ಕರ್ನಾಟಕ

karnataka

ಭಾರತ್ ಜೋಡೋದ 33 ಯಾತ್ರಿಗಳಿಂದ ನೇತ್ರದಾನ ವಾಗ್ದಾನ.. ಅಂಗಾಂಗ ದಾನಿಗಳ ಕುಟುಂಬಸ್ಥರೊಂದಿಗೆ ರಾಹುಲ್ ಹೆಜ್ಜೆ

By

Published : Oct 13, 2022, 8:15 AM IST

ಬುಧವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗಿದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು ಕೆಲಕಾಲ ಹೆಜ್ಜೆಹಾಕಿದರು.

ಅಂಗಾಂಗ ದಾನಿಗಳ ಜೊತೆ ರಾಹುಲ್ ಹೆಜ್ಜೆ
ಅಂಗಾಂಗ ದಾನಿಗಳ ಜೊತೆ ರಾಹುಲ್ ಹೆಜ್ಜೆ

ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಪಾದಯಾತ್ರೆಯಲ್ಲಿ ವಿಶೇಷಚೇತನರು, ರೈತರು, ಮಕ್ಕಳು ಹಾಗೂ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ರಾಹುಲ್​ಗೆ ಸಾಥ್ ನೀಡುತ್ತಿದ್ದಾರೆ. ಹಾಗೆಯೇ ತಮ್ಮ ಮನೆಯವರ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬಸ್ಥರು ಕೂಡ ಚಿತ್ರದುರ್ಗದಲ್ಲಿ ಸಾಗುತ್ತಿರುವ ಪಾದಯಾತ್ರೆಯಲ್ಲಿ ಭಾಗಿಯಾದರು.

ಬುಧವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು ಕೆಲಕಾಲ ಹೆಜ್ಜೆಹಾಕಿದರು. ಈ ವೇಳೆ ಅವರ ಜೊತೆ ಕಾಂಗ್ರೆಸ್​ ನಾಯಕ ಮಾತನಾಡಿದರು. ಅಂಗಾಂಗ ದಾನ ಮಾಡಿದ ಕುಟುಂಬಸ್ಥರ ಕಾಳಜಿ ಮತ್ತು ಮಾನವೀಯ ಪ್ರೀತಿಯನ್ನು ರಾಹುಲ್ ಶ್ಲಾಘಿಸಿದ್ದಾರೆ.

'ಅವರದ್ದು ಖಂಡಿತ ನಮ್ಮೆಲ್ಲರನ್ನು ಅಗಲಿ ಹೋಗುವ ವಯಸ್ಸಲ್ಲಾ. ರಕ್ಷಿತಾ, ವೇದಾ ಹಾಗೂ ನಟ ವಿಜಯ್ ಈ ಜಗತ್ತಿಗೆ ಬಹಳ ಬೇಗ ವಿದಾಯ ಹೇಳಿಬಿಟ್ಟರು. ಅವರ ಸಾವಿನಲ್ಲೂ ತಮ್ಮ ಅಂಗಾಂಗಗಳನ್ನು ದಾನ ಮಾಡಿ ಬೇರೊಬ್ಬರ ಜೀವ ಉಳಿಸುವ ಮೂಲಕ ಇತರರಿಗೆ ಸಂತಸ ಹಾಗೂ ಜೀವನ ಮೌಲ್ಯಗಳನ್ನು ಉಡುಗೊರೆಯಾಗಿ ನೀಡಿದರು. ಇದು ಪ್ರೀತಿ ಮತ್ತು ತ್ಯಾಗದ ಒಂದು ಉದಾಹರಣೆ. ಈ ಅಂಗಾಂಗ ದಾನಿಗಳ ಕೆಚ್ಚೆದೆಯ ಹೃದಯವುಳ್ಳ ಕುಟುಂಬದ ಸದಸ್ಯರೊಂದಿಗೆ ಜೊತೆಯಾಗಿ ನಡೆಯುವ ಅವಕಾಶ ಇಂದು ನನ್ನದಾಗಿತ್ತು. ಅವರು ಜೀವನದಲ್ಲಿ ತ್ಯಾಗ, ಸಹಾನುಭೂತಿ ಮತ್ತು ಮಾನವೀಯತೆಯನ್ನು ನಿಜವಾದ ಅರ್ಥದಲ್ಲಿ ನಿರೂಪಿಸಿ ತೋರಿಸಿದ್ದಾರೆ. ಮಾನವೀಯತೆ, ಸಾಮಾಜಿಕ ಕಳಕಳಿ ಮತ್ತು ಸಹಾನುಭೂತಿಯ ಜೀವನೋತ್ಸಾಹವನ್ನು ನಾವು ಉತ್ತೇಜಿಸಬೇಕು ಮತ್ತು ಪಾಲಿಸಬೇಕು. ಇಂದಿನ ದ್ವೇಷಪೂರಿತ ಮತ್ತು ದುರಾಸೆಯ ಸಮಾಜದಲ್ಲಿ ಇವು ನಾವೆಂದಿಗೂ ಮರೆಯಲಾಗದ, ಕೈಬಿಡಲಾಗದ ಜೀವನದ ಅತ್ಯಮೂಲ್ಯ ಭಾಗಗಳಾಗಿವೆ' ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

