ಕರ್ನಾಟಕ

karnataka

ಪುತ್ತೂರು... ವಿಷ್ಣು ದೇವಾಲಯಕ್ಕೆ ಗದ್ದೆ ಬಿಟ್ಟು ಕೊಟ್ಟ ಮುಸ್ಲಿಂ ಕುಟುಂಬ

By

Published : Jul 24, 2021, 11:31 PM IST

ಮುಸ್ಲಿಂ ಕುಟುಂಬವೊಂದು ಗದ್ದೆ ಬೇಸಾಯವನ್ನು ವಿಷ್ಣುಮೂರ್ತಿ ದೇವಳಕ್ಕಾಗಿ ತ್ಯಾಗ ಮಾಡಿದೆ. ಗ್ರಾಮಸ್ಥರೆಲ್ಲ ಸೇರಿ ಇಲ್ಲಿ ಬೇಸಾಯ ಮಾಡಿದ್ದು, ಇದರಲ್ಲಿ ಬೆಳೆದ ಅಕ್ಕಿ ದೇವಳಕ್ಕೆ ಸೇರಲಿದೆ.

muslim-family-gives-filed-for-crops-of-temple
muslim-family-gives-filed-for-crops-of-temple

ಪುತ್ತೂರು (ದಕ್ಷಿಣ ಕನ್ನಡ):ಜಾತಿ, ಧರ್ಮಗಳ ನಡುವೆ ಕಿಚ್ಚು ಹೊಗೆಯಾಡುತ್ತಿರುವ ಇಂದಿನ ದಿನಗಳಲ್ಲಿ ಇಲ್ಲಿನ ಪುಟ್ಟ ಹಳ್ಳಿಯಲ್ಲಿ ಮತೀಯ ಸಾಮರಸ್ಯಕ್ಕೆ ಮೇರು ನಿದರ್ಶನವೊಂದು ದಾಖಲಾಗಿದೆ. ಹಿಂದೂ ದೇವರ ಉತ್ಸವಕ್ಕೆ ಬಳಸುವ ಅಕ್ಕಿ ತಯಾರಿಸಲು ಮುಸ್ಲಿಂ ಕುಟುಂಬಗಳು ತಮ್ಮ ಹೊಟ್ಟೆಪಾಡನ್ನೂ ಲೆಕ್ಕಿಸದೆ ಗದ್ದೆಯನ್ನೇ ಬಿಟ್ಟು ಕೊಟ್ಟಿದ್ದಾರೆ.

ಈ ಅಪೂರ್ವ ವಿದ್ಯಮಾನ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಮಜಲುಗದ್ದೆ ಎಂಬಲ್ಲಿ. ಇಲ್ಲಿನ ನಿವಾಸಿಗಳಾದ ಪುತ್ತು ಬ್ಯಾರಿ, ಅಬ್ಬಾಸ್ ಬ್ಯಾರಿ ಮತ್ತು ಅಬೂಬಕ್ಕರ್ ಕೂಡುರಸ್ತೆ ಎಂಬುವರು ಪ್ರತೀ ವರ್ಷ ತಾವು ಬೇಸಾಯ ಮಾಡುವ ಮೂರು ಎಕರೆ ಗದ್ದೆಯನ್ನು ಈ ಬಾರಿ ತಮ್ಮೂರಿನ ದೇವಸ್ಥಾನಕ್ಕೆ ಬಿಟ್ಟು ಕೊಟ್ಟಿದ್ದಾರೆ.

ದೇವಾಲಯದ ಬೇಸಾಯಕ್ಕೆ ಗದ್ದೆ ಬಿಟ್ಟುಕೊಟ್ಟ ಮುಸ್ಲಿಂ ಕುಟುಂಬ

ಊರಿನ ಪ್ರಾಚೀನ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿದ್ದು, ಗ್ರಾಮಸ್ಥರೆಲ್ಲ ಹಗಲು ರಾತ್ರಿ ಕರಸೇವೆ ಮಾಡುತ್ತಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ. ಉತ್ಸವ ಸಂದರ್ಭದಲ್ಲಿ ಬೇಕಾದ ಅಕ್ಕಿಯನ್ನು ದೇವಳದ ಪರಿಸರದಲ್ಲೇ ಬೆಳೆಸಿದರೆ ಉತ್ತಮವೆಂದು ಜೀರ್ಣೋದ್ಧಾರ ಸಮಿತಿ ಯೋಚಿಸಿದಾಗ ಸ್ಥಳೀಯ ವೆಂಕಪ್ಪ ನಾಯ್ಕ ಎಂಬುವರು ತಾವು ಅನೇಕ ವರ್ಷಗಳಿಂದ ಬೇಸಾಯ ಮಾಡದೇ ಬಿಟ್ಟಿರುವ ಗದ್ದೆಯನ್ನು ಬೇಸಾಯಕ್ಕಾಗಿ ಬಿಟ್ಟುಕೊಡಲು ನಿರ್ಧರಿಸಿದರು.

