ಕರ್ನಾಟಕ

karnataka

ದ.ಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು ಸಿಡಿ ರಿಲೀಸ್​ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದೇಕೆ?: ಡಿಕೆಶಿ

By

Published : Apr 23, 2023, 7:47 AM IST

ತಮ್ಮ ವಿರುದ್ಧ ಯಾವುದೇ ಸಿಡಿ ಬಿಡುಗಡೆ ಮಾಡಬಾರದು ಎಂದು ದಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಬಿಜೆಪಿಯಲ್ಲಿ ಎಂತಹ ಹುಳುಕಿದೆ ಎಂದು ನೀವೆಲ್ಲರೂ ಆಲೋಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

dk shivakumar
ಡಿಕೆ ಶಿವಕುಮಾರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಬಿಜೆಪಿ ನಾಯಕರು ತಮ್ಮ ವಿರುದ್ಧ ಯಾವುದೇ ಸಿಡಿಯನ್ನು ರಿಲೀಸ್​ ಮಾಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಇವರ ಹುಳುಕನ್ನು ತೋರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದರು.

ಬೆಳ್ತಂಗಡಿಯ ಉಜಿರೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಡೆಯಾಜ್ಞೆ ತರುವಂತಹ ಪರಿಸ್ಥಿತಿ ಬಂದಿರುವುದೇಕೆ?. ಬಿಜೆಪಿ ಇತಿಹಾಸದ ಚರಿತ್ರೆ ದೊಡ್ಡದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೂವರು ತಡೆಯಾಜ್ಞೆ ತಂದಿದ್ದಾರೆ. ಹಿಂದೆ ಬಾಂಬೆ ಬಾಯ್ಸ್ 6-7 ಮಂದಿ ತಡೆಯಾಜ್ಞೆ ತಂದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ನಾಯಕರು ಇಂದು ಕೋರ್ಟ್ ಮೊರೆ ಹೋಗಿದ್ದರೆ, ಬಿಜೆಪಿಯಲ್ಲಿ ಎಂತಹ ಹುಳುಕಿದೆ ಎಂದು ಎಲ್ಲರೂ ಆಲೋಚಿಸಬೇಕಾಗಿದೆ ಎಂದರು.

ಈಗಾಗಲೇ ಹಲವು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ಮಂಜುನಾಥನ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿ ಜನಾರ್ದನ ದೇವಾಲಯದಲ್ಲಿ ದರ್ಶನ ಪಡೆದು ಪವಿತ್ರ ರಂಜಾನ್ ಹಬ್ಬದಂದು ಇಲ್ಲಿಗೆ ಬಂದಿದ್ದೇನೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಇದರಲ್ಲಿ ನಂಬಿಕೆ ಇಟ್ಟುಕೊಂಡು ನಾವು ಬದುಕುತ್ತಿದ್ದೇವೆ. ನಾವು ಹುಟ್ಟುವಾಗ ಇಂತಹದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ನಮ್ಮ ತಂದೆ ತಾಯಂದಿರ ಕೃಪೆ, ಆಶೀರ್ವಾದದಿಂದ ನಾವು ಬೆಳೆದಿದ್ದೇವೆ. ಆ ಮೂಲಕ ಜಾತಿ ಹಾಗೂ ಧರ್ಮದ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಏನೇ ಆದರೂ ನಾವು ಮನುಷ್ಯರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ಎಲ್ಲರಿಗೂ ತಮ್ಮ ಧರ್ಮ ಆಚರಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಧರ್ಮಪೀಠಗಳು ಮಾನವೀಯತೆ ಮೆರೆದಿವೆ. ನನಗೆ ಮಂಜುನಾಥ ಸ್ವಾಮಿ ಬಗ್ಗೆ ವಿಶೇಷ ಆಸಕ್ತಿ ಹಾಗೂ ಭಕ್ತಿಯಿದೆ ಎಂದು ಹೇಳಿದರು.

ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆ

ನನ್ನ ಯುವ ಮಿತ್ರ ರಕ್ಷಿತ್​ಗೆ ಯಶಸ್ಸು ಸಿಗಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಈ ಕ್ಷೇತ್ರದಲ್ಲಿ ಮಾಜಿ ಶಾಸಕ ವಸಂತ ಬಂಗೇರಾ ಅವರು ಹಲವು ಬಾರಿ ಸ್ಪರ್ಧಿಸಿ ಸೋತು, ಗೆದ್ದು, ನನ್ನೊಂದಿಗೆ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇಂದು ಪಕ್ಷ ಇಷ್ಟು ಗಟ್ಟಿಯಾಗಿ ನಿಲ್ಲಲು ಅವರು ಹೊಸಬರಿಗೆ ಅವಕಾಶ ನೀಡಲು ದಾರಿ ಮಾಡಿಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ :ಭಿನ್ನಮತರನ್ನು ವಾಪಸ್ ಕಾಂಗ್ರೆಸ್​ ಪಕ್ಷಕ್ಕೆ ಕರೆಸುತ್ತೇವೆ: ಡಿಕೆಶಿ

