ಕರ್ನಾಟಕ

karnataka

ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಕಾರ್ಯಗತಗೊಳಿಸಿ; ಕೆ.ಎಚ್​. ಮುನಿಯಪ್ಪ

By

Published : Jan 3, 2021, 7:50 PM IST

ಕೋಲಾರದಲ್ಲಿ 1200 ಎಕರೆ ಜಾಗದಲ್ಲಿ ರೈಲ್ವೆ ಕೋಚ್ ಕಾರ್ಖಾನೆ‌ ನಿರ್ಮಾಣಕ್ಕೆ ಹಿಂದೆಯೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ರಾಜ್ಯದಲ್ಲಿ ಸಿಎಂಗಳ ಬದಲಾವಣೆಯಿಂದ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣದ ಕಾರ್ಯ ಕುಂಠಿತಗೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರ ಕಾಮಗಾರಿ ಆರಂಭಿಸಬೇಕೆಂದು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಒತ್ತಾಯಿಸಿದ್ದಾರೆ.

ex minister kh Muniyappa pressmeet in chitradurga
ಕೇಂದ್ರ ಮಾಜಿ ಸಚಿವ ಕೆಎಚ್ ಮುನಿಯಪ್ಪ ಸುದ್ದಿಗೋಷ್ಟಿ

ಚಿತ್ರದುರ್ಗ:2010 ರಿಂದ 2012ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಜಾರಿ ಮಾಡಿದ 15 ರೈಲ್ವೆ ಯೋಜನೆಗಳನ್ನು ಕಾರ್ಯಗತಗೊಳಿಸುವಂತೆ ಕೇಂದ್ರ ಮಾಜಿ ಸಚಿವ ಕೆಎಚ್ ಮುನಿಯಪ್ಪ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೇಂದ್ರ ಮಾಜಿ ಸಚಿವ ಕೆಎಚ್ ಮುನಿಯಪ್ಪ ಸುದ್ದಿಗೋಷ್ಟಿ

ನಗರದ ಮಾದಾರ ಚೆನ್ನಯ್ಯ ಗುರುಪೀಠದ ಮಠಕ್ಕೆ ಭೇಟಿ ನೀಡಿ ನಂತರ ಅವರು ಮಾಧ್ಯಮಗೋಷ್ಠಿ ನಡೆಸಿದರು. ಕಳೆದ 2010ರಲ್ಲಿ ನಾನು ರಾಜ್ಯ ರೈಲ್ವೆ ಖಾತೆಯ ಕೇಂದ್ರ ಮಂತ್ರಿಯಾಗಿದ್ದಾಗ 15 ರೈಲ್ವೆ ಪ್ರಾಜೆಕ್ಟ್​​ಗಳನ್ನು ರಾಜ್ಯಕ್ಕೆ ಜಾರಿ ಮಾಡಿದ್ದೆ. ಕೇಂದ್ರದ ಅರ್ಧ ಪಾಲು ಹಾಗೂ ರಾಜ್ಯದ ಅರ್ಧ ಪಾಲು ಎಂಬ ಒಡಂಬಡಿಕೆ ಆಗಿತ್ತು. ಆದರೆ ರಾಜ್ಯದಲ್ಲಿ ಇದುವರೆಗೂ ಆಗಿನ ರೈಲ್ವೆ ಯೋಜನೆಗಳು ಜಾರಿಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. 2010ರಲ್ಲಿ ಕೂಡ ಬಿಎಸ್‌ವೈ ಸಿಎಂ ಆಗಿದ್ದರು. ಈಗಲೂ ಅವರೇ ಸಿಎಂ‌ ಇದ್ದಾರೆ. ರಾಜ್ಯದ ಜನರಿಗೆ ಅನುಕೂಲವಾಗುವಂತೆ 15 ರೈಲ್ವೆ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದರು.

ದೇಶದ ಅತಿದೊಡ್ಡ ರೈಲ್ವೆ ಕಾರ್ಖಾನೆ ಕಾಮಗಾರಿ ಕುಂಠಿತ:

ಕೋಲಾರದಲ್ಲಿ 1200 ಎಕರೆ ಜಾಗದಲ್ಲಿ ರೈಲ್ವೆ ಕೋಚ್ ಕಾರ್ಖಾನೆ‌ ನಿರ್ಮಾಣಕ್ಕೆ ಆಗಿನ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಕೋಲಾರದ ಸರ್ಕಾರಿ ಜಾಗವನ್ನು ಗುರುತಿಸಿ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದರು. ಬಳಿಕ ಸಿದ್ದರಾಮಯ್ಯ ಆಡಳಿತದಲ್ಲಿ ಶಿಲಾನ್ಯಾಸ ಕೂಡ ನೆರವೇರಿಸಲಾಯಿತು. ಅಂದಿನ‌ ಸಿಎಂ ಕುಮಾರಸ್ವಾಮಿ ಕಾರ್ಖಾನೆ ನಿರ್ಮಾಣಕ್ಕೆ ಅರ್ಧ ಹಣ ರಾಜ್ಯ ಸರ್ಕಾರ ನೀಡಲಿದೆ ಎಂದು ಪತ್ರ ಬರೆದಿದ್ದರು. ಆದರೆ ಸಿಎಂಗಳ ಬದಲಾವಣೆಯಿಂದ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣದ ಕಾರ್ಯ ಕುಂಠಿತಗೊಂಡಿದೆ. ರಾಜ್ಯ ಸರ್ಕಾರ ಫ್ಯಾಕ್ಟರಿ ಕಾಮಗಾರಿ ಆರಂಭಿಸುವಂತೆ ಕೆಎಚ್ ಮುನಿಯಪ್ಪ ಒತ್ತಾಯಿಸಿದರು.

