾವದಿಂದ ರಾಜ್ಯದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದಾಗಿ ರೈತರು ನಮಗೆ ಮೊದಲಿನಂತೆ ಏಳು ತಾಸು ವಿದ್ಯುತ್ ಕೊಡಿ. ಇಲ್ಲದಿದ್ದರೆ ಬೆಳೆ ನಾಶವಾಗಲಿದೆ ಎಂದು ಬೆಸ್ಕಾಂ ಎದುರು ಪ್ರತಿಭಟನೆ ಮಾಡಿದರು.

ಜಿಲ್ಲೆಯ ಹರಿಹರ ತಾಲೂಕಿನಾದ್ಯಂತ ಸಾಕಷ್ಟು ರೈತರು ಲೋಡ್‌ ಶೆಡ್ಡಿಂಗ್​​ನಿಂದ ಚಿಂತೆಗೀಡಾಗಿದ್ದಾರೆ. ಮಳೆ ಇಲ್ಲದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರನ್ನು ಬಂದ್ ಮಾಡಿದ ಬೆನ್ನಲ್ಲೇ ಸಾಕಷ್ಟು ಜನ ರೈತರು ಕೊಳವೆ ಬಾವಿಯ ಕಡೆ ಮುಖ ಮಾಡಿದ್ದಾರೆ. ಪಂಪ್ ಸೆಟ್​​ನಿಂದ ಜಮೀನುಗಳಿಗೆ ನೀರು ಹರಿಸಿ ಬೆಳೆ ಉಳಿಸಿಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಇದರಿಂದ ಆಕ್ರೋಶಗೊಂಡ ರೈತರು, ಏಳು ತಾಸು ವಿದ್ಯುತ್ ಪೂರೈಕೆ ಮಾಡ್ಬೇಕೆಂದು ಪಟ್ಟು ಹಿಡಿದು ಬೆಸ್ಕಾಂ ಕಚೇರಿ ಮುಂದೆ ಧರಣಿ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಿದ್ಯುತ್ ಕೂಡ ಕೈಕೊಟ್ಟರೆ ಹರಿಹರ ಭಾಗದಲ್ಲಿ ಒಂದು ಸಾವಿರ ಹೆಕ್ಟೇರ್ ಭತ್ತ ನೆಲ ಕಚ್ಚಲಿದೆ ಎಂದು ರೈತರು ಅಳಲು ತೋಡಿಕೊಂಡರು. ಈ ವೇಳೆ ರೈತ ಪರಮೇಶ್ವರಪ್ಪ ಮಾತನಾಡಿ, ಸರ್ಕಾರ ವಿದ್ಯುತ್ ಕೊಡ್ತಿಲ್ಲ, ಲೋಡ್ ಶೆಡ್ಡಿಂಗ್ ಮಾಡ್ತಿದ್ದು, ಬೆಳೆ ಒಣಗುವ ಹಂತ ತಲುಪಿದೆ. ತೋಟಗಳು ಹಾಳಾಗುತ್ತಿವೆ. ಐದು ತಾಸು ವಿದ್ಯುತ್ ಕೊಡ್ತೀವಿ ಎನ್ನುತ್ತಿದ್ದಾರೆ. ಮೊದಲು ಏಳು ತಾಸು ವಿದ್ಯುತ್ ಕೊಡುತ್ತಿದ್ದರು, ಅದನ್ನೇ ಮುಂದುವರೆಸಬೇಕು ಎಂದರು.

