ಕರ್ನಾಟಕ

karnataka

ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ: 'ಆಪದ್ಬಾಂಧವ' ಆಸೀಫ್ ಸೇರಿ ಮೂವರ ಬಂಧನ

By

Published : Apr 3, 2022, 2:26 PM IST

ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 'ಆಪದ್ಬಾಂಧವ' ಆಸೀಫ್ ಹಾಗೂ ಆತನ ಇಬ್ಬರು ಸಹಚರರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮೂವರ ಬಂಧನ
ಮೂವರ ಬಂಧನ

ಮಂಗಳೂರು: ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿಯ ಮೈಮುನಾ ಫೌಂಡೇಶನ್ ಸಂಸ್ಥಾಪಕ 'ಆಪದ್ಬಾಂಧವ' ಆಸೀಫ್(39), ಪಂಪ್ ವೆಲ್ ನಿವಾಸಿ ಶಿವಲಿಂಗಂ (40), ಮುಲ್ಕಿಯ ಮೈಮುನಾ ಫೌಂಡೇಶನ್ ಪಾಲುದಾರ ಅಫ್ತಾಬ್ (32) ಬಂಧಿತರು.

ಕಳೆದ 20 ವರ್ಷಗಳಿಂದ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವನಜಾ ಎಂಬ ಮಹಿಳೆ ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ್ದರು. ಈ ವೇಳೆ ಆರೋಪಿ ಶಿವಲಿಂಗಂ ಆಕೆಯನ್ನು ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ 'ಆಪದ್ಬಾಂಧವ' ಆಸಿಫ್ ಬಳಿ ಕರೆದೊಯ್ದಿದ್ದಾನೆ. ಬಳಿಕ ಆಸೀಫ್, ತಮ್ಮ ಮೈಮುನಾ ಫೌಂಡೇಷನ್ ಆಶ್ರಮದಲ್ಲಿ ಕೆಲಸ ಕೊಟ್ಟಿದ್ದಾನೆ. ಕಳೆದ ಒಂದು ವರ್ಷದಿಂದ ಸಂತ್ರಸ್ತ ಮಹಿಳೆ ವನಜಾ ಅಲ್ಲಿಯೇ ಕೆಲಸ ಮಾಡುತ್ತಿದ್ದರು.

ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದ ಕಮಿಷನರ್ ಶಶಿಕುಮಾರ್​

ಈ ನಡುವೆ ಮೈಮುನಾ ಫೌಂಡೇಶನ್ ಆಶ್ರಮದ ವಾರ್ಡನ್ ಹಾಗೂ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಶಿಧರ್ ಎಂಬಾತ ಸಂಸ್ಥೆಗೆ ಮೋಸ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಈ ಗೋಲ್​ಮಾಲ್​ನಲ್ಲಿ ವನಜಾ ಕೂಡ ಶಾಮೀಲಾಗಿದ್ದಾರೆಂದು‌ ಆರೋಪಿಸಿ ಆಸೀಫ್, ಶಿವಲಿಂಗಂ ಸೇರಿ ಆಕೆಗೆ ಕುರ್ಚಿ, ವಿಕೆಟ್, ಬೆಲ್ಟ್‌ಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಆಕೆಯ ಕೈ ಮುರಿದಿದ್ದು, ತಲೆ ಸೇರಿದಂತೆ ದೇಹದ ಇತರೆಡೆಗಳಲ್ಲಿ ಗಂಭೀರ ಗಾಯವಾಗಿದೆ.

ನನ್ನ ಎರಡು ಮೊಬೈಲ್ ಫೋನ್​ಗಳು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಟ್ಯಾಬ್ ಇತರೆ ದಾಖಲೆಗಳನ್ನು ಆಸೀಫ್ ಬಲವಂತವಾಗಿ ಕಸಿದುಕೊಂಡಿದ್ದಾನೆ. ಜೊತೆಗೆ ಬಿದ್ದು ಗಾಯವಾಗಿದೆ ಎಂದು ಸುಳ್ಳು ಹೇಳಬೇಕೆಂದು ಒತ್ತಾಯಿಸಿದ್ದ. ಆಸೀಫ್ ಹಾಗೂ ಸಹಚರ ಅಫ್ತಾಬ್ ಸುಳ್ಳು ಹೇಳಿ ನನಗೆ ಚಿಕಿತ್ಸೆ ಕೊಡಿಸಿದರು. ಬಳಿಕ ನನ್ನನ್ನು ಮೈಮುನಾ ಫೌಂಡೇಶನ್ ನ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ ಅಂತಾ ದೂರಿನಲ್ಲಿ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆ ಪೊಲೀಸರು ಆಸೀಫ್ ಸೇರಿದಂತೆ ಆತನ ಸಹಚರರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:'ಅವಿಶ್ವಾಸ' ಇಲ್ಲ, ಚುನಾವಣೆಗೆ ಸಿದ್ಧರಾಗಿ: ಪಾಕ್ ಪ್ರತಿಪಕ್ಷಗಳಿಗೆ ಇಮ್ರಾನ್ ಖಾನ್ ಶಾಕ್

ABOUT THE AUTHOR

...view details