ಮಂಗಳೂರು : ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಪತ್ತೆ ಹಚ್ಚಿರುವ ಕಸ್ಟಮ್ಸ್ ಅಧಿಕಾರಿಗಳು 42.90 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆಗಮಿಸಿದ ಕೇರಳ ರಾಜ್ಯದ ಕಾಸರಗೋಡು ಮೂಲದ ಪ್ರಯಾಣಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಟ್ರ್ಯಾಲಿ ಬ್ಯಾಗ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.
ಈತ ಪುಡಿಯ ರೂಪದ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ಹಳದಿ ಬಣ್ಣದ ಪುಡಿ ಮಿಶ್ರ ಮಾಡಿ ಪ್ಯಾಕೆಟ್ ನಲ್ಲಿರಿಸಿ 'ಟಿಫಾನಿ ಎಕ್ಲೇರ್ಸ್' ಎಂಬ ಚಾಕೊಲೆಟ್ ಕವರ್ ನೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ. ಈತನಿಂದ ಕಸ್ಟಮ್ಸ್ ಅಧಿಕಾರಿಗಳು 420 ಗ್ರಾಂ ತೂಕದ 25,49,400 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ :ಲಗೇಜ್ ಬ್ಯಾಗ್ಗೆ ಚಿನ್ನದ ನಟ್ ಬೋಲ್ಟ್.. ಚಿನ್ನಸಾಗಣೆಗೆ ಪ್ರಯಾಣಿಕನ ಖತರ್ನಾಕ್ ಪ್ಲಾನ್!
ಮತ್ತೊಂದು ಪ್ರಕರಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಲ್ಲಿ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಆದ್ದರಿಂದ ವಿಮಾನ ನಿಲ್ದಾಣದಲ್ಲಿ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಆಗ ಅವರಲ್ಲಿ ಅಕ್ರಮ ಸಾಗಣೆಯ ಚಿನ್ನ ಪತ್ತೆಯಾಗಿದೆ.
ಇವರು ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಡಬಲ್ ಲೇಯರ್ಡ್ ಒಳಉಡುಪು, ಸಾಕ್ಸ್ ಹಾಗೂ ಪ್ಯಾಂಟ್ನ ಲೂಪ್ ಒಳಗೆ ಅಡಗಿಸಿ ಸಾಗಿಸುತ್ತಿದ್ದರು. ಅಲ್ಲದೆ ಸಾಕ್ಸ್ ಒಳಗಡೆ ಬಚ್ಚಿಟ್ಟು ಒಂದು ಚಿನ್ನದ ಸರವನ್ನು ಸಾಗಣೆ ಮಾಡಿರುವುದು ಪತ್ತೆಯಾಗಿದೆ. ಇವರಿಂದ ಒಟ್ಟು 288 ಗ್ರಾಂ ತೂಕದ ಮೌಲ್ಯ ರೂ. 17,40,660 ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ :ಪ್ಯಾಂಟ್ ಜಿಪ್ಲೈನ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ, ಸಿಕ್ಕಿಬಿದ್ದ ಪ್ರಯಾಣಿಕ- ವಿಡಿಯೋ