ಕರ್ನಾಟಕ

karnataka

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಂಡರೆ ರಾಜ್ಯಾದ್ಯಂತ ಹೋರಾಟ: ಕಟೀಲ್​

By

Published : Jun 5, 2023, 6:38 PM IST

Updated : Jun 5, 2023, 10:20 PM IST

ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಳಿಕ ಕಾಂಗ್ರೆಸ್​ ಪಕ್ಷ ತುಘಲಕ್ ದರ್ಬಾರ್ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ವಾಗ್ದಾಳಿ ನಡೆಸಿದ್ದಾರೆ.

Etv Bharatnalin-kumar-kateel-says-protest-if-ban-on-cow-slaughter-is-withdrawn
ಗೋಹತ್ಯೆ ನಿಷೇಧ ವಾಪಸ್ ತೆಗದುಕೊಂಡರೆ ರಾಜ್ಯಾದ್ಯಂತ ಹೋರಾಟ: ನಳಿನ್ ಕುಮಾರ್ ಕಟೀಲ್​

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಂಡರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್​ನ ತುಘಲಕ್ ದರ್ಬಾರ್ ಆರಂಭವಾಗಿದೆ. ಮಹಾತ್ಮ ಗಾಂಧೀಜಿಯೇ ಗೋ ಸಂತತಿಯ ಉಳಿವಿನ ಬಗ್ಗೆ ಮಾತನಾಡಿದ್ದರು. ಗೋವು ತಾಯಿಯ ಸ್ವರೂಪ. ಗೋವು ಉಳಿದರೆ ಕೃಷಿ ಉಳಿಯುತ್ತದೆ ಎಂದರು.

ಸ್ವಾತಂತ್ರ್ಯಾ ನಂತರ ಎಲ್ಲ ರಾಜ್ಯಗಳಲ್ಲೂ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿತ್ತು. ಕಾಂಗ್ರೆಸ್ ತುಷ್ಠೀಕರಣ ನೀತಿಯಿಂದ ಕಾಯಿದೆ ವಾಪಸ್ ಆಗಿದೆ. ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಗೋಹತ್ಯೆಗಳಾಗಿವೆ. ಗೋ ಹಂತಕರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡಿದೆ ಎಂದು ಆರೋಪಿಸಿದರು. 200 ಯೂನಿಟ್ ವಿದ್ಯುತ್ ಫ್ರೀ ಕೊಡುತ್ತೇವೆ ಎಂದ ಕಾಂಗ್ರೆಸ್ ಚುನಾವಣೆ ಗೆದ್ದ ಬಳಿಕ ಅದಕ್ಕೆ ಮಾನದಂಡ ಹಾಕುವ ಕೆಲಸ ಮಾಡಿತು. ಇದೀಗ ಅದೆಲ್ಲವನ್ನೂ ಮೀರಿ ವಿದ್ಯುತ್ ಬೆಲೆಯೇರಿಕೆ ಮಾಡುವಂತಹ ಕಾರ್ಯದಲ್ಲಿ ತೊಡಗಿದೆ. ಅಂದರೆ ಸುಳ್ಳು ಹೇಳಿ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನಸಾಮಾನ್ಯರಿಗೆ ಹೊರೆಯಾಗುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಆರ್​ಎಸ್ಎಸ್ ನಿಷೇಧ ಮಾಡುವ ಅಧಿಕಾರ ಕಾಂಗ್ರೆಸ್​ಗೆ ಇಲ್ಲ. ಸಿದ್ಧರಾಮಯ್ಯನ ಮುತ್ತಾತನಿಗೇ ಆರ್​ಎಸ್​ಎಸ್ ನಿಷೇಧ ಮಾಡಲು ಸಾಧ್ಯವಾಗಿಲ್ಲ.‌ ತಾಕತ್ ಇದ್ದರೆ ಮೊದಲು ಪಾಕ್ ಪರ ಘೋಷಣೆ ಕೂಗಿದರವನ್ನು ಅರೆಸ್ಟ್ ಮಾಡಲಿ ಎಂದು ಸವಾಲೆಸೆದರು.

