ಕರ್ನಾಟಕ

karnataka

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತೀರ್ಮಾನ: ಡಿಕೆಶಿ

By

Published : May 5, 2023, 8:50 PM IST

ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

dk-shivakumar-reaction-on-bjp
ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತೀರ್ಮಾನ: ಡಿ ಕೆ ಶಿವಕುಮಾರ್​

ದಾವಣಗೆರೆ:ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮೊದಲನೇ ಸಚಿವ ಸಂಪುಟದಲ್ಲೇ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ತೀರ್ಮಾನ ಮಾಡುತ್ತೇವೆ, ಇದು ನನ್ನ ಶಪಥ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಜಿಲ್ಲೆಯ ಚನ್ನಗಿರಿಯಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 40% ಕಮಿಷನ್ ಆಗಿದೆ, ನಮ್ಮ ಕೈಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಗುತ್ತಿಗೆದಾರರ ನೇಣು ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಅಂತಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದರು. ಸಂತೋಷ್​​ ಪಾಟೀಲ್​ ಎಂಬ ಗುತ್ತಿಗೆದಾರ ಮೂರು ತಿಂಗಳು ಈಶ್ವರಪ್ಪನ ಮನೆ ಬಾಗಿಲಿಗೆ ಸುತ್ತಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡರು ಎಂದು ಬಿಜೆಪಿ ವಿರುದ್ಧ ಡಿಕೆಶಿ ಹರಿಹಾಯ್ದರು.

ಈಶ್ವರಪ್ಪ ಮತ್ತು ಮಾಡಾಳ್ ವಿರೂಪಾಕ್ಷಪ್ಪಗೆ ಬಿಜೆಪಿ ಏಕೆ ಟಿಕೆಟ್​ ಕೊಡಲಿಲ್ಲ?. ಭ್ರಷ್ಟಾಚಾರ ಮಾಡಿದ್ದಕ್ಕಾಗಿ ಅವರಿಬ್ಬರಿಗೆ ಟಿಕೆಟ್​ ಕೊಟ್ಟಿಲ್ಲ ಎಂದ ಅವರು, ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೊದಲನೇ ಸಚಿವ ಸಂಪುಟದಲ್ಲಿ ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತೀರ್ಮಾನ ಮಾಡುತ್ತೇವೆ. ಇದು ನನ್ನ ಶಪಥ ಎಂದು ಡಿ ಕೆ ಶಿವಕುಮಾರ್ ವಾಗ್ದಾನ ಮಾಡಿದರು.

ಇವತ್ತು ಯಾಕೇ ನಾನು ಇಷ್ಟು ಧೈರ್ಯದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ, ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಜನರ ನಾಡಿಮಿಡಿತ, ಜನರ ಬೆಂಬಲ ನೋಡಿದ್ದೇನೆ. ಈ ಬಾರಿ ನಮ್ಮ ಸರ್ಕಾರ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕಮಲ ಕೆರೆಯಲ್ಲಿ ಇದ್ದರೆ ಚೆಂದ, ದಳ ಜಮೀನಿನಲ್ಲಿ ಇದ್ದರೆ ಚೆಂದ, ಧಾನ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ರಚನೆಯಾಯಿತು. 15 ಲಕ್ಷ ನಿಮ್ಮ ಖಾತೆಗೆ ಬರಲಿಲ್ಲ, ರೈತರ ಸಾಲ ಮನ್ನಾ ಮಾಡಲಿಲ್ಲ, ಆದಾಯ ದ್ವಿಗುಣ ಮಾಡಿಲ್ಲ, ಬಿ ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಬಂದಿದ್ದರಿಂದ ಯಾವುದೇ ಬದಲಾವಣೆ ಆಗಲಿಲ್ಲ. ಕರ್ನಾಟಕ ರಾಜ್ಯಕ್ಕೆ ಇವರಿಂದ ಭ್ರಷ್ಟಾಚಾರದ ರಾಜ್ಯ ಎಂಬ ಕಳಂಕ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಆಜಾನ್, ಹಲಾಲ್, ಹಿಜಾಬ್ ವಿಷಯಗಳ ಮೇಲೆ ಬಿಜೆಪಿಯವರು ರಾಜಕೀಯ ಮಾಡಲು ಹೊರಟ್ಟಿದ್ದಾರೆ. ಬಿಜೆಪಿಯವರ ಕೇವಲ ಹಿಂದೂ ಎಂದುಕೊಂಡು ಹೋಗ್ತಿದ್ದಾರೆ. ನಾವುಗಳೆಲ್ಲ ಹಿಂದುಗಳಲ್ವ?. ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ಕೊಟ್ಟಿದೆ. ಈ ಎಲ್ಲಾ ಗ್ಯಾರಂಟಿಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧಾನಸಭೆಯಲ್ಲೇ ಪಾಸ್ ಮಾಡ್ತೇವೆ ಎಂದು ಭರವಸೆ ನೀಡಿದರು. ಈ ಬಿಜೆಪಿ ಅವಧಿಯಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಅನ್ನಭಾಗ್ಯ, ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹೀಗೆ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ನೀಡುತ್ತದೆ ಎಂದು ಡಿ ಕೆ ಶಿವಕುಮಾರ್ ಭರವಸೆ ನೀಡಿದರು.

ಇದನ್ನೂ ಓದಿ:ಐಟಿ ದಾಳಿಗೆ ಕೇಂದ್ರ ಸರ್ಕಾರ ಕಾರಣ, ಇದು ಐಟಿ ದಾಳಿ ಮಾಡುವ ಸಮಯವಲ್ಲ: ಶೆಟ್ಟರ್ ಅಸಮಾಧಾನ

ABOUT THE AUTHOR

...view details