ಕರ್ನಾಟಕ

karnataka

ಸತತ 13 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ.. 2.5 ಕೆಜಿ ತೂಕದ ಕ್ಯಾನ್ಸರ್​ ಗಡ್ಡೆ ಹೊರ ತೆಗೆದ ಮಂಗಳೂರು ವೈದ್ಯರು..

By

Published : Sep 25, 2021, 6:27 PM IST

Updated : Sep 25, 2021, 6:39 PM IST

ಸತತ 13 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ

ಇತ್ತೀಚಿಗೆ ಯೆನೆಪೋಯ ಆಸ್ಪತ್ರೆಗೆ ಬಂದ ಈ ರೋಗಿಯನ್ನು ಪರಿಶೀಲಿಸಿ ಸರ್ಜಿಕಲ್ ಕ್ಯಾನ್ಸರ್ ವೈದ್ಯರ ತಂಡ ಟ್ಯೂಮರ್ ಬೋರ್ಡ್​ನಲ್ಲಿ ಸಂಪೂರ್ಣ ಮೌಲ್ಯಮಾಪನ ಮತ್ತು ಪ್ರಕರಣದ ಚರ್ಚೆ ಮಾಡಿ ಶಸ್ತ್ರಚಿಕಿತ್ಸೆ ಮಾಡಿದೆ. ಸುಮಾರು 13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಸುಮಾರು ಎರಡೂವರೆ ಕೆಜಿಯಷ್ಟು ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆಯಲಾಗಿದೆ..

ಮಂಗಳೂರು :32 ವರ್ಷದ ಮಹಿಳೆಯೊಬ್ಬರಲ್ಲಿ ಕಾಣಿಸಿದ್ದ ಸುಮಾರು 2.5 ಕೆಜಿಯಷ್ಟು ಎದೆಗೂಡಿನ ಕ್ಯಾನ್ಸರ್​ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ತೆಗೆಯಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಯೆನೆಪೋಯ ಆಸ್ಪತ್ರೆಯ ಸರ್ಜಿಕಲ್ ಆಂಕೊಲಜಿ ವಿಭಾಗದ ಮುಖ್ಯಸ್ಥ ಜಲಾಲುದ್ದೀನ್ ಅಕ್ಬರ್ ತಿಳಿಸಿದ್ದಾರೆ.

ಯೆನೆಪೋಯ ಆಸ್ಪತ್ರೆಯ ಸರ್ಜಿಕಲ್ ಆಂಕೊಲಜಿ ವಿಭಾಗದ ಮುಖ್ಯಸ್ಥ ಜಲಾಲುದ್ದೀನ್ ಅಕ್ಬರ್

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇರಳದ 32 ವರ್ಷದ ಶ್ವೇತಾ ಎಂಬ ಮಹಿಳೆ ಜನ್ಮಜಾತವಾಗಿ ಬೆನ್ನು ಮೂಳೆಯ ವಿರೂಪ ಮತ್ತು ಎದೆಯ ಮೂಳೆಯ ಗಂಟು ಸಮಸ್ಯೆಯಿಂದ ಬಳಲುತ್ತಿದ್ದರು.

ಇದರಿಂದ ಅವರು ಆರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು‌. ಇದು ಬಳಿಕ ಕ್ಯಾನ್ಸರ್​ಗೆ ಪರಿವರ್ತನೆಗೊಂಡು 2019ರಲ್ಲಿ ಕೊಯಂಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ 2 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಿದರು.

ಅವರಿಗೆ ಬಳಿಕ ರೇಡಿಯೇಶನ್ ನೀಡಲಾಯಿತಾದರೂ ಕ್ಯಾನ್ಸರ್ ಗಂಟು ಮಾಯವಾಗದೆ ಮತ್ತೆ ಬೆಳೆದಿದೆ. ಇದರ ಶಸ್ತ್ರಚಿಕಿತ್ಸೆಗಾಗಿ ಇವರ ಹೆತ್ತವರು ದೇಶದ ಪ್ರಮುಖ ಆಸ್ಪತ್ರೆಗಳಿಗೆ ಹೋದರೂ ಅದು ಅಸಾಧ್ಯವೆಂದು ವಾಪಸ್ ಕಳುಹಿಸಿದ್ದಾರೆ.