ರಾಷ್ಟ್ರಭಕ್ತ ಸೂಲಿಬೆಲೆಯವರನ್ನು ಬಂಧನ ಮಾಡುವುದಾಗಿ ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಮೆರವಣಿಗೆ ಸಭೆಯಲ್ಲಿ ಪಾಕ್​ಗೆ ಜೈಕಾರ ಹಾಕಲಾಗುತ್ತಿದೆ.‌ ಇದರ ಮೇಲೆ ಯಾವುದೇ ಕ್ರಮ ಇಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕಿಳಿದಿದೆ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಈ ರಾಜ್ಯದ ಬಹುಜನರ ಬೇಡಿಕೆಯಾಗಿದೆ. ಕಾಂಗ್ರೆಸ್​ಗೆ ಚುನಾವಣೆ ಸಂದರ್ಭದಲ್ಲಿ ರಾಮ - ಹನುಮನ ನೆನಪಾಗುತ್ತದೆ. ಆ ಬಳಿಕ ಹಿಂದೂ ಭಾವನೆಗಳನ್ನು ಧಿಕ್ಕರಿಸುತ್ತಿದೆ. ಇದರ ಬಗ್ಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದರು.

ಡೋಂಗಿತನ ಪ್ರದರ್ಶನ- ಶಾಸಕ ವೇದವ್ಯಾಸ ಕಾಮತ್:ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿ ನಗರದ ಕ್ಲಾಕ್ ಟವರ್ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಯಾವ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ, ಇದೀಗ ಜನರನ್ನು ಸಂಪೂರ್ಣ ಡೋಂಗಿ ಮಾಡುವ ಕಾರ್ಯ ಮಾಡುತ್ತಿದೆ. ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ಅದನ್ನು ಅನುಷ್ಠಾನ ಮಾಡಲಾಗದೆ ನಾಯಕರು ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಂಗ್ರೆಸ್ ನಾಯಕರು ತಮ್ಮ ಅಲ್ಪತನ ಪ್ರದರ್ಶಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ಕೊಡುವ ಧೈರ್ಯವಿದೆಯೇ?. ಇಲ್ಲದಿದ್ದಲ್ಲಿ ಚುನಾವಣೆ ವೇಳೆ ಅದನ್ನು ಏಕೆ ಘೋಷಣೆ ಮಾಡಿದಿರಿ. ಗ್ಯಾರಂಟಿ ಘೋಷಣೆಗಳಿಂದ ರಾಜ್ಯದ ಬೊಕ್ಕಸಕ್ಕೆ 60 ಸಾವಿರ ಕೋಟಿ ರೂ. ನಷ್ಟವಾಗುತ್ತದೆ ಎಂದು ಆರ್ಥಿಕ ಇಲಾಖೆಯವರು ಹೇಳಿದರೂ ನೀವು ಕ್ಯಾರೇ ಎನ್ನದೆ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೀರಿ. ಅದರ ಬೆನ್ನಲ್ಲೇ ವಿದ್ಯುತ್ ದರವನ್ನು ಹೆಚ್ಚು ಮಾಡಿ ಕಾಂಗ್ರೆಸ್ ಡೋಂಗಿ ಮಾಡುತ್ತಿದೆ ಎಂದು ಆರೋಪಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಗ್ಯಾರಂಟಿ ಘೋಷಣೆ ಜಾರಿಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೆ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಮಾನದಂಡವನ್ನು ಹಾಕದೇ ಮತ ಪಡೆದಿದ್ದೀರಿ. ಇದೀಗ ಕಂಡಿಷನ್ ಹಾಕುವ ಕಾರ್ಯ ಮಾಡುತ್ತಿದ್ದೀರಿ. ಆದ್ದರಿಂದ ಯಾವುದೇ ಮಾನದಂಡ, ಕಂಡಿಷನ್​ಗಳನ್ನು ವಿಧಿಸದೆ ಗ್ಯಾರಂಟಿ ಘೋಷಣೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ:'ಶಾಂತಿಯುತ ಕರ್ನಾಟಕ' ಸಹಾಯವಾಣಿ ಆರಂಭಿಸಿ: ಸರ್ಕಾರಕ್ಕೆ ಸಚಿವ ಎಂ.ಬಿ.ಪಾಟೀಲ್‌ ಮನವಿ

Last Updated : Jun 5, 2023, 10:20 PM IST

ABOUT THE AUTHOR

...view details