ಕರ್ನಾಟಕ

karnataka

ಕವಾಡಿಗರಹಟ್ಟಿ ಪ್ರಕರಣ: ನೀರಿನಲ್ಲಿ ಕಾಲರಾ ಮಾದರಿ ಬ್ಯಾಕ್ಟೀರಿಯಾ ಪತ್ತೆ.. ಬೆಂಗಳೂರು ಲ್ಯಾಬ್​ ಟೆಸ್ಟ್​ ವರದಿ ಬಹಿರಂಗ

By

Published : Aug 9, 2023, 2:06 PM IST

Updated : Aug 9, 2023, 2:28 PM IST

ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಪ್ರಯೋಗಾಲಯದಿಂದ ವರದಿಯಲ್ಲಿ ನೀರಿನಲ್ಲಿ ಕಾಲರಾ ಮಾದರಿ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಬಹಿರಂಗವಾಗಿದೆ.

Kavadigarhatti death case
ಕವಾಡಿಗರಹಟ್ಟಿ ಸಾವು ಪ್ರಕರಣ

ಚಿತ್ರದುರ್ಗ:ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಐವರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಪ್ರಯೋಗಾಲಯದಿಂದ ವರದಿ ಬಂದಿದೆ. ನೀರಿನಲ್ಲಿ ಕಾಲರಾ ಮಾದರಿ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಬಹಿರಂಗವಾಗಿದೆ. ಘಟನೆ ನಡೆದ ಸಂದರ್ಭ ಅಸ್ವಸ್ಥರ ಭೇದಿ ಮಾದರಿಯನ್ನು ಲ್ಯಾಬ್ ಟೆಸ್ಟ್​ಗೆ ಕಳುಹಿಸಲಾಗಿತ್ತು. ಇದೀಗ ಬೆಂಗಳೂರಿನಿಂದ ಚಿತ್ರದುರ್ಗ ಜಿಲ್ಲಾ ಸರ್ವಿಲಿಯನ್ಸ್ ಆಫೀಸರ್​ಗೆ ವರದಿ ಕಳುಹಿಸಲಾಗಿದೆ.

ಕವಾಡಿಗರಹಟ್ಟಿ ಪ್ರಕರಣಕ್ಕೆ ಕಾಲರಾ ಕಾರಣ ಎಂಬುದು ಲ್ಯಾಬ್​ ಟೆಸ್​ ವರದಿಯಲ್ಲಿ ಬಯಲಾಗಿದೆ. ಚಿತ್ರದುರ್ಗ‌ ಜಿಲ್ಲಾ ಸರ್ವೇಕ್ಷಣಾ ಘಟಕವೂ ಇದೇ ರೀತಿ ವರದಿ ನೀಡಿತ್ತು. ಕವಾಡಿಗರಹಟ್ಟಿಯಲ್ಲಿ ಪೂರೈಕೆಯಾದ ನೀರು ಕುಡಿಯಲು ಯೋಗ್ಯವಲ್ಲ. ವಿಬ್ರಿಯಾ ಕಾಲರಾ ಮಾದರಿ ಬ್ಯಾಕ್ಟೀರಿಯಾ ಪತ್ತೆ ಎಂದು ವರದಿ ನೀಡಿತ್ತು. ಆಗಸ್ಟ್​​ 3 ರಂದು ಜಿಲ್ಲಾ ಸರ್ವೇಕ್ಷಣಾ ಘಟಕ ಈ ಸಂಬಂಧ ವರದಿ ನೀಡಿತ್ತು. ನಂತರ ಉನ್ನತ ಮಟ್ಟದ ಪರೀಕ್ಷೆಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಿ ಕೊಡಲಾಗಿತ್ತು.

