ಕರ್ನಾಟಕ

karnataka

ಮಂಗಳೂರಿನಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣ: ಮೂವರು ಸ್ಮಗ್ಲರ್ ಸೇರಿ ಆರು ಮಂದಿ ಬಂಧನ

By

Published : Mar 27, 2023, 7:30 PM IST

ದಕ್ಷಿಣ ಕನ್ನಡದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಾದಕ ದ್ರವ್ಯ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯ ಬಂಧನವಾಗಿದೆ.

aressted accused
ಬಂಧಿತ ಆರೋಪಿಗಳು

ಮಂಗಳೂರು(ದಕ್ಷಿಣಕನ್ನಡ):ಮಾದಕ ದ್ರವ್ಯ ಗಾಂಜಾವನ್ನು ಸೇವನೆ ಮತ್ತು ಮಾರಾಟ ಮಾಡಿದ ಎರಡು ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸರು ಮೂವರು ಸ್ಮಗ್ಲರ್ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡಿದ ಪ್ರಕರಣದಲ್ಲಿ ಒರಿಸ್ಸಾ ಮೂಲದವರಾದ ಚಿಂತಾಮಣಿ, ದೂಬ ಮತ್ತು ನಗರದ ಬೈಕಂಪಾಡಿ ಮಿನಾಕಳಿಯ ನಿವಾಸಿ ವಿಕ್ರಂ ಯಾನೆ ಜಯರಾಂ ಬಂಧಿತರು. ಗಾಂಜಾ ಸೇವನೆ ಮಾಡಿದ ಪ್ರಕರಣದಲ್ಲಿ ನಗರದ ಕೊಡಿಯಲ್ ಬೈಲ್ ಸತೀಶ್, ಕುಳಾಯಿ ಹೊನ್ನಕಟ್ಟೆಯ ಸರ್ಫರಾಜ್, ಬೈಕಂಪಾಡಿಯ ಅಕ್ಷಯ್ ಬಂಧಿತರಾಗಿದ್ದಾರೆ.

ಪ್ರಕರಣ ಒಂದು;ಮಾರ್ಚ್ 26ರ ಸಂಜೆ 6 ಗಂಟೆಗೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಗ್ರಾಮದಲ್ಲಿ ಕೊಣೆಯೊಂದರಲ್ಲಿ ಕೆಲ ಯುವಕರು ಸೇರಿಕೊಂಡು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವುದು ಮತ್ತು ಸೇದುವುದು ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಇದರ ಮೇರೆಗೆ ಉತ್ತರ ಪೊಲೀಸ್ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ರವರ ಆದೇಶ ಮತ್ತು ನಿರ್ದೇಶನದ ಮೇರೆಗೆ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರದೀಪ್ ಟಿ.ಆರ್. ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜೀತ್ ಮ್ಯಾಥ್ಯೂ, ದಿಲೀಪ್, ಕಾರ್ತಿಕ್ ರವರ ತಂಡ ದಾಳಿ‌ ಮಾಡಿದ್ದಾರೆ.

ಈ ಸ್ಥಳದ ರೂಮ್ ನಲ್ಲಿ ನಾಲ್ಕು ಜನ ವ್ಯಕ್ತಿಗಳು ಗಾಂಜಾವನ್ನು ಹಾಕಿಕೊಂಡು ಸಿಗರೇಟ್ ಮಾದರಿಯಲ್ಲಿ ಸೇದುತ್ತಿರುವುದು ಕಂಡು ಬಂದಿದೆ. ರೂಮ್ ನೊಳಗೆ ಹೋಗಿ ನೋಡಿದಾಗ ಗಾಂಜಾ ತುಂಬಿದ ಪಾಕೆಟ್ ಗಳು ದೊರೆತಿದೆ. ನಾಲ್ಕು ಮಂದಿಯಲ್ಲಿ ವಿಕ್ರಂ ಯಾನೆ ಜಯರಾಂ ಎಂಬಾತನು ಇತರರಿಗೆ ಗಾಂಜಾ ಮಾದಕ ವಸ್ತುವನ್ನು ತಂದು ಹಣಕ್ಕೆ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈತನನ್ನು ಕೂಲಂಕುಷವಾಗಿ ವಿಚಾರಿಸಿದಾಗ ಆತನು ಬಂದಿದ್ದ ಆಟೋರಿಕ್ಷಾದಲ್ಲಿ 750 ಗ್ರಾಂ ಗಾಂಜಾ ಮತ್ತು ತೂಕದ ಮಾಪನ ಮತ್ತು ಗಾಂಜಾ ಪ್ಯಾಕ್ ಮಾಡುವ ಖಾಲಿ ಪ್ಯಾಕೆಟ್ ಗಳು ದೊರೆತಿದೆ. ಪಂಚರ ಸಮಕ್ಷಮ ಸದರಿ ಸ್ವತ್ತುಗಳನ್ನು ಮತ್ತು ಆರೋಪಿತರನ್ನು ವಶಪಡಿಸಿಕೊಳ್ಳಲಾಗಿದೆ.