ಬಿಜೆಪಿ ಸರ್ಕಾರ ಮಲತಾಯಿ ಧೋರಣೆ:

ಬಿಜೆಪಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡದೆ ಆಪರೇಷನ್ ಕಮಲ, ತಮ್ಮ ಪಕ್ಷದ ಕಡೆಗೆ ಗಮನ ಹರಿಸುತ್ತಿದೆ. ರಾಜ್ಯದಲ್ಲಿ ಅಂದು ಬಿಎಸ್‌ವೈ ಆಡಳಿತ ಅವಧಿಯಲ್ಲಿ ರೈಲ್ವೆ ಯೋಜನೆಗಳನ್ನು ಜಾರಿ ಮಾಡಲಾಗಿತ್ತು. ಇಂದು ಕೂಡ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಿಗಳ ಜೊತೆಗೆ ಚರ್ಚಿಸಿ ಆದಷ್ಟು ಬೇಗ ರೈಲ್ವೆ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರೈಲ್ವೆ ಯೋಜನೆ ಜಾರಿಯಾದರೆ ಶಿವಮೊಗ್ಗ, ಹರಿಹರ, ತುಮಕೂರು ಸೇರಿದಂತೆ ಹಲವು ಭಾಗದ ರೈತರಿಗೆ ಬೆಳೆ ರಫ್ತಿಗೆ ಅನುಕೂಲವಾಗಲಿದ್ದು ಸಾರಿಗೆ ವೆಚ್ಚವೂ ಕೂಡ ಉಳಿಯುತ್ತದೆ ಎಂದರು.

ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ, ಪಕ್ಷ ಕಟ್ಟಲು ಕೆಲಸ ಮಾಡುತ್ತಿದ್ದೇನೆ:
ನಾನು ರಾಜ್ಯದಲ್ಲಿ ಸಿಎಂ ಆಗಬೇಕು ಅಂದುಕೊಂಡಿಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು, ಸಂಘಟನೆಯಾಗಬೇಕು. ಅದಕ್ಕಾಗಿ ನಾನು ಶ್ರಮಿಸುತ್ತಿದ್ದೇನೆ. ಎಲ್ಲ ತಿರ್ಮಾನವನ್ನು ಹೈಕಮಾಂಡ್ ಕೈಗೊಳ್ಳುತ್ತದೆ. ಇತ್ತ ದೇಶದಲ್ಲಿ ಬಿಜೆಪಿ ಸರಕಾರ ರೈತ ವಿರೋಧಿ ಧೋರಣೆ ಮೂಲಕ ರೈತರ ವಿರೋಧಿ ಆಡಳಿತಕ್ಕೆ ಮುಂದಾಗಿದೆ. ಎಪಿಎಂಸಿ, ಕಾರ್ಮಿಕ ಕಾಯ್ದೆ ಮುಂತಾದ ಕಾಯ್ದೆಗಳ ಮೂಲಕ ರೈತರಿಗೆ ನಷ್ಟವಾಗುತ್ತಿದೆ ಎಂದು ಮುನಿಯಪ್ಪ ಆರೋಪಿಸಿದರು.

ಡಿವಿ ಸದಾನಂದಗೌಡ ಹೇಳಿಕೆಗೆ ಟಾಂಗ್:

ಕೇಂದ್ರ ಸರ್ಕಾರದ ಕಾಯ್ದೆಗಳ ವಿರುದ್ಧ ರೈತರ ಮುಖವಾಡ ಧರಿಸಿದವರು ಮಾತ್ರ ಹೋರಾಟ ಮಾಡುತ್ತಿದ್ದಾರೆ ಎಂಬ ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿಕೆಗೆ ಉತ್ತರಿಸಿದ ಮುನಿಯಪ್ಪ, ಸದಾನಂದಗೌಡರ ಬಗ್ಗೆ ಗೌರವವಿದೆ, ಅವರು ಕೂಡ ರೈತ ಕುಟುಂಬದಿಂದ ಬಂದಿದ್ದಾರೆ. ನಿಜವಾಗಿಯೂ ಕಾಯ್ದೆಗಳು ಯಾರಿಗೆ ತೊಂದರೆ ಆಗಿದೆಯೋ ಅವರೇ ಅರ್ಥ ಮಾಡಿಕೊಳ್ಳಬೇಕು. ಇಂದು ಯಾರಿಗೆ ಅನ್ಯಾಯವಾಗಿದೆ ಅವರೇ ಹೋರಾಟ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಝೈಡಸ್​ ಕ್ಯಾಡಿಲಾ ಲಸಿಕೆ 3ನೇ ಹಂತದ ಪ್ರಯೋಗಕ್ಕೆ ಡಿಸಿಜಿಐ ಅನುಮತಿ

ABOUT THE AUTHOR

...view details