ಕರ್ನಾಟಕ

karnataka

ಮಂಗಳೂರು: ಕಾಲೇಜಿಗೆ ಹೋಗುವಾಗ ಖರ್ಚಿಗೆ ಹಣ ಕೊಡಲಿಲ್ಲವೆಂದು ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

By

Published : Aug 3, 2023, 9:08 PM IST

ಉಳ್ಳಾಲದ ಕುತ್ತಾರ್ ಸುಭಾಷನಗರದಲ್ಲಿ ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿದ್ಯಾರ್ಥಿ ಆತ್ಮಹತ್ಯೆ
ವಿದ್ಯಾರ್ಥಿ ಆತ್ಮಹತ್ಯೆ

ಉಳ್ಳಾಲ (ದಕ್ಷಿಣ ಕನ್ನಡ) : ಮೊದಲ ದಿನ ಕಾಲೇಜಿಗೆ ಹೋಗುವಾಗ ಮನೆಯವರು ಖರ್ಚಿಗೆ ಹಣ ಕೊಡಲಿಲ್ಲವೆಂದು ಡಿಪ್ಲೊಮಾ ವಿದ್ಯಾರ್ಥಿಯೊಬ್ಬ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರ್ ಸುಭಾಷನಗರದಲ್ಲಿ ನಡೆದಿದೆ. ನಗರದ ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬವರ 17 ವರ್ಷ ವಯಸ್ಸಿನ ಪುತ್ರ ಮೃತ ವಿದ್ಯಾರ್ಥಿ.

ಪ್ರಥಮ ಪಿಯುಸಿಯನ್ನು ಕಪಿತಾನಿಯೋ ದಲ್ಲಿ ಮುಗಿಸಿದ್ದ ಮಗ ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಮಾಡುವ ಆಸಕ್ತಿ ವಹಿಸಿದ್ದರಿಂದ ಪೋಷಕರು ಸೇರಿಸಿದ್ದರು. ನಿನ್ನೆ (ಬುಧವಾರ) 500 ರೂ. ಹಣ ಕೊಟ್ಟು ಕಾಲೇಜಿಗೆ ಮಗನನ್ನು ಕಳುಹಿಸಿದ್ದರು. ಗುರುವಾರ ಸಹ ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ 500 ರೂ. ಕೊಡುವಂತೆ ಕೇಳಿದಾಗ ಪೋಷಕರು ಕೊಟ್ಟಿಲ್ಲ. ಇದರಿಂದ ಕೋಪಗೊಂಡು ಮನೆಯಲ್ಲೇ ಉಳಿದುಕೊಂಡ ಮಗ ತಂದೆ ಮನೆ ಹೊರಗಡೆ ಹಾಗೂ ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯೇಕ ಪ್ರಕರಣ- ಮೂರು ಅಂಗಡಿಗಳಲ್ಲಿ ಕಳ್ಳತನ :ತೊಕ್ಕೊಟ್ಟು ಒಳಪೇಟೆಯಲ್ಲಿರುವ ಮೂರು ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಹರಿಶ್ಚಂದ್ರ ಶೆಟ್ಟಿ ಎಂಬವರಿಗೆ ಸೇರಿದ ಲಕ್ಷ್ಮೀ ಕ್ಯಾಂಟೀನ್, ಹ್ಯಾರೀಸ್ ಎಂಬವರಿಗೆ ಸೇರಿದ ಸಿಲ್ವರ್ ಸ್ಟಾರ್ ಎಂಟರ್‌ಪ್ರೈಸ್ ಸ್ಟೀಲ್ ಸಾಮಗ್ರಿಗಳ ಮಾರಾಟ ಮಳಿಗೆ ಹಾಗೂ ಮೋಹನ್ ಎಂಬವರಿಗೆ ಸೇರಿದ ಎಸ್​ಎಸ್ ಕಮ್ಯುನಿಕೇಷನ್ಸ್ ಮೊಬೈಲ್ ಅಂಗಡಿಗಳ ಹೆಂಚು ತೆಗೆದು ಒಳನುಗ್ಗಿದ ಕಳ್ಳ ಕ್ಯಾಷ್ ಕೌಂಟರ್​ನಲ್ಲಿದ್ದ ನಗದು ಹಾಗೂ ಕೆಲವು ಸಾಮಗ್ರಿಗಳನ್ನು ಕಳವು ಮಾಡಿದ್ದಾನೆ.

ಸಿಲ್ವರ್ ಸ್ಟಾರ್ ಅಂಗಡಿಯೊಳಗೆ ನಡೆಸಿದ ಕೃತ್ಯ ಅಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನ ಮುಖವೂ ಇದರಲ್ಲಿ ಪತ್ತೆಯಾಗಿದೆ. ಹೊರರಾಜ್ಯ ಅಥವಾ ನೇಪಾಳ ಮೂಲದ ಕಾರ್ಮಿಕರು ಕೃತ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ತೊಕ್ಕೊಟ್ಟು ಸಹಿತ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಲವೆಡೆ ಇದೇ ರೀತಿಯಲ್ಲಿ ಕೃತ್ಯ ನಡೆದಿರುವುದಾಗಿ ತಿಳಿದು ಬಂದಿದೆ.

ರೈಲ್ವೆ ಸಾಮಗ್ರಿ ಕೊಂಡೊಯ್ಯುತ್ತಿದ್ದ ಇಬ್ಬರ ಬಂಧನ

ರೈಲ್ವೆ ಸಾಮಗ್ರಿ ಕೊಂಡೊಯ್ಯುತ್ತಿದ್ದ ಇಬ್ಬರ ಬಂಧನ : ರೈಲ್ವೆ ಇಲಾಖೆಯ ಸಾಮಗ್ರಿಗಳನ್ನು ಕಳವು ನಡೆಸಿ ಗುಜರಿ ಅಂಗಡಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಇಬ್ಬರು ಯುವಕರು ಕಡಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಇಲ್ಲಿನ ಮರ್ದಾಳ ನಿವಾಸಿಗಳಾದ ಅಟೋ ಚಾಲಕ ರಫೀಕ್ ಹಾಗೂ ಸಿದ್ದಿಕ್ ಎಂಬವರು ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳು ರೈಲ್ವೆಯ ಸಾಮಗ್ರಿಗಳನ್ನು ಕಳವು ಮಾಡಿ ಕಾರಿನಲ್ಲಿ ತರುತ್ತಿದ್ದ ವೇಳೆ ಆಲಂಕಾರು ಎಂಬಲ್ಲಿ ಗಸ್ತು ನಿರತರಾಗಿದ್ದ ಕಡಬ ಎಸ್ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದುಕೊಂಡ ಕಡಬ ಪೊಲೀಸರು ರೈಲ್ವೆ ಪೊಲೀಸರಿಗೆ ಇವರನ್ನು ಹಸ್ತಾಂತರಿಸಿದ್ದಾರೆ. ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಬೆಂಗಳೂರು: ಹೆಂಡತಿ ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ..

ABOUT THE AUTHOR

...view details