ಬೈಕಂಪಾಡಿ ಮಿನಾಕಳಿಯ ನಿವಾಸಿ ವಿಕ್ರಂ ಯಾನೆ ಜಯರಾಂ, ನಗರದ ಕೊಡಿಯಲ್ ಬೈಲ್ ಸತೀಶ್, ಕುಳಾಯಿ ಹೊನ್ನಕಟ್ಟೆಯ ಸರ್ಫರಾಜ್, ಬೈಕಂಪಾಡಿಯ ಅಕ್ಷಯ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ ಒಟ್ಟು 790 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ 8ಸಾವಿರ) 4 ಮೊಬೈಲ್ ಪೋನ್ (ಒಟ್ಟು ಅಂದಾಜು ಮೌಲ್ಯ ರೂ 6000) , ನಗದು ಹಣ -2470, ಒಂದು ಆಟೋರಿಕ್ಷಾ ( ಮೌಲ್ಯ -70000 ರೂಪಾಯಿಗಳು ), ತೂಕ ಮಾಪನ (ಅಂದಾಜು ಮೌಲ್ಯ -1000 ರೂ ಗಳು) ಆಗಿದ್ದು ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ - 87470 ರೂಪಾಯಿಗಳು ಆಗಿದೆ. ಆರೋಪಿಗಳ ವಿರುದ್ಧ ಸುರತ್ಕಲ್ ಠಾಣಾ ಅಪರಾಧ ಕ್ರಮಾಂಕ 25/2023 u/s 8 (c), 20 (b)(ii) (A), 27(b) NDPS Act ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಎರಡು:ಮಾರ್ಚ್ 26 ರಂದು ಸುರತ್ಕಲ್ ಇಡ್ಯಾ ಗ್ರಾಮದ ಗೋವಿಂದ ದಾಸ ಕಾಲೇಜಿನ ಬಳಿ ಇಬ್ಬರು ಒರಿಸ್ಸಾ ಮೂಲದವರಾದ ಚಿಂತಾಮಣಿ ಮತ್ತು ದೂಬ ಎಂಬಿಬ್ಬರು ಗಾಂಜಾ ಮಾರಾಟ ಮಾಡಲು ಬಂದಿದ್ದರು. ಇವರನ್ನು ಬಂಧಿಸಿ ಇವರ ಬಳಿಯಿದ್ದ 3 ಕೆಜಿ 180 ಗ್ರಾಂ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರವರಾದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದರ್ ಸಿಬ್ಬಂದಿಗಳಾದ ಅಜಿತ್, ಅಣ್ಣಪ್ಪ, ದಿಲೀಪ್ ಮತ್ತು ಕಾರ್ತಿಕ್ ರವರ ತಂಡ ಪಾಲ್ಗೊಂಡಿದ್ದರು.

ಇದನ್ನೂ ಓದಿ:ನಕಲಿ ದಾಖಲೆ ಸೃಷ್ಟಿಸಿ‌ ಫೈನಾನ್ಸ್ ಕಂಪನಿಗೆ ಟೋಪಿ ಹಾಕಿದ‌ ವಂಚಕರು‌ ಅಂದರ್

ABOUT THE AUTHOR

...view details