ದೇವಾಲಯದ ಬೇಸಾಯ

ಅದರಂತೆ ಸಮಿತಿ ಪ್ರಮುಖರು, ದಾನಿಗಳು ಸೇರಿ ತಮ್ಮಲ್ಲೇ ದೇಣಿಗೆ ಸಂಗ್ರಹಿಸಿ ಗದ್ದೆ ಉತ್ತು, ನಾಟಿ ಮಾಡಿದರು. ಇದರ ಬೆನ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಯಿತು. ಮೂವರು ಮುಸ್ಲಿಂ ಬಂಧುಗಳು ತಮ್ಮ ಗದ್ದೆಯನ್ನೂ ದೇವಳದ ಬೇಸಾಯಕ್ಕಾಗಿ ಬಿಟ್ಟುಕೊಟ್ಟರು.

ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ

ಅಣ್ಣ ತಮ್ಮಂದಿರಾದ ಅಬ್ಬಾಸ್ ಮತ್ತು ಅಬೂಬಕ್ಕರ್ ಅವರ ಗದ್ದೆ ಹಾಗೂ ಇವರ ಅಣ್ಣನ ಮಗನಾದ ಪುತ್ತು ಬ್ಯಾರಿ ಅವರ ಗದ್ದೆ ಅಕ್ಕಪಕ್ಕದಲ್ಲೇ ಇದ್ದು, 3 ಎಕರೆ ವಿಶಾಲವಾಗಿದೆ. ಪ್ರತೀ ವರ್ಷ ಇವರು ಮುಂಗಾರು ಬೇಸಾಯ ಮಾಡುತ್ತಾರೆ. ವಿಶೇಷವೆಂದರೆ ಈ ಬಾರಿ ತಮ್ಮ ಹೊಟ್ಟೆಪಾಡನ್ನೂ ಯೋಚಿಸದೆ ಇವರು ಗದ್ದೆ ಬೇಸಾಯವನ್ನು ಎಲಿಯ ವಿಷ್ಣುಮೂರ್ತಿ ದೇವಳಕ್ಕಾಗಿ ತ್ಯಾಗ ಮಾಡಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಇಲ್ಲಿ ಬೇಸಾಯ ಮಾಡಿದ್ದು, ಇದರಲ್ಲಿ ಬೆಳೆದ ಅಕ್ಕಿ ದೇವಳಕ್ಕೆ ಸೇರಲಿದೆ. ಗದ್ದೆಯ ಜಮೀನು ವಾರಸುದಾರರಲ್ಲೇ ಉಳಿಯುತ್ತದೆ.

ದೇವಾಲಯದ ಬೇಸಾಯ

ಈ ಹಳ್ಳಿಯಲ್ಲಿ ನಾವು ಎಲ್ಲ ಜಾತಿಯವರೂ ಒಂದೇ ತಾಯಿಯ ಮಕ್ಕಳಂತೆ ಜೀವನ ಮಾಡುತ್ತಿದ್ದು, ತಮ್ಮೂರಿನ ದೇವಸ್ಥಾನದ ಅಭಿವೃದ್ಧಿ ಆಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಾಕಷ್ಟು ಅಕ್ಕಿ ಬೇಕಾಗುತ್ತದೆ. ಅದಕ್ಕಾಗಿ ಅದನ್ನು ಈ ಬಾರಿ ಬೇಸಾಯ ಮಾಡದೇ ಇರಲು ನಿರ್ಧರಿಸಿ ಅದನ್ನು ದೇವಸ್ಥಾನದ ವತಿಯಿಂದಲೇ ಮಾಡಲು ಒಪ್ಪಿಗೆ ನೀಡಿದ್ದಾರೆ.

ದೇವಾಲಯದ ಬೇಸಾಯ

ನಾಟಿಯಲ್ಲೂ ಮೆರೆದ ಸೌಹಾರ್ದತೆ:

ಮುಸ್ಲಿಂ ಬಂಧುಗಳು ಒಪ್ಪಿಗೆ ನೀಡಿದ ಗದ್ದೆಯಲ್ಲಿ ಭಾನುವಾರ ನಾಟಿ ನಡೆದಾಗ ಸ್ವತಃ ಅಬ್ಬಾಸ್, ಪುತ್ತು, ಸತ್ತಾರ್ ಕುಟುಂಬಸ್ಥರು ಉಚಿತವಾಗಿ ಸೇವೆ ನೀಡಿದ್ದಾರೆ. ಇಲ್ಲಿಂದ 60 ಕಿ.ಮೀ. ದೂರದ ಬೆಳ್ತಂಗಡಿ ತಾಲೂಕಿನ ಕಳೆಂಜದ ಗಿರೀಶ್ ಗೌಡ 800 ಸೂಡಿ ನೇಜಿ ಉಚಿತವಾಗಿ ನೀಡಿದ್ದಲ್ಲದೆ, ಕಳೆಂಜ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಕೆ. ನೇತೃತ್ವದಲ್ಲಿ 16 ಮಂದಿ ಬಂದು ಉಚಿತವಾಗಿ ನಾಟಿ ಕಾರ್ಯ ನಡೆಸಿಕೊಟ್ಟರು. ಇವರ ಜತೆ ಎಲಿಯ ಪರಿಸರದ 40 ಗ್ರಾಮಸ್ಥರು ಸೇರಿಕೊಂಡರು.

ABOUT THE AUTHOR

...view details