ಕರ್ನಾಟಕ

karnataka

ಸುಳ್ಯ: ಕಾಡು ಹಣ್ಣನ್ನು ಜ್ಯೂಸ್ ಮಾಡಿ ಕುಡಿದ ಮಹಿಳೆ ಸಾವು.. ವೈದ್ಯರು ಹೇಳಿದ್ದೇನು?

By ETV Bharat Karnataka Team

Published : Oct 3, 2023, 7:50 PM IST

Updated : Oct 3, 2023, 11:04 PM IST

ಕುಳ್ಳಾಜಿ ನಿವಾಸಿ ಮಹಿಳೆಯೊಬ್ಬರು ಕಾಡಿನಲ್ಲಿ ಸಿಗುವ ಹಣ್ಣೊಂದನ್ನು ಮನೆಗೆ ತಂದು ಜ್ಯೂಸ್ ಮಾಡಿ ಸೇವಿಸಿದ್ದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

Lilavati
ಮಹಿಳೆ ಲೀಲಾವತಿ

ಸುಳ್ಯ (ದಕ್ಷಿಣ ಕನ್ನಡ): ಸಮರ್ಪಕ ಮಾಹಿತಿ ಇಲ್ಲದ ಕಾರಣ ಯಾವುದೋ ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಸುಳ್ಯ ತಾಲೂಕಿನ ಅಮರಪಡ್ಡೂರು ಗ್ರಾಮದ ಕುಳ್ಳಾಜಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜಗನ್ನಾಥ ನಾಯ್ಕ ದೊಡ್ಡೇರಿ ಅವರ ಪತ್ನಿ ಲೀಲಾವತಿ (35) ಎಂದು ಗುರುತಿಸಲಾಗಿದೆ.

ಒಂದು ವಾರದ ಹಿಂದೆ ಕಾಡಿನಲ್ಲಿ ಐರೋಳ್​ ಹಣ್ಣಿನಂತೆ ಕಂಡ ಇನ್ಯಾವುದೋ ಹಣ್ಣನ್ನು ತಿನ್ನಬಹುದು ಎಂದು ಭಾವಿಸಿ ಮನೆಗೆ ತಂದು ಜ್ಯೂಸ್ ಮಾಡಿ ಸೇವಿಸಿದ್ದರು. ಹಣ್ಣಿನ ಜ್ಯೂಸ್ ಸೇವಿಸಿದ ಪರಿಣಾಮ ಅವರು ಅಸ್ವಸ್ಥರಾಗಿದ್ದರು. ಮೂರು ಮಕ್ಕಳ ತಾಯಿ ಆಗಿರುವ ಲೀಲಾವತಿಯವರಿಗೆ ವಾಂತಿಬೇದಿ ಆರಂಭವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಲೀಲಾವತಿಯವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುವಾಗ ಮಾರ್ಗದ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದು ಹೀಗೆ.. ಮೃತ ಲೀಲಾವತಿ ಅವರಿಗೆ ಚಿಕಿತ್ಸೆ ನೀಡಿದ ಸುಳ್ಯ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶಿವಕುಮಾರ್ ಅವರು ಈಟಿವಿ ಭಾರತ್​ ಜೊತೆಗೆ ಮಾತನಾಡಿ, ಮಹಿಳೆಯು ಸೆಪ್ಟೆಂಬರ್‌ 26ರಂದು ವಾಂತಿಬೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಹಿಳೆ ಯಾಗಲಿ ಅಥವಾ ಪತಿ ಸೇರಿದಂತೆ ಕುಟುಂಬಸ್ಥರು ಯಾರೂ ವಿಷಕಾರಿ ಅಥವಾ ಕಾಡು ಹಣ್ಣಿನ ರಸ ಸೇವಿಸಿದ ಬಗ್ಗೆ ನಮಗೆ ಮಾಹಿತಿ ತಿಳಿಸಿಲ್ಲ. ಆದರೂ ನಾವು ಪ್ರಾಮಾಣಿಕವಾಗಿ ಚಿಕಿತ್ಸೆ ನೀಡಿದ್ದೇವೆ. ದಿನದಿಂದ ದಿನಕ್ಕೆ ಲೀಲಾವತಿಯವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ರಕ್ತದೊತ್ತಡ ಸೇರಿ ವಾಂತಿಬೇದಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಈ ಕಾರಣದಿಂದ ಮತ್ತೆ ಮನೆಯವರನ್ನು ಪ್ರಶ್ನೆ ಮಾಡಿದಾಗ ಕಾಡು ಕಾಯಿ ಜ್ಯೂಸ್ ಸೇವಿಸಿದ ಬಗ್ಗೆ ಮೂರು ದಿನ ನಂತರ ತಿಳಿಸಿದ್ದಾರೆ ಎಂದರು.

ಈ ವಿಷಯ ಮೊದಲೇ ಹೇಳಿದ್ದರೆ ನಾವು ಮಹಿಳೆಗೆ ಸ್ಟಮಕ್‌ವಾಷ್ ಮಾಡಿಸಬಹುದಿತ್ತು. ಕುಡಿತದ ಚಟ ಇರುವ ಮಹಿಳೆಯ ಪತಿ ನಮ್ಮೊಂದಿಗೆ ಯಾವುದೇ ರೀತಿ ಸಹಕಾರ ನೀಡಲಿಲ್ಲ. ಕೊನೆಗೆ ಆ್ಯಂಟಿಡಾಟ್ ನೀಡುವ ಸಲುವಾಗಿ ಅವರು ತಿಂದ ವಿಷದ ಕಾಯಿಯನ್ನು ಪರೀಕ್ಷೆಗಾಗಿ ತಂದು ಕೊಡಿ ಎಂದು ಸೂಚಿಸಿದರೂ ಸಹ ಅವರು ತಂದು ಕೊಡಲಿಲ್ಲ. ಆಸ್ಪತ್ರೆಯಲ್ಲಿ ಸಿಗದ ಔಷಧಿಗಳನ್ನು ಹೊರಗಡೆಯಿಂದ ತನ್ನಿ ಎಂದರೂ ಮನೆಯವರು ಸಹಕರಿಸಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ಹುಣಸೂರಲ್ಲಿ ಹುಲಿ ದಾಳಿಗೆ ದನಗಾಹಿ ಬಲಿ

Last Updated :Oct 3, 2023, 11:04 PM IST

ABOUT THE AUTHOR

...view details