ಕರ್ನಾಟಕ

karnataka

ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೊಳಿಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ: ಕಟೀಲ್ ಎಚ್ಚರಿಕೆ

By

Published : Jun 1, 2023, 6:35 PM IST

ಕಾಂಗ್ರೆಸ್​ ನೀಡಿರುವ ಐದು ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೊಳಿಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.

nalin kumar kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಿರುವುದು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಿರುವುದು

ಮಂಗಳೂರು (ದಕ್ಷಿಣ ಕನ್ನಡ): "ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿತ್ತು. ಖರ್ಗೆ, ರಾಹುಲ್ ಗಾಂಧಿ ಸೇರಿ ಪ್ರಮುಖರು ಗ್ಯಾರಂಟಿ ಘೋಷಣೆ ಮಾಡಿದ್ದರು. ಗ್ಯಾರಂಟಿ ಕಾರ್ಡ್ ಹಿಡಿದು ಎಲ್ಲಾ ಜನರಿಗೆ ಉಪಯೋಗ ಕೊಡ್ತೀವಿ ಅಂತ ಹೇಳಿದ್ರು. 24 ಗಂಟೆಯಲ್ಲಿ ಜಾರಿಗೆ ತರುತ್ತೇವೆ ಅಂತಲೂ ನುಡಿದಿದ್ದರು. ಆದರೆ,ಅಧಿಕಾರ ಹಿಡಿದು 20 ದಿನವಾದರೂ ಕೂಡ ಗ್ಯಾರಂಟಿ ಇನ್ನೂ ಅನುಷ್ಠಾನ ಆಗಿಲ್ಲ.

ಕಾಂಗ್ರೆಸ್​ನ ಸುಳ್ಳು ಜನರಿಗೆ ಈಗ ಅರ್ಥವಾಗಿದೆ. ಕಾಂಗ್ರೆಸ್ ಸುಳ್ಳುಗಾರರ ಪಾರ್ಟಿ, ಮೋಸಗಾರರ ಪಾರ್ಟಿ ಎಂಬುದು ಜನರಿಗೆ ಸ್ಪಷ್ಟವಾಗಿದೆ. ಕಾಂಗ್ರೆಸ್ ಜನರ ಬಳಿ ಕ್ಷಮೆಯಾಚಿಸಿ ತಕ್ಷಣ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಜನ ಕಾಂಗ್ರೆಸ್ ಮೇಲೆ ಆಕ್ರೋಶಿತಗೊಂಡಿದ್ದಾರೆ. ಕಾಂಗ್ರೆಸ್ ಅಡ್ಡದಾರಿ ಹಿಡಿದು ಅಧಿಕಾರ ಪಡೆದಿದೆ. ಸಿದ್ಧರಾಮಯ್ಯಗೆ ಇದು ಆರ್ಥಿಕವಾಗಿ ಕಷ್ಟ ಎಂದು ಗೊತ್ತಿದೆ. ಆರ್ಥಿಕ ಸಚಿವರಾಗಿ ಅನುಭವ ಹೊಂದಿದ ಸಿದ್ಧರಾಮಯ್ಯ ಸುಳ್ಳು ಹೇಳಿದ್ದಾರೆ. ಜನ ಆಕ್ರೋಶಗೊಂಡು ನಂತರ ಆಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಈಗ ಕಾಂಗ್ರೆಸ್ ಜನರ ಹಾದಿ ತಪ್ಪಿಸುತ್ತಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ" ಎಂದರು.

ರಾಜ್ಯ ವಿಧಾನಸಭೆಗೆ ವಿಪಕ್ಷ ನಾಯಕನ ಆಯ್ಕೆಯನ್ನು ಮುಂದಿನ ಅಧಿವೇಶನದ ಆರಂಭಕ್ಕೂ ಮುನ್ನ ಮಾಡಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು. ಮುಂದುವರೆದು ಮಾತನಾಡಿ, "ದೇಶದಲ್ಲಿ 2014ರ ನಂತರ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯಡಿ ಸರ್ಕಾರ ಅಸ್ತಿತ್ವಕ್ಕೆ ಬಂತು. ನಿರಂತರ ಒಂಬತ್ತು ವರ್ಷಗಳಿಂದ ಮೋದಿ ಆಡಳಿತ ಇದೆ. ದೇಶದಲ್ಲಿ ವಿಚಾರಗಳನ್ನು ಮಂಡಿಸಬೇಕಿದ್ದರೆ ಪರಿವರ್ತನೆಯ ಭಾರತದ ಉಲ್ಲೇಖ ಇದೆ" ಎಂದು ಹೇಳಿದರು.

