ಕರ್ನಾಟಕ

karnataka

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಸಂಪೂರ್ಣ ಅದಾನಿ ತೆಕ್ಕೆಗೆ

By ETV Bharat Karnataka Team

Published : Oct 6, 2023, 9:26 PM IST

Updated : Oct 6, 2023, 10:30 PM IST

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮತ್ತು ನಿರ್ವಹಣೆ ಅಕ್ಟೋಬರ್​ 31ರಿಂದ ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ.

Mangaluru International Airport completely take over by adani group
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಸಂಪೂರ್ಣ ಅದಾನಿ ತೆಕ್ಕೆಗೆ!

ಮಂಗಳೂರು (ದಕ್ಷಿಣ ಕನ್ನಡ): ಮೂರು ವರ್ಷದ ಬಳಿಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮತ್ತು ನಿರ್ವಹಣೆ ಅಕ್ಟೋಬರ್​ 31ರಿಂದ ದೇಶದ ಪ್ರತಿಷ್ಠಿತ ಉದ್ದಿಮೆ ಕಂಪನಿ ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ಏರ್​ಪೋರ್ಟ್​ನ ಆಗುಹೋಗುಗಳು ಅದಾನಿ ಸಮೂಹದಿಂದಲೇ ನಡೆಯಲಿದೆ.

2020ರ ಅಕ್ಟೋಬರ್​ 31ರಂದು ಮಂಗಳೂರು ಸೇರಿದಂತೆ ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಹಾಗೂ ತ್ರಿವೆಂಡ್ರಂ ವಿಮಾನ ನಿಲ್ದಾಣಗಳ ಆಡಳಿತವನ್ನು ಅದಾನಿ ಗ್ರೂಪ್ ತನ್ನ ವಶಕ್ಕೆ ಪಡೆದುಕೊಂಡಿತ್ತು. ದೇಶದ ಆರು ವಿಮಾನ ನಿಲ್ದಾಣಗಳ ಪೈಕಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಥಮವಾಗಿ ಅದಾನಿ ಗ್ರೂಪ್ ಕೈ ವಶವಾಗಿತ್ತು.

ಬಳಿಕ ಅದು ಅದಾನಿ ಗ್ರೂಪ್​ನ ಮಂಗಳೂರು ಇಂಟರ್​ನ್ಯಾಷನಲ್ ಏರ್​ಪೋರ್ಟ್ ಲಿಮಿಟೆಡ್ ಆಗಿ ಬದಲಾಗಿತ್ತು. ನಂತರ ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಹಾಗೂ ತ್ರಿವೆಂಡ್ರಂ ವಿಮಾನ ನಿಲ್ದಾಣಗಳನ್ನು ಅದಾನಿ ತೆಕ್ಕೆಗೆ ತೆಗೆದುಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣವನ್ನು 2020ರ ಜುಲೈನಲ್ಲಿ ಅದಾನಿ ಕಂಪನಿಯು ಜಿವಿಕೆ ಕೈನಿಂದ ತೆಗೆದುಕೊಂಡಿತ್ತು.

ಕನ್ಸೆಷನ್ ಒಪ್ಪಂದದ ಪ್ರಕಾರ ಮೂರು ವರ್ಷಗಳವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅರ್ಧದಷ್ಟು ಸಿಬ್ಬಂದಿ ಹಾಗೂ ಅದಾನಿ ಸಿಬ್ಬಂದಿ ಜೊತೆಯಾಗಿಯೇ ಕೆಲಸ ಮಾಡಿದ್ದಾರೆ. ಇದೀಗ ಒಪ್ಪಂದದ ಅವಧಿ ಅಕ್ಟೋಬರ್​ 30ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ಇಡೀ ವಿಮಾನ ನಿಲ್ದಾಣದ ಆಡಳಿತ ಅದಾನಿ ಗ್ರೂಪಿಗೆ ಸೇರಲಿದೆ.