ರಾಜ್​ಕುಮಾರ್ ಮತ್ತು ಪುನೀತ್ ರಾಜ್​ಕುಮಾರ ಪ್ರೇರಣೆ:ರಾಜ್​ಕುಮಾರ್ ಮತ್ತು ಪುನೀತ್ ರಾಜ್​ಕುಮಾರ ನೇತ್ರದಾನದ ಪ್ರೇರಣೆಯಿಂದ ಈಗಾಗಲೇ ಸಾಕಷ್ಟು ಜನ ಅಂಗಾಂಗ ದಾನ ಮಾಡಿದ್ದಾರೆ. ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಕೂಡ ಮೈಸೂರಿನ ಜೆಎಸ್​ಎಸ್​ ಕಾಲೇಜಿನಲ್ಲಿ ನೇತ್ರದಾನದ ವಾಗ್ದಾನ ಮಾಡಿದ್ದಾರೆ. ಇವರಿಂದ ಪ್ರೇರಣೆಗೊಂಡು ಭಾರತ್ ಜೋಡೋ ಯಾತ್ರೆಯ 33 ಕಾರ್ಯಕರ್ತರು ಕೂಡ ನೇತ್ರದಾನ ಮಾಡಲು ಪಣ ತೊಟ್ಟು, ಜೆಎಸ್​ಎಸ್​ ಕಾಲೇಜಿನಲ್ಲಿ ವಾಗ್ದಾನ ಮಾಡಿದ್ದಾರೆ.

ಈ ಬಗ್ಗೆ ಬರೆದುಕೊಂಡಿರುವ ರಾಹುಲ್ ಗಾಂಧಿ, 'ದಿವಂಗತ ಡಾ. ರಾಜ್‌ಕುಮಾರ್ ಮತ್ತು ಅವರ ಪುತ್ರ, ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನದಂತಹ ನಿಸ್ವಾರ್ಥ ಕಾರ್ಯವು ಸಹಸ್ರಾರು ಕನ್ನಡಿಗರು ಮತ್ತು ಭಾರತೀಯರಿಗೆ ಸ್ಫೂರ್ತಿ ನೀಡಿದ್ದು, ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿವೆ. ಕರ್ನಾಟಕದ ಈ ಸುಂದರ ನಾಡಿನಿಂದ 33 ಭಾರತ ಯಾತ್ರಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಪಣ ತೊಟ್ಟಿದ್ದಾರೆ ಎಂದು ನಿಮಗೆ ತಿಳಿಸಲು ನನಗೆ ಅಪಾರ ಹೆಮ್ಮೆಯಿದೆ. ಸಾಮರಸ್ಯ, ಭ್ರಾತೃತ್ವ ಮತ್ತು ಮಾನವೀಯ ಗುಣಗಳಲ್ಲಿ ಅಪರಿಮಿತ ಪ್ರೀತಿ ಹಾಗೂ ಸಂತಸ ಅಡಗಿದೆ' ಎಂದು ಪೋಸ್ಟ್ ಮಾಡಿದ್ದಾರೆ.

(ಓದಿ: ಪರೀಕ್ಷೆಗಳು ಆಯಾ ರಾಜ್ಯದ ಭಾಷೆಯಲ್ಲೇ ನಡೆಯಲಿ: ರಾಹುಲ್​ ಗಾಂಧಿ)

ABOUT THE AUTHOR

...view details