ಕರ್ನಾಟಕ

karnataka

ವಿಪ್ರೋ ಅರ್ಥಿಯನ್‌ ಸುಸ್ಥಿರ ಶಿಕ್ಷಣ ಕಾರ್ಯಕ್ರಮ: ಮೂಡಂಬೈಲು ಸರ್ಕಾರಿ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

By

Published : Jan 22, 2022, 11:25 PM IST

ಮೂಡಂಬೈಲು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಬಾರಿ ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆಯ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಮೂಲಕ ಮೂಡಂಬೈಲು ಸರ್ಕಾರಿ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ವಿಪ್ರೋ ಅರ್ಥಿಯನ್‌ ಸುಸ್ಥಿರ ಶಿಕ್ಷಣ ಕಾರ್ಯಕ್ರಮ
ವಿಪ್ರೋ ಅರ್ಥಿಯನ್‌ ಸುಸ್ಥಿರ ಶಿಕ್ಷಣ ಕಾರ್ಯಕ್ರಮ

ಮಂಗಳೂರು: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲು ಸ.ಹಿ.ಪ್ರಾ. ಶಾಲೆಯು ಈ ಬಾರಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ.

ವಿಪ್ರೋ ಫೌಂಡೇಶನ್‌ ನಡೆಸುವ ವಿಪ್ರೋ ಅರ್ಥಿಯನ್‌ ಶಾಲಾ ಕಾಲೇಜುಗಳಿಗಾಗಿ ಸುಸ್ಥಿರ ಶಿಕ್ಷಣ ಕಾರ್ಯಕ್ರಮ ಎಂಬ ರಾಷ್ಟ್ರಮಟ್ಟದ ಯೋಜನಾ ಕಲಿಕಾ ಸ್ಪರ್ಧೆಯಲ್ಲಿ 2021-22 ನೇ ಸಾಲಿನ ರಾಷ್ಟ್ರಮಟ್ಟದಲ್ಲಿ ವಿಜೇತಗೊಂಡಿದೆ.

ಈ ರೀತಿಯ ಸಾಧನೆ ಮಾಡಿದ ಕರ್ನಾಟಕದ ಏಕಮಾತ್ರ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರ ಮಟ್ಟದಲ್ಲಿ 20 ಶಾಲೆಗಳನ್ನು ವಿಪ್ರೋ ಅರ್ಥಿಯನ್‌ ರಾಷ್ಟ್ರಮಟ್ಟದ ವಿಜೇತ ಶಾಲೆ ಎಂದು ಆಯ್ಕೆ ಮಾಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಸರ್ಕಾರಿ ಖಾಸಗಿ, ಕನ್ನಡ ಮಾಧ್ಯಮ, ಇಂಗ್ಲಿಷ್‌ ಮಾಧ್ಯಮ ಎಂಬ ಯಾವುದೇ ಭೇದವಿಲ್ಲದೆ ಯಾವ ಶಾಲೆಗಳೂ ಭಾಗವಹಿಸಬಹುದಾಗಿತ್ತು. ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ದಕ್ಷಿಣ ಬಾರತದ ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲೇ ಬರೆದ ಯೋಜನಾ ವರದಿಯ ಮೂಲಕವೇ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮೂಡಂಬೈಲು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಬಾರಿ ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆಯ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರು. 'ನಮ್ಮ ಕಸ ನಮ್ಮ ಹೊಣೆ' ಎಂಬ ಶೀರ್ಷಿಕೆಯಡಿ ಸ್ವಚ್ಛತೆಗೆ ಹಾಕು ಮಣೆ ಎಂಬ ಶೀರ್ಷಿಕೆಯಲ್ಲಿ ಈ ಯೋಜನೆಯನ್ನು ಕೈಗೊಂಡಿದ್ದರು.

ಮಾರ್ಗದರ್ಶಿ ಪುಸ್ತಕದಲ್ಲಿರುವ ಚಟುವಟಿಕೆಗಳ ಜೊತೆಗೆ ಹಳೆಯ ಸೀರೆಯಿಂದ ಕಾಲೊರೆಸುವ ಮ್ಯಾಟ್‌ ತಯಾರಿ, ಎಸೆಯುವ ಪೆನ್‌ ಗಳಿಂದ ಪೆನ್‌ ಸ್ಟಾಂಡ್‌ ಮತ್ತು ಹೂದಾನಿ ತಯಾರಿಹಳೆಯ ಪ್ಯಾಂಟ್‌ ಬಟ್ಟೆಯಿಂದ ಬಹು ಉಪಯೋಗಿ ಚೀಲ ತಯಾರಿ ಸೇರಿದಂತೆ ಹತ್ತು ಹಲವು ಯೋಜನೆಗೆ ಪೂರಕವಾದ ಕೆಲವು ವಿಶೇಷ ಚಟುವಟಿಕೆಗಳನ್ನು ಶಾಲಾ ತಂಡ ಕೈಗೊಂಡಿತ್ತು. ಅಲ್ಲದೆ ಜನ ಜಾಗೃತಿಗಾಗಿ ಭಿತ್ತಿಪತ್ರ ಅಂಟಿಸುವಿಕೆ, ಜಾಗೃತಿ ಜಾಥಾಗಳನ್ನು ಕೈಗೊಳ್ಳಲಾಗಿತ್ತು.

ಎಂಟನೇ ತರಗತಿಯ ಆಕಾಶ್‌, ಕಾರ್ತಿಕ್‌, ಪ್ರಣಾಮ್‌, ಪ್ರೀತಂ, ಏಳನೇ ತರಗತಿಯ ಆದಿತ್ಯ ಮತ್ತು ನಿತೇಶ್‌ ಈ ಆರು ವಿದ್ಯಾರ್ಥಿಗಳು, ಶಿಕ್ಷಕರಾದ ಶೃತಿ ಎನ್‌ ಮತ್ತು ಅರವಿಂದ ಕುಡ್ಲ ಅವರು ಈ ಯೋಜನೆಯಲ್ಲಿ ಭಾಗವಹಿಸಿದ್ದರು.

TAGGED:

ABOUT THE AUTHOR

...view details