ಏರ್​ಪೋರ್ಟ್​ ಅದಾನಿ ತೆಕ್ಕೆಗೆ ಸೇರ್ಪಡೆಗೊಂಡ ವೇಳೆ 118 ಮಂದಿ ಎಎಐ ಸಿಬ್ಬಂದಿ ಇದ್ದರು. ಅವರಲ್ಲಿ 97 ಮಂದಿಯನ್ನು ಉಳಿಸಿಕೊಳ್ಳಲಾಗಿತ್ತು. ಇವರೆಲ್ಲ ಎಜಿಎಂ ಹಾಗೂ ಕೆಳಗಿನ ಹಂತದವರಾಗಿದ್ದರು. ಅವರೆಲ್ಲ ಹಣಕಾಸು, ಎಚ್‌ಆರ್, ಆಡಳಿತ, ವಾಣಿಜ್ಯ, ಅಗ್ನಿಶಾಮಕ, ಟರ್ಮಿನಲ್ ಸೇರಿದಂತೆ ಆರು ವಿಭಾಗಗಳಲ್ಲಿ ಅದಾನಿ ಸಿಬ್ಬಂದಿಯೊಂದಿಗೆ ಜತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈಗ ಒಪ್ಪಂದ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಆ 97 ಮಂದಿಯನ್ನು ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಗೊಳಿಸಲಾಗಿದೆ. ಇನ್ನು ಈ ಆರು ವಿಭಾಗ ಕೂಡ ಅದಾನಿ ಗ್ರೂಪಿನ ಆಡಳಿತಕ್ಕೆ ಒಳಪಡಲಿದೆ. ಆದರೆ, ಏರ್‌ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಹಾಗೂ ಸಿಎನ್ಎಸ್ (ಕಮ್ಯುನಿಕೇಷನ್ ನೇವಿಗೇಷನ್ ಅಂಡ್ ಸರ್ವೆಲೆನ್ಸ್) ಮಾತ್ರ ಅದಾನಿ ಗ್ರೂಪಿಗೆ ಸೇರುವುದಿಲ್ಲ.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ‌ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ಮಾತನಾಡಿ, "ಕನ್ಸೆಷನ್ ಅಗ್ರಿಮೆಂಟ್ ಪ್ರಕಾರ 6 ವಿಮಾನ‌ ನಿಲ್ದಾಣಗಳ ಆಡಳಿತ ಮತ್ತು ನಿರ್ವಹಣೆ 50 ವರ್ಷದ ಲೀಸ್​ಗೆ ಕೊಡಲಾಗಿದೆ. ಅಗ್ರಿಮೆಂಟ್ ಪ್ರಕಾರ 50 ವರ್ಷ ಅಭಿವೃದ್ಧಿ ಮಾಡಲಾಗುತ್ತದೆ. ಈ ಅಗ್ರಿಮೆಂಟ್ ಪ್ರಕಾರ ಎಎಐ ಸಿಬ್ಬಂದಿ ನಮ್ಮ ಜೊತೆಗೆ ಇದ್ದರು. ಅವರನ್ನು ಇದೀಗ ವರ್ಗಾವಣೆ ಮಾಡಲಾಗಿದ್ದು, ಅಕ್ಟೋಬರ್ 30ರ ನಂತರ ಪೂರ್ಣ ಕಾರ್ಯನಿರ್ವಹಣೆ ಅದಾನಿ ಗ್ರೂಪಿಗೆ ಸೇರಲಿದೆ" ಎಂದು ತಿಳಿಸಿದರು.

ಏರೋಡ್ರೋಮ್ ಪರವಾನಗಿ ನವೀಕರಣ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರೋಡ್ರೋಮ್ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ನವೀಕರಿಸಿದ್ದಾರೆ. ಸೆಪ್ಟೆಂಬರ್ 16, 2023ರಿಂದ ಅನ್ವಯವಾಗುವ ನವೀಕರಿಸಿದ ಪರವಾನಗಿಯು ಸೆಪ್ಟೆಂಬರ್ 15, 2028ರವರೆಗೆ 5 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ.

ಪ್ರಸ್ತುತ ಏರೋಡ್ರೋಮ್ ಪರವಾನಗಿಯ ಮಾನ್ಯತೆಯು ಮಾರ್ಚ್ 16, 2022ರಂದು ನೀಡಲಾಗಿದ್ದು, ಸೆಪ್ಟೆಂಬರ್ 15, 2023ರಂದು ಕೊನೆಗೊಂಡಿದೆ. ವಿಮಾನ ನಿಲ್ದಾಣವು ಸೆಪ್ಟೆಂಬರ್ 12ರಂದು ನವೀಕರಿಸಿದ ಪರವಾನಗಿಯನ್ನು ಪಡೆದುಕೊಂಡಿದೆ. DGCA ಆರಂಭದಲ್ಲಿ ವಿಮಾನ ನಿಲ್ದಾಣವನ್ನು ಸೆಪ್ಟೆಂಬರ್ 16, 2021ರಂದು ನಿರ್ವಹಿಸುವ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಚ್ 15, 2022ರವರೆಗೆ ಆರು ತಿಂಗಳ ಅವಧಿಗೆ ಏರೋಡ್ರೋಮ್ ಪರವಾನಗಿಯನ್ನು ನೀಡಿತು.

ಏರ್‌ಕ್ರಾಫ್ಟ್ ನಿಯಮಗಳು, 1937ರ ನಿಯಮ 78ರ ಅಡಿಯಲ್ಲಿ ನೀಡಲಾದ ಏರೋಡ್ರೋಮ್ ಪರವಾನಗಿಯು ವಿಮಾನ ನಿಲ್ದಾಣ ನಿರ್ವಾಹಕರಿಗೆ ಪ್ರಮುಖ ದಾಖಲೆಯಾಗಿದೆ. "ಏರೋಡ್ರೋಮ್ ಪರವಾನಗಿಯು ವಿಮಾನ ನಿಲ್ದಾಣದ ನಿರ್ವಾಹಕರಿಗೆ ರಿಯಾಯಿತಿ ಒಪ್ಪಂದದ ಪ್ರಕಾರ ವಿಮಾನ ನಿಲ್ದಾಣದ ಸಂಪೂರ್ಣ ನಿರ್ವಹಣೆಯನ್ನು ನೀಡುತ್ತದೆ" ಎಂದು ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ:ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆ.. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಚಾಲಾಕಿ

Last Updated : Oct 6, 2023, 10:30 PM IST

ABOUT THE AUTHOR

...view details