ಇತ್ತೀಚಿಗೆ ಯೆನೆಪೋಯ ಆಸ್ಪತ್ರೆಗೆ ಬಂದ ಈ ರೋಗಿಯನ್ನು ಪರಿಶೀಲಿಸಿ ಸರ್ಜಿಕಲ್ ಕ್ಯಾನ್ಸರ್ ವೈದ್ಯರ ತಂಡ ಟ್ಯೂಮರ್ ಬೋರ್ಡ್​ನಲ್ಲಿ ಸಂಪೂರ್ಣ ಮೌಲ್ಯಮಾಪನ ಮತ್ತು ಪ್ರಕರಣದ ಚರ್ಚೆ ಮಾಡಿ ಶಸ್ತ್ರಚಿಕಿತ್ಸೆ ಮಾಡಿದೆ. ಸುಮಾರು 13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಸುಮಾರು ಎರಡೂವರೆ ಕೆಜಿಯಷ್ಟು ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆಯಲಾಗಿದೆ ಎಂದರು.

9 ಪಕ್ಕೆಲುಬುಗಳ ಜೊತೆಗೆ ಇದ್ದ ಗಡ್ಡೆ ಮತ್ತು ಶ್ವಾಸಕೋಶದ ಭಾಗದ ಒಂದು ಸಣ್ಣ ತುಣುಕನ್ನು ಶಸ್ತ್ರಚಿಕಿತ್ಸೆಯಲ್ಲಿ ತೆಗೆದು ಹಾಕಲಾಗಿದೆ. ಬಲ ಶ್ವಾಸಕೋಶ ಮತ್ತು ಎದೆಯ ಗೋಡೆಯ ಭಾಗವನ್ನು ಡುಯೆಲ್ ಮೆಸ್ ಮತ್ತು ಟೈಟಾನಿಯಂ ಪ್ಲೇಟ್​ಗಳಿಂದ ಪುನರ್ ನಿರ್ಮಿಸಲಾಗಿದೆ. ಶಸ್ತ್ರಚಿಕಿತ್ಸೆಯನ್ನು ಆಗಷ್ಟ್ 31ರಂದು ನಡೆಸಲಾಗಿದೆ. ಸಂಕೀರ್ಣ ಶಸ್ತ್ರಚಿಕಿತ್ಸೆ ಬಳಿಕ ರೋಗಿಯ ಆರೋಗ್ಯ ಸುಧಾರಿಸಿದೆ ಎಂದರು.

ಶಸ್ತ್ರಚಿಕಿತ್ಸೆಯಲ್ಲಿ ಡಾ.ಆರ್ ಎಂ ವಿಜಯಕುಮಾರ್, ವೈಸ್ ಚಾನ್ಸಲರ್, ಯೆನೆಪೋಯ ವಿವಿ, ಡಾ.ಜಲಾಲುದ್ದೀನ್ ಅಕ್ಬರ್, ಸರ್ಜಿಕಲ್ ಆಂಕೋಲಜಿ ವಿಭಾಗದ ಮುಖ್ಯಸ್ಥ ಡಾ.ರೋಹನ್ ಶೆಟ್ಟಿ, ಸರ್ಜಿಕಲ್ ಆಂಕೊಲಜಿಸ್ಟ್ ಡಾ.ಅಮರ್ ರಾವ್, ಸರ್ಜಿಕಲ್ ಆಂಕೊಲಜಿಸ್ಟ್ ಡಾ.ಪವಮನ್ ಎಸ್, ನರಶಸ್ತ್ರ ಚಿಕಿತ್ಸಕ ಡಾ,ಮೊಹಮ್ಮದ್, ಸರ್ಜಿಕಲ್ ಆಂಕೊಲಜಿಸ್ಟ್ ಡಾ.ಅಭಿಷೇಕ್ ಶೆಟ್ಟಿ, ಆರ್ಥೋಪೆಡಿಕ್ ಸರ್ಜನ್ ಡಾ.ತಿಪ್ಪೆಸ್ವಾಮಿ, ಅನೆಸ್ಥೆಶಿಯಾಲಜಿಸ್ಟ್ ಡಾ.ಏಜಾಜ್ ಅಹಮದ್, ಅನಸ್ಥೆಸಿಯಾಲಜಿಸ್ಟ್ ಡಾ.ಸಿದ್ದಾರ್ಥ್ ಬಿಶ್ವಾಸ್, ಅನ್ಕೋ ಪೆಥಾಲಜಿ ಭಾಗಿಯಾಗಿದ್ದರು.

Last Updated :Sep 25, 2021, 6:39 PM IST

ABOUT THE AUTHOR

...view details