ಈ ಜಿಲ್ಲೆಯಲ್ಲಿ ಮೂರೂವರೆ ಲಕ್ಷ ಒಕ್ಕಲಿಗ ಸಮುದಾಯದವರಿದ್ದಾರೆ. ಅವರಿಗೂ ನ್ಯಾಯ ನೀಡಬೇಕು ಎಂದು ಭಾವಿಸಿದ್ದೆವು. ಆದರೆ, ಯುವಕರಿಗೆ ಅವಕಾಶ ನೀಡಲು ಜಿಲ್ಲೆಯಲ್ಲಿ ನಾಲ್ಕು ಜನ ಹೊಸಬರಿಗೆ ಅವಕಾಶ ನೀಡಲಾಗಿದೆ. ಈ ಜಿಲ್ಲೆಯ ಎಲ್ಲಾ ಕಡೆ ಯುವಕರು ಸ್ಪರ್ಧಿಸುತ್ತಿದ್ದಾರೆ. ಪಕ್ಷ ತನ್ನದೇ ಆದ ಲೆಕ್ಕಾಚಾರ ಮಾಡಿ ಈ ತೀರ್ಮಾನ ಮಾಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೇ 10 ರಂದು ಕೇವಲ ಮತದಾನ ದಿನ ಮಾತ್ರವಲ್ಲ, ನಿಮ್ಮ ಭವಿಷ್ಯ ನೀವೇ ಬರೆದುಕೊಳ್ಳುವ ದಿನ. ಭ್ರಷ್ಟಾಚಾರ ಬಡಿದೋಡಿಸುವ ದಿನ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ನಾವು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಜೆಡಿಎಸ್ ಜೊತೆ ಸರ್ಕಾರ ಮಾಡಿದೆವು. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ನಂತರ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಬಂದಿತು. ಈ ಸರ್ಕಾರ ಯುವಕರು, ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಯಾವುದಾದರೂ ಒಂದು ವರ್ಗದ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದಾರಾ? ಇವರಿಂದ ಸಮಾಧಾನಕರ ಆಡಳಿತ ಬಂದಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆ

ಬಿಜೆಪಿ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬಂದಿದೆ ಎಂದು ಹೇಳಿದ್ದಾರೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ?, ಕೇವಲ 5 ಸಾವಿರ ಕೋಟಿ ಬಂಡವಾಳವನ್ನು ಈ ಭಾಗದಲ್ಲಿ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬಂದಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದೇನೆ. ಮೋದಿ ಅವರು ಕಳೆದ ಚುನಾವಣೆಯಲ್ಲಿ ನೀವು ಮತಹಾಕುವಾಗ ನಿಮ್ಮ ಮನೆ ಅಡುಗೆ ಅನಿಲ ಸಿಲಿಂಡರ್​ಗೆ ನಮಿಸಿ ಮತ ಹಾಕಿ ಎಂದು ಹೇಳಿದ್ದರು. ಈಗ ನಾವು ಏನು ಹೇಳಬೇಕು?, ನಾನು ನಮ್ಮ ನಾಯಕರಿಗೆ ಒಂದು ಸಲಹೆ ನೀಡುತ್ತೇನೆ. ನೀವು ಪ್ರತಿ ಬೂತ್ ಮುಂದೆ ಸಿಲಿಂಡರ್ ಇಟ್ಟು ಅದಕ್ಕೆ ಒಂದು ಹೂವಿನ ಹಾರ ಹಾಕಬೇಕು. ಜನರ ಆದಾಯ ಪಾತಾಳಕ್ಕೆ ಕುಸಿದಿದ್ದು, ಬೆಲೆಗಳು ಗಗನಕ್ಕೇರಿವೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ಸಹಾಯ ಮಾಡಲು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆ ಮೂಲಕ ಪ್ರತಿ ಮನೆಗೆ ಸುಮಾರು 1,500 ರೂ. ಉಳಿತಾಯವಾಗಲಿದೆ. ನಾನು ಇಂಧನ ಸಚಿವನಾಗಿದ್ದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಎಲ್ಲಾ ಘೋಷಣೆಗಳ ಗ್ಯಾರಂಟಿ ಕಾರ್ಡ್​​ಗಳನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಿ. ಮೇ 13ರಂದು ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆ

ಇದನ್ನೂ ಓದಿ :ಡಿಕೆಶಿ ಪತ್ನಿ, ಮಕ್ಕಳು ಬಂದಿಳಿದ ಹೆಲಿಕಾಪ್ಟರ್​ ತಪಾಸಣೆ: ಪರಿಶೀಲನೆ ತಪ್ಪಲ್ಲ ಎಂದ ಕೆಪಿಸಿಸಿ ಅಧ್ಯಕ್ಷ

