ಕರ್ನಾಟಕ

karnataka

ವಿಶೇಷಚೇತನ ಮಹಿಳೆ ಮೇಲೆ ವೃದ್ಧನಿಂದ ಅತ್ಯಾಚಾರ.. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ

By

Published : Apr 4, 2023, 12:58 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

dk
ದಕ್ಷಿಣ ಕನ್ನಡ

ಮಂಗಳೂರು(ದಕ್ಷಿಣ ಕನ್ನಡ): ಮನೆಯಲ್ಲಿ ಒಂಟಿಯಾಗಿದ್ದ ವಿಶೇಷ ಚೇತನ ಮಹಿಳೆ ಮೇಲೆ ವೃದ್ಧನೋರ್ವ ಅತ್ಯಾಚಾರವೆಸಗಿರುವ ಆತಂಕಕಾರಿ ಘಟನೆಯೊಂದು ನಗರದಲ್ಲಿ ನಡೆದಿದೆ. ಈ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂರಿಂಜೆ ನಿವಾಸಿ ರಾಜಾ ಭಟ್(65) ಅತ್ಯಾಚಾರ ಎಸಗಿರುವ ಆರೋಪಿ.

ವಿಶೇಷ ಚೇತನ ಮಹಿಳೆಯು ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರು. ಇತ್ತೀಚೆಗೆ ಮಹಿಳೆಯ ಸಹೋದರ ಹಾಗೂ ಅವರ ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಮಹಿಳೆ ಮನೆಯಲ್ಲಿ ಒಂಟಿಯಾಗಿ ಇದ್ದರು. ಈ ಸಂದರ್ಭ ರಾಜಾ ಭಟ್ ಮನೆಗೆ ಬಂದಿದ್ದು, ಪುಸಲಾಯಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ನೆರೆಮನೆಯವರಿಂದ ವಿಚಾರ ತಿಳಿದು ಮಹಿಳೆಯ ಸಹೋದರ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಮಹಿಳಾ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಆರೋಪಿ ರಾಜಾ ಭಟ್ ಮನೆಮಂದಿಯನ್ನು ತೊರೆದು ಬಾಡಿಗೆ ಮನೆಯಲ್ಲಿ ಒಬ್ಬರೇ ನೆಲೆಸಿದ್ದಾರೆ. ಹಗಲಿನ ಹೊತ್ತು ವಿಶೇಷ ಚೇತನ ಮಹಿಳೆ ಮಾತ್ರ ಮನೆಯಲ್ಲಿ ಇರುತ್ತಿದ್ದರು. ಈ ವಿಚಾರದ ಬಗ್ಗೆ ಮಾಹಿತಿಯಿದ್ದ ರಾಜಾ ಭಟ್ ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಬಂದು ಅತ್ಯಾಚಾರ ನಡೆಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಾಜಾ ಭಟ್ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಂಟ್ವಾಳ ನಗರ ಪೊಲೀಸ್​ ಠಾಣೆ

ಬಂಟ್ವಾಳದಲ್ಲಿ ಕೆಲಸ ನೀಡುವುದಾಗಿ ಹೇಳಿ 6 ಲಕ್ಷ ರೂ. ವಂಚನೆ: ದಿನನಿತ್ಯ ಸುಳ್ಳು ವಂಚನೆ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಈ ಕುರಿತು ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದರೂ ಸಹ ಈ ವಂಚಕರು ಬೀಸುವ ಬಲೆಗೆ ಬೀಳುವುದು ಕಡಿಮೆಯಂತು ಆಗುತ್ತಿಲ್ಲ. ಇದೀಗ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಇಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಂಗಳೂರಿನ ಸುಧೀರ್ ರಾವ್ ಎಂಬ ವ್ಯಕ್ತಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 6 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಕಳ್ಳಿಗೆ ಗ್ರಾಮದ ಮಹಿಳೆಯೊಬ್ಬರು ಈ ಕುರಿತು ದೂರು ನೀಡಿದ್ದಾರೆ. ಈ ಪ್ರಕರಣ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಂಚಕರು, ದೂರು ನೀಡಿದ ಮಹಿಳೆಯ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ಫೆಬ್ರವರಿ 22 ರಂದು ಬಿ.ಸಿ. ರೋಡ್ ನಲ್ಲಿ 2,83,800 ರೂ. ನಗದು ಮತ್ತು ಗೂಗಲ್ ಪೇ ಮೂಲಕ ವಿವಿಧ ದಿನಗಳಲ್ಲಿ ಹಣವನ್ನು ತಮ್ಮ ಅಕೌಂಟಿಗೆ ಹಾಕಿಸಿಕೊಂಡಿದ್ದಾರೆ. ಬಳಿಕ ದೂರು ನೀಡಿದ ಮಹಿಳೆಯ ಮಕ್ಕಳನ್ನು ಮುಂಬೈಗೆ ಬರಲು ಹೇಳಿ ಅಲ್ಲಿ ಮಕ್ಕಳಿಂದ ರೂ.15,600 ಹಣವನ್ನು ಪಡೆದಿದ್ದಾರೆ. ನಂತರ ಬಲ್ಗೆರಿಯಾದಲ್ಲಿ ಚಳಿಯಿರುವುದರಿಂದ ಜಾಕೆಟ್ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಸ್​ ಬರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾನೆ. ಸುಧೀರ್ ರಾವ್ ಒಟ್ಟು ರೂ.6,30,000 ಹಣವನ್ನು ಕೆಲಸ ಕೊಡಿಸುವುದಾಗಿ ಪಡೆದುಕೊಂಡು ಮೋಸ ಮಾಡಿರುವುದಾಗಿದೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಾಕ್ಷ್ಯಾಧಾರಗಳ ಕೊರತೆ, ಅತ್ಯಾಚಾರ ಆರೋಪಿಗಳನ್ನು ಖುಲಾಸೆಗೊಳಿಸಿದ ಕೋರ್ಟ್​

ABOUT THE AUTHOR

...view details