ಕರ್ನಾಟಕ

karnataka

ಚಿಕ್ಕಮಗಳೂರಲ್ಲಿ ನಕಲಿ ಚಿನ್ನ ಮಾರಾಟ ದಂಧೆ.. ತಾಮ್ರದ ನಾಣ್ಯವನ್ನೇ ಚಿನ್ನ ಎಂದು ನಂಬಬೇಡಿ!

By

Published : Oct 21, 2022, 11:12 AM IST

Updated : Oct 21, 2022, 1:30 PM IST

three-arrested-in-fake-gold-sell-case-in-chikkamagaluru
ಚಿಕ್ಕಮಗಳೂರಲ್ಲಿ ನಕಲಿ ಚಿನ್ನ ಮಾರಾಟ ದಂಧೆ.. ತಾಮ್ರದ ನಾಣ್ಯವನ್ನೇ ಚಿನ್ನವೆಂದು ನಂಬದಿರಿ! ()

ನಕಲಿ ಚಿನ್ನ ಮಾರಾಟ ಮಾಡುತ್ತ ಅಮಾಯಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು: ಆಂಧ್ರಪ್ರದೇಶದ ತಿರುಪತಿಯಲ್ಲಿ ಐದು ಲಕ್ಷ ರೂ. ಮುಂಡಾಯಿಸಿದ್ರು. ಬಳಿಕ ಮಹಾರಾಷ್ಟ್ರದ ಪಂಡರಾಪುರದಲ್ಲಿ ಎರಡು ಲಕ್ಷ ರೂ. ಟೋಪಿ ಹಾಕಿದ್ದರು. ನಂತರ ಹುಬ್ಬಳ್ಳಿಯಲ್ಲೂ 1.70 ಲಕ್ಷಕ್ಕೆ ಮೂರು ನಾಮ ಹಾಕಿದರು.. ಆದರೆ, ಕಾಫಿನಾಡಲ್ಲಿ ಕೈಚಳಕ ತೋರಲು ಯತ್ನಿಸಿದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಕಲಿ ಚಿನ್ನದ ನಾಣ್ಯ ಇಟ್ಟುಕೊಂಡು ಕೇವಲ 5 ಲಕ್ಷ ರೂಪಾಯಿಗೆ 2 ಕೆ.ಜಿ ಚಿನ್ನ ನೀಡುತ್ತೇವೆ ಎಂದು ಯಾಮಾರಿಸುತ್ತಿದ್ದ ಮೂವರು ಅಸಾಮಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. 15 ಲಕ್ಷ ರೂ. ಮೌಲ್ಯದ ಚಿನ್ನದ ಜೊತೆಗೆ ಬಂದರೆ ನಾವು ಹಣ ತರುತ್ತೇವೆ ಎಂದು ನಂಬಿಸಿದ ಪೊಲೀಸರು ನಕಲಿ ಬ್ಯುಸಿನೆಸ್‍ಮ್ಯಾನ್​ಗಳು​ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಮೂವರು ಕಳ್ಳರ ಬಂಧನ

ಅಂದಹಾಗೆ ಬಂಧಿತ ಖದೀಮರು ಮೂಲತಃ ವಿಜಯಪುರ ಜಿಲ್ಲೆಯವರು. ಕೆಲಸಕ್ಕೆಂದು ಬಂದವರು ವಂಚನೆ ಹಿಂದೆ ಬಿದ್ದು ಜೈಲುಪಾಲಾಗಿದ್ದಾರೆ. ಎರಡು ನಾಣ್ಯ ತೋರಿಸಿ ನಮ್ಮ ಬಳಿ ಇಂತಹವು ಬಹಳಷ್ಟು ಇದೆ. 5 ಲಕ್ಷಕ್ಕೆ ಎರಡು ಕೆ.ಜಿಯಷ್ಟು ಕೊಡುತ್ತೇವೆ ಎಂದು ಚಿಕ್ಕಮಗಳೂರು ನಗರದ ಮಹೇಶ್ ಎಂಬುವರನ್ನು ಪುಸಲಾಯಿಸಿದ್ದರು.