"ಸರ್ಕಾರ ಸಮರ್ಪಕವಾಗಿ ವಿದ್ಯುತ್ ಕೊಡ್ತಿಲ್ಲ, ನಮಗೆ ಏಳು ತಾಸು ವಿದ್ಯುತ್ ಬೇಕು. ನಮಗೆ ವಿದ್ಯುತ್ ಕೊಟ್ಟರೇನೆ ಮಾತ್ರ ನಾವು ಭತ್ತ ಬೆಳೆದು ಅನ್ನಹಾಕಲು ಸಾಧ್ಯ. ಕೊಳವೆ ಬಾವಿಯಿಂದ ನೀರಿ ಹರಿಸಲು ವಿದ್ಯುತ್ ಸಮಸ್ಯೆ ಕಾಡ್ತಿದೆ. ಒಂದು ತಿಂಗಳು ಸಮರ್ಪಕವಾಗಿ ವಿದ್ಯುತ್ ಕೊಡಲಿಲ್ಲ ಎಂದರೆ ಬೆಳೆ ನಾಶವಾಗಲಿದ್ದು, ವಿಷ ಸೇವಿಸುವ ಪರಿಸ್ಥಿತಿ ನಿರ್ಮಾಣ ಆಗಲಿದೆ" ಎಂದು ರೈತ ಮಾಲ್ತೇಶ್ ಜಿಗಳಿ ತಿಳಿಸಿದರು.

ಬೆಸ್ಕಾಂ ಅಧಿಕಾರಿ ಹೇಳಿದ್ದೇನು..?ಬೆಸ್ಕಾಂನ ಚಿತ್ರದುರ್ಗದ ಝೋನ್ ಚೀಫ್ ಆಫೀಸರ್ ಗೋವಿಂದಪ್ಪ ಪ್ರತಿಕ್ರಿಯಿಸಿ, ಮಳೆ ಆಗದೆ ಇರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಕಂಡುಬಂದಿದೆ. ಮಳೆ ಬಂದು ಡ್ಯಾಂಗಳು ತುಂಬಿದ್ರೇ ಏಳು ಅಲ್ಲ ಎಂಟು ದಿನಗಳ ಕಾಲ ವಿದ್ಯುತ್ ನೀಡುತ್ತೇವೆ. ನಾವು ವಿದ್ಯುತ್ ಹಿಡಿದಿಟ್ಟುಕೊಳ್ಳಲು ಬರುವುದಿಲ್ಲ. ಈ ಮೊದಲು 7,500 ಇದ್ದ ಬೇಡಿಕೆ ಒಮ್ಮೆಲೇ 15,000 ಮೆಗಾ ವ್ಯಾಟ್ ಲೋಡ್ ಬಂದು ಸಮಸ್ಯೆ ಆಗ್ತಿದೆ. ಇನ್ನು ವಿದ್ಯುತ್​​ಅನ್ನು ಬೇರೆ ರಾಜ್ಯಗಳಿಂದ ಖರೀದಿಗೆ ಸರ್ಕಾರ ಮುಂದಾಗಿದೆ. ಬೇರೆ ರಾಜ್ಯಗಳಲ್ಲಿ ನಾವು 3000 ಮೆಗಾ ವ್ಯಾಟ್ ಖರೀದಿಗೆ ಪ್ರಯತ್ನ ಮಾಡಿದ್ರೇ ಸಿಕ್ಕಿದ್ದು 300 ಮೆಗಾ ವ್ಯಾಟ್ ಮಾತ್ರ ಎಂದರು.

ಸೋಮವಾರ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್​ ಅವರು ವಿದ್ಯುತ್ ಅಭಾವಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಸಚಿವರು, ಮಳೆ ಕೊರತೆಯಿಂದಾಗಿ ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. ಕೇಂದ್ರದ ಗ್ರಿಡ್‌ನಿಂದಲೂ ರಾಜ್ಯಕ್ಕೆ ವಿದ್ಯುತ್ ಒದಗಿಸುವಂತೆ ಮನವಿ ಮಾಡಿದ್ದೇವೆ. ಜೊತೆಗೆ, ಪಂಜಾಬ್, ಉತ್ತರ ಪ್ರದೇಶದಿಂದಲೂ ವಿದ್ಯುತ್ ಪಡೆಯಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಜಾರ್ಜ್ ಮಾಹಿತಿ ನೀಡಿದರು.

ಇದನ್ನೂ ಓದಿ: ಮಳೆ ಕೊರತೆಯಿಂದಾಗಿ ವಿದ್ಯುತ್ ಅಭಾವ ಸೃಷ್ಟಿ: ಇಂಧನ ಸಚಿವ ಕೆ ಜೆ ಜಾರ್ಜ್

ABOUT THE AUTHOR

...view details