"2014ರ ನಂತರ ಮತ್ತು 2014ರ ಹಿಂದೆ ಎಂಬ ಎರಡು ಕಾಲಗಳಿವೆ. ಹಿಂದಿನ ಪ್ರಧಾನಿಗಳು ಭಾರತವನ್ನ ಸಿಂಗಾಪುರ ಮತ್ತು ಅಮೆರಿಕ ಮಾಡ್ತೀವಿ ಅಂತ ಭರವಸೆ ಕೊಟ್ಟಿದ್ದರು. ಆದರೆ, ಈಗ ಅಮೆರಿಕದ ಚುನಾವಣೆಯಲ್ಲೂ ಭಾರತದ ಮಾಡೆಲ್ ಚರ್ಚೆಯಾಗ್ತಿದೆ. ಮುಂದೆ ಜಗತ್ತಿನ ನಾಯಕತ್ವ ಭಾರತ ವಹಿಸಿಕೊಳ್ಳುವ ಹಂತಕ್ಕೆ ಬಂದಿದೆ. ಈ ಹಿಂದೆ ಪರಿವಾರ ವಾದ, ಕುಟುಂಬ ವಾದಗಳಿತ್ತು. ಆದರೆ, ಈಗ ವಿಕಾಸ ವಾದವಿದೆ. ಇವತ್ತು ಭಾರತ ಪರಿವರ್ತನೆಯ ಕಾಲಘಟ್ಟದಲ್ಲಿ ಬಂದು ನಿಂತಿದೆ. ಸಾಂಸ್ಕೃತಿಕ ಭಾರತ ಕಲ್ಪನೆಯಡಿ ಕಾಶಿ ಕಾರೀಡರ್, ಅಯೋಧ್ಯೆ, ಕೇದಾರನಾಥ, ಯೋಗ ದಿನಾಚರಣೆವರೆಗೆ ಅಭಿವೃದ್ಧಿ ಆಗಿದೆ. ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ದೊಡ್ಡ ರೀತಿಯಲ್ಲಿ ಆಗಿದೆ" ಎಂದು ನುಡಿದರು.

"ಸರ್ಜಿಕಲ್ ಸ್ಟ್ರೈಕ್​ನ ರೀತಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಗ್ರಹ ಮಾಡಲಾಗಿದೆ. ಕಾಶ್ಮೀರಕ್ಕೆ ಸ್ವಾವಲಂಬಿ ಕಲ್ಪನೆ ಕೊಡಲಾಗಿದೆ. ಸ್ವಾಭಿಮಾನಿ ಭಾರತ ಎದ್ದು ನಿಂತಿದೆ. ಇವತ್ತು ದಿನಕ್ಕೆ 27 ಕಿ.ಮೀ ಚತುಷ್ಪಥ ರಸ್ತೆ ಆಗ್ತಿದೆ. ಸರ್ಕಾರ ಬಂದ ಮೇಲೆ 75 ಸಾವಿರ ಕಿ.ಮೀ ರಸ್ತೆ ಅಭಿವೃದ್ದಿ ಆಗಿದೆ.

ಮೋದಿ ಸರ್ಕಾರದ ಅಧಿಕಾರದಲ್ಲಿ ಬಹಳಷ್ಟು ಪರಿವರ್ತನೆ ಆಗಿದೆ. ದ.ಕ ಜಿಲ್ಲೆಯಲ್ಲೇ ಇಬ್ಬರು ಸಾಧಕರನ್ನು ಕೇಂದ್ರ ಗುರುತಿಸಿದೆ. ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕರನ್ನ ಸರ್ಕಾರ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಒಂಭತ್ತು ವರ್ಷದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದ ಆಡಳಿತ ನೀಡಿದೆ. ದ‌.ಕ ಜಿಲ್ಲೆಗೆ 35 ಸಾವಿರ ಕೋಟಿ ರೂ.‌ ಅನುದಾನ ಬಂದಿದೆ. 3,289 ಕೋಟಿ ರೂ. ಕಾಮಗಾರಿ ಸದ್ಯ ನಡಿತಿದೆ" ಎಂದು ತಿಳಿಸಿದರು.

"ಬಿಹಾರದಲ್ಲಿ ಪ್ರಧಾನಮಂತ್ರಿಗಳ ಹತ್ಯೆ ಯೋಜನೆಗೆ ಮಂಗಳೂರು ಭಾಗದಲ್ಲಿ ಹಣ ಬಳಕೆಯಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಹಣ ಬಳಕೆಯಾಗಿದೆ. ಈ ಬಗ್ಗೆ ತನಿಖೆ ಮಾಡಿ ಬಂಧಿಸುವ ಕಾರ್ಯವನ್ನು ಎನ್​ಐಎ ಮಾಡುತ್ತಿದೆ. ಎನ್​ಐಎ ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಯನ್ನು ಕಂಡುಹಿಡಿದು ಅದನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸುವ ಕಾರ್ಯಕ್ಕೆ ಕೈಹಾಕಿದೆ. ನಿಷೇಧಿತ ಸಂಘಟನೆ ಆಂತರಿಕವಾಗಿ ಚಟುವಟಿಕೆ ಮಾಡುತ್ತಿರುವ ಬಗ್ಗೆ ಎನ್​ಐಎಗೆ ಮಾಹಿತಿ ಇದ್ದು ಇದರ ಪೂರ್ಣ ತನಿಖೆ ಮಾಡಲಿದೆ" ಎಂದರು.

ಇದನ್ನೂ ಓದಿ:ಬಿಎಸ್​ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ: ಗೇಟ್​ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ

ABOUT THE AUTHOR

...view details