ವರದಿಗೆ ಲೋಕಾಯುಕ್ತರ ಸೂಚನೆ: ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆ ಪ್ರಕರಣದ ಬಗ್ಗೆ ಲೋಕಾಯುಕ್ತ ಜಸ್ಟೀಸ್ ಬಿ.ಎಸ್ ಪಾಟೀಲ್ ಅವರು ವರದಿ ಕೇಳಿದ್ದಾರೆ. ಕವಾಡಿಗರಹಟ್ಟಿ ಘಟನೆ ಕುರಿತು ಸುಮೋಟೊ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕವಾಡಿಗರಹಟ್ಟಿ ದುರ್ಘಟನೆ ನೋವು ತರುವಂಥದ್ದಾಗಿದೆ. ಸಂಬಂಧಿತ ವರದಿಯೊಂದಿಗೆ ಆಗಸ್ಟ್ 24ಕ್ಕೆ ಕಚೇರಿಗೆ ಬರಲು ಸೂಚನೆ ನೀಡಲಾಗಿದೆ. ವಿಕಾಸಸೌಧ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ, ಪುರಸಭೆ ಆಡಳಿತ ನಿರ್ದೇಶಕ, ಚಿತ್ರದುರ್ಗ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಧಿಕಾರಿ, ನಗರಸಭೆ ಆಯುಕ್ತ, ಎಇಇ, ಆರೋಗ್ಯ ನಿರೀಕ್ಷಕರಿಗೆ ಆದೇಶ ಹೊರಡಿಸಿರುವ ಲೋಕಾಯುಕ್ತರು ಸಂಪೂರ್ಣ ಮಾಹಿತಿ ನೀಡುವಂತೆ ರಾಜ್ಯ ಲೋಕಾಯುಕ್ತ ನ್ಯಾ.ಬಿ.ಎಸ್ ಪಾಟೀಲ್ ಸೂಚನೆ ನೀಡಿದ್ದಾರೆ.

ಘಟನೆ ಹಿನ್ನೆಲೆ:ಕವಾಡಿಗರಹಟ್ಟಿ ಗ್ರಾಮದ ಎಸ್​ಸಿ ಕಾಲೊನಿಯಲ್ಲಿ ಜುಲೈ 31 ರಂದು ಕಲುಷಿತ ನೀರುವ ಕುಡಿದು ನಿವಾಸಿಗಳು ಅಸ್ವಸ್ಥಗೊಂಡು ಮೂವರು ಸಾವನ್ನಪ್ಪಿದ್ದರು. ನಂತರದ ಬೆಳವಣಿಗೆಯಲ್ಲಿ ಒಂದೊಂದು ದಿನಗಳ ಅಂತರದಲ್ಲಿ ಒಟ್ಟು ಐದು ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಐವರು ಅಧಿಕಾರಿಗಳನ್ನು ಹುದ್ದೆಯಿಂದ ಅಮಾನತು ಮಾಡಲಾಗಿತ್ತು. ಜೊತೆಗೆ ಮುಖ್ಯಮಂತ್ರಿಗಳು ಪರಿಹಾರ ನಿಧಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು.

ಕುಡಿಯುವ ನೀರಿನಲ್ಲಿ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದರು. ಐವರು ಸಾವನ್ನಪ್ಪಿದ್ದ ಕಾರಣ ನಲ್ಲಿ ನೀರನ್ನು ದಾವಣಗೆರೆಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದು ಆ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿತ್ತು. ಚಿತ್ರದುರ್ಗಾ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿಯಲ್ಲಿ ನೀರಿನಲ್ಲಿ ಕಾಲಾರಾ ಮಾದರಿ ಅಂಶ ಇದೆ ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಹೆಚ್ಚಿನ ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಅಸ್ವಸ್ಥರ ಬೇಧಿ ಕಳುಹಿಸಲಾಗಿತ್ತು. ಅದರ ವರದಿ ಈಗ ಬಂದಿದೆ.

ಇದನ್ನೂ ಓದಿ:ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣದ ಪ್ರಯೋಗಾಲಯ ವರದಿ ಬಹಿರಂಗ; ನೀರು ಸರಬರಾಜು ಸಹಾಯಕ ಅಮಾನತು

Last Updated : Aug 9, 2023, 2:28 PM IST

ABOUT THE AUTHOR

...view details