ಮಹೇಶ್ ಆರಂಭದಲ್ಲಿ ನೋಡೋಣ ಅಂತ 5 ಸಾವಿರ ರೂ. ಕೊಟ್ಟು 2 ನಾಣ್ಯ ತಂದು ಪರೀಕ್ಷೆ ಮಾಡಿಸಿದಾಗ ಅದು ಅಸಲಿ ನಾಣ್ಯ ಎಂಬುದು ಗೊತ್ತಾಗಿದೆ. ಇದನ್ನೇ ನಂಬಿದ ಮಹೇಶ್​​ ಮತ್ತಷ್ಟು ಹಣ ಒಟ್ಟು ಮಾಡಿಕೊಂಡು ಲಕ್ಷಾಂತರ ರೂ. ಹಣ ನೀಡಿ 20 ನಾಣ್ಯ ತಂದಿದ್ದರು. ಆದರೆ, ನಾಣ್ಯಗಳನ್ನು ಚೆಕ್​ ಮಾಡಿಸಿದಾಗ ಅವು ತಾಮ್ರದವು ಎಂಬುದು ಗೊತ್ತಾಗಿದೆ. ಆಗ ವಂಚನೆ ಅರಿತ ಮಹೇಶ್​​, ಚಿಕ್ಕಮಗಳೂರು ಸಿಇಎನ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದೇ ದಿನಕ್ಕೆ ಮೂವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಚಿಕ್ಕಮಗಳೂರಲ್ಲಿ ನಕಲಿ ಚಿನ್ನ ಮಾರಾಟ ದಂಧೆ

ಹೀಗಿತ್ತು ಖಾಕಿ ಹೆಣೆದ ಬಲೆ:ಪುಕ್ಕಟೆ ಹಣದ ರುಚಿ ಕಂಡಿದ್ದ ಕಳ್ಳರು ನಾಣ್ಯ ಬೇಕು ಎಂದು ಮತ್ತೆ ಕರೆದರೆ ಕೂಡಲೇ ಬರುತ್ತಾರೆಂಬುದು ಪೊಲೀಸರಿಗೆ ಗೊತ್ತಿತ್ತು. ಅದರಂತೆ, ಮಹೇಶ್ ಕಡೆಯಿಂದಲೇ ಫೋನ್ ಮಾಡಿ, ದೊಡ್ಡ ವ್ಯಕ್ತಿಯೊಬ್ಬ ಸಿಕ್ಕಿದ್ದಾರೆ. 15 ಲಕ್ಷ ಮೌಲ್ಯದ ಚಿನ್ನ ಬೇಕು, ನಗರದತ್ತ ಬರಬೇಡಿ. ಸಖರಾಯಪಟ್ಟಣ ಗೌರಿಹಳ್ಳದ ಸಮೀಪ ಬನ್ನಿ, ವ್ಯಕ್ತಿಯನ್ನು ನಾನು ಕರೆದುಕೊಂಡು ಹಣದೊಂದಿಗೆ ಬರುತ್ತೇನೆ ಎಂದು ಹೇಳಿಸಿದ್ದಾರೆ.

ಇದನ್ನೇ ನಂಬಿಕೊಂಡ ಖದೀಮರು ಕಾರಿನಲ್ಲಿ ತಾಮ್ರದ ತಗಡಿನ ಜೊತೆ ಸಖರಾಯಪಟ್ಟಣಕ್ಕೆ ಬಂದಿದ್ದರು. ಅಷ್ಟರಲ್ಲಾಗಲೇ ನಾನಾ ವೇಷದಲ್ಲಿ ಪೊಲೀಸರು ಅಲ್ಲಲ್ಲಿ ನಿಂತಿದ್ದರು. ಕಳ್ಳರು ಬರುತ್ತಿದ್ದಂತೆ ಮಹೇಶ್ ಜೊತೆ ಮತ್ತೊಬ್ಬ ಪೊಲೀಸ್​​ ವ್ಯಾಪಾರ ಕುದುರಿಸುವ ರೀತಿ ಮಾತುಕತೆಗೆ ನಿಂತಾಗ, ಉಳಿದ ಪೊಲೀಸರು ಸುತ್ತುವರೆದು ಮೂವರನ್ನೂ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ವಸ್ತುಗಳು

ವಿಚಾರಣೆ ಈ ಹಿಂದೆ ನಡೆದ ಸಾಕಷ್ಟು ವಂಚನೆ ಪ್ರಕರಣಗಳ ಬಗ್ಗೆ ಖದೀಮರು ಬಾಯ್ಬಿಟ್ಟಿದ್ದಾರೆ. ವಂಚನೆ ಹಣ ಲೆಕ್ಕ ಹಾಕುತ್ತಿದ್ದ ಮೂವರು ನಕಲಿ ಗೋಲ್ಡ್ ಬ್ಯುಸಿನೆಸ್‍ಮ್ಯಾನ್‍ಗಳು ಇದೀಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.

ಇದನ್ನೂ ಓದಿ:ಹೊಸಪೇಟೆಯಲ್ಲಿ ನಕಲಿ ಚಿನ್ನದ ನಾಣ್ಯ ಮಾರಾಟ ಜಾಲ: ಇಬ್ಬರ ಬಂಧನ, ಓರ್ವ ಪರಾರಿ

Last Updated :Oct 21, 2022, 1:30 PM IST

ABOUT THE AUTHOR

...view details