ಕರ್ನಾಟಕ

karnataka

ಮಂಗಳೂರು ದಸರಾ ಸಂಪನ್ನ: ಶ್ರೀ ಶಾರದೆ, ನವದುರ್ಗೆಯರ ವೈಭವದ ಮೆರವಣಿಗೆ

By ETV Bharat Karnataka Team

Published : Oct 24, 2023, 10:42 PM IST

Updated : Oct 24, 2023, 11:01 PM IST

ಮಂಗಳೂರಿನಲ್ಲಿ ಶ್ರೀ ಶಾರದಾಮಾತೆ ಸೇರಿದಂತೆ ನವದುರ್ಗೆಯರ ದಸರಾ ಶೋಭಾಯಾತ್ರೆ ನಡೆಯುತ್ತಿದೆ.

Etv Bharat
ಶ್ರೀ ಶಾರದೆ, ನವದುರ್ಗೆಯರ ವೈಭವದ ಮೆರವಣಿಗೆ ಆರಂಭ

ಮಂಗಳೂರಿನಲ್ಲಿ ದಸರಾ ಶೋಭಾಯಾತ್ರೆ

ಮಂಗಳೂರು: ಪ್ರಸಿದ್ಧ ಮಂಗಳೂರು ದಸರಾ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಶಾರದಾಮಾತೆ, ನವದುರ್ಗೆಯರು ಹಾಗೂ ಶ್ರೀ ಮಹಾಗಣಪತಿ ದೇವರ ಆರಾಧನೆ ಸಂಪನ್ನಗೊಂಡು ಇದೀಗ ವೈಭವದ ಮೆರವಣಿಗೆ ಆರಂಭಗೊಂಡಿದೆ‌. ಕಳೆದ 9 ದಿನಗಳಿಂದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಶ್ರೀ ದೇವರ ಆರಾಧನೆ ಅದ್ಧೂರಿಯಾಗಿ ನಡೆದುಕೊಂಡು ಬಂದಿತ್ತು. ಮೊಗ್ಗು ಮಲ್ಲಿಗೆಯ ಶಾರದಾ ಜಲ್ಲಿ, ವಿಶೇಷ ಪಟ್ಟೆ ಸೀರೆ, ವಿವಿಧ ಆಭರಣಗಳೊಂದಿಗೆ ಅಲಂಕೃತಳಾದ ಶಾರದಾ ಮಾತೆಗೆ ಮಧ್ಯಾಹ್ನದ ಬಳಿಕ ನಿಮಜ್ಜನಾ ಪೂಜೆ ನೆರವೇರಿತು.

ಸಂಜೆಯಾಗುತ್ತಿದ್ದಂತೆ ಶೋಭಾಯಾತ್ರೆಗೆ ಸಿದ್ಧತೆ ಮಾಡಿ ಮೊದಲಿಗೆ ಶ್ರೀ ಮಹಾಗಣಪತಿ ದೇವರನ್ನು, ನವದುರ್ಗೆಯರನ್ನು ಅಲಂಕೃತ ತೆರೆದ ವಾಹನದಲ್ಲಿ ಇಡಲಾಯಿತು. ಬಳಿಕ ತಾಯಿ ಶಾರದೆಯನ್ನು ವಿಶೇಷ ವಾಹನದಲ್ಲಿ ಇರಿಸಿ ಆಕರ್ಷಕ ಶೋಭಾಯಾತ್ರೆಗೆ ನಾಂದಿ ಹಾಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊ ಮುಂದೆ ಇದ್ದು, ಬಳಿಕ ಶ್ರೀ ಮಹಾಗಣಪತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವಾಹನ ಅನುಸರಿಸಿತು. ಆಕರ್ಷಕ ಟ್ಯಾಬ್ಲೋಗಳು, ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿತು. ಈ ಶೋಭಾಯಾತ್ರೆಯು ಸಂಜೆ ವೇಳೆಗೆ ಮಂಗಳೂರಿನಿಂದ ಹೊರಟು ರಾತ್ರಿಯಿಡೀ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9 ಕಿ.ಮೀ. ದೂರ ಸಂಚರಿಸಿ ಬುಧವಾರ ಮುಂಜಾನೆ ವೇಳೆಗೆ ಮರಳಿ ಶ್ರೀಕ್ಷೇತ್ರಕ್ಕೆ ಮರಳಲಿದೆ. ಬಳಿಕ ಮೃಣ್ಮಯ ಮೂರ್ತಿಗಳು ದೇವಾಲಯದ ಕಲ್ಯಾಣಿಯಲ್ಲಿ ಜಲಸ್ತಂಭನಗೊಂಡು ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.

ಕ್ರೈಸ್ತರ ಟ್ಯಾಬ್ಲೊ:ಈ ಬಾರಿಯ ದಸರಾ ಶೋಭಾಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಕ್ರೈಸ್ತ ಬಾಂಧವರ ಟ್ಯಾಬ್ಲೊ ಮಂಗಳೂರು ದಸರಾದಲ್ಲಿ ಗಮನ ಸೆಳೆಯಿತು. ಈ ಸ್ತಬ್ಧಚಿತ್ರದ ಮುಂಭಾಗದಲ್ಲಿಯೇ ದೇವಸ್ಥಾನ, ಮಸೀದಿ ಹಾಗೂ ಚರ್ಚ್​ಗಳ ಚಿತ್ರವಿದೆ. ಟ್ಯಾಬ್ಲೊದಲ್ಲಿ ಮೂರು ಹಸ್ತಗಳು ಗ್ಲೋಬ್ ಎತ್ತಿ ಹಿಡಿದಿದೆ. ಹಸ್ತ ಸಹಿತವಾಗಿ ಗ್ಲೋಬ್ ಸುತ್ತಲೂ ಸುತ್ತುತ್ತಿದ್ದು, ಈ ಗ್ಲೋಬ್ ಆಕರ್ಷಕ ನೀಲಿ ರಂಗಿನಿಂದ ಮಿನುಗುತ್ತಿತ್ತು. ಈ ಮೂರು ಹಸ್ತಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳನ್ನು ಪ್ರತಿನಿಧಿಸುತ್ತದೆ. ಎಲ್ಲಾ ಧರ್ಮದವರು ಸೇರಿ ಈ ಸಮಾಜವನ್ನು ಎತ್ತಿಹಿಡಿಯುವ ಚಿತ್ರಣವನ್ನು ಈ ಮೂಲಕ ಬಿಂಬಿಸಲಾಗಿದೆ. ಹಾಗೇ ಈ ಸಂದೇಶವು ಎಲ್ಲರನ್ನೂ ತಲುಪಿ ಬಂಧುತ್ವ ಬೆಳೆಯಲಿ ಎಂಬ ಸದಾಶಯ ಇದರಲ್ಲಿದೆ.

ದಸರಾ ಆರಂಭವಾಗುತ್ತಿದ್ದಂತೆ ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ‌ಲಾರೆನ್ಸ್ ಮುಕುಝಿಯವರು ಶ್ರೀಕ್ಷೇತ್ರ ಕುದ್ರೋಳಿಗೆ ಆಗಮಿಸಿದ್ದರು. ಈ ವೇಳೆ ಅವರು ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ಉತ್ಸವ ಮಾದರಿ ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಂಗಳೂರು: ಹುಲಿವೇಷಧಾರಿಗೆ ದೈವ ಆವಾಹನೆಯಾಗಿರುವ ವಿಡಿಯೋ ವೈರಲ್​

Last Updated : Oct 24, 2023, 11:01 PM IST

ABOUT THE AUTHOR

...view details