ಖಾಸಗಿಯವರು ಉದ್ಯೋಗಸ್ಥರನ್ನು ತೆಗೆದುಕೊಳ್ಳುವಾಗ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಖಾಸಗಿಯಲ್ಲಿ ಉದ್ಯೋಗ ವಿನಿಮಯ ವ್ಯವಸ್ಥೆ ಬರಬೇಕು ಎಂಬ ಸಲಹೆಯನ್ನು ಯುವಕನೊಬ್ಬ ನೀಡಿದ್ದು, ಈ ಕುರಿತ ಭರವಸೆಯನ್ನು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ತಿಳಿಸಲಿದೆ. ಯುವಕರ ಬಗ್ಗೆ ಚಿಂತನೆ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ, ರೈತರ ವಿಚಾರವಾಗಿ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಈ ಭಾಗದಲ್ಲಿ ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್ ಸರ್ಕಾರ ಈ ಹಿಂದೆ ಅರಣ್ಯ ಭೂಮಿ ಹಾಗೂ ವಾಣಿಜ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅವರಿಗೆ ತೊಂದರೆ ಆಗಬಾರದು ಎಂದು ಸಕ್ರಮ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಬಗ್ಗೆ ಕಾನೂನು ಮಾಡಿ ಈ ಭಾಗದ ಜನರ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಈ ದೇಶದಲ್ಲಿ ಉಳುವವನಿಗೆ ಭೂಮಿ, ಬಡವರಿಗೆ ನಿವೇಶನ ನೀಡಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಭಾಗದ ನಿಮ್ಮ ಜಮೀನನ್ನು ಸಕ್ರಮ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿವೆ. ಈ ಸರ್ಕಾರದ ಭ್ರಷ್ಟಾಚಾರಕ್ಕೆ ಅನೇಕರು ಆತ್ಮಹತ್ಯೆ ಮಾಡಿಕೊಂಡರು. ಬಿಜೆಪಿ ನಾಯಕರೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಕೆಲವರು ಲಂಚಕ್ಕೆ ಅಧಿಕಾರ ಕಳೆದುಕೊಂಡರೆ ಮತ್ತೆ ಕೆಲವರು ಮಂಚಕ್ಕೆ ರಾಜೀನಾಮೆ ಕೊಟ್ಟರು. ಶಿವಮೊಗ್ಗದಲ್ಲಿ ದ್ವೇಷ ರಾಜಕೀಯವನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಅವರೇ ಟೀಕಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

ಇನ್ನು ಬಿಜೆಪಿಯವರು ರಾಜ್ಯದ ನಂದಿನಿ ಹಾಲನ್ನು ಬಿಟ್ಟು ಗುಜರಾತಿನ ಹಾಲು ಖರೀದಿ ಮಾಡಿ ಎಂದು ಹೇಳುತ್ತಿದ್ದಾರೆ. ನಮ್ಮ ರೈತರು ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಂದಿನಿ ಮೇಲೆ ಅಮೂಲ್ ಹೇರಿಕೆ ಮಾಡಲಾಗುತ್ತಿದೆ. ನಮ್ಮ ಹಾಲು ಉತ್ಪಾದಕರನ್ನು ಬೊಮ್ಮಾಯಿ ಅವರಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಕೊರೊನಾ ಸಮಯದಲ್ಲಿ ಭ್ರಷ್ಟಾಚಾರ ತಾಂಡವವಾಡಿತ್ತು. ಆಕ್ಸಿಜನ್ ಇಲ್ಲದೆ ಅನೇಕರು ಸತ್ತರು. ಸತ್ತವರಿಗೆ ಸರ್ಕಾರ ಪರಿಹಾರ ನೀಡಲಿಲ್ಲ. ನಷ್ಟ ಅನುಭವಿಸಿದ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ ನೀಡಲಿಲ್ಲ. ಜನರಿಗೆ ಸಹಾಯ ಮಾಡದ ಸರ್ಕಾರ ಯಾಕೆ ಬೇಕು ಎಂದು ಕಿಡಿಕಾರಿದರು.

ಎಲ್ಲಾ ಅನಾಚಾರಗಳಿಂದ ಬಿಜೆಪಿಯ ಆಣೆಕಟ್ಟು ಒಡೆದುಹೋಗಿವೆ. 30 ವರ್ಷಗಳ ಕಾಲ ಬಿಜೆಪಿಯಲ್ಲಿ ಶಾಸಕರಾಗಿ, ಮುಖ್ಯಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಗಳಾಗಿದ್ದರು. ಪರಿಷತ್ ಸದಸ್ಯರಾದ ಪುಟ್ಟಣ್ಣ 4 ವರ್ಷ ಅಧಿಕಾರ ಇದ್ದರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಹಾಲಿ ಬಿಜೆಪಿಯ ಒಂದು ಡಜನ್ ಶಾಸಕರು ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಆದರೆ, ನಮ್ಮ ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವ ಅವಕಾಶವಿಲ್ಲ ಎಂಬ ಕಾರಣಕ್ಕೆ ಕೆಲವರನ್ನು ಮಾತ್ರ ಕರೆದುಕೊಳ್ಳಲಾಗಿದೆ. ಅಂತಹ ನಾಯಕರಿಗೆ ಬಿಜೆಪಿ ಬೇಡವಾಗಿದೆ ಎಂದರು. ಸಭೆಯಲ್ಲಿ ಮೇಲ್ಮನೆ ಸದಸ್ಯ ಮಂಜುನಾಥ ಭಂಡಾರಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.

ABOUT THE AUTHOR

...view details