ಕರ್ನಾಟಕ

karnataka

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಸೂಚನೆ: ಮುಂಜಾಗ್ರತಾ ಕ್ರಮ ಕೈಗೊಂಡ ಜಿಲ್ಲಾಡಳಿತ

By

Published : May 30, 2023, 8:33 PM IST

Updated : May 30, 2023, 9:15 PM IST

ಮುಂಗಾರು ಮಳೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತವು ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

rain-warning-in-chikkamagaluru-collector-has-taken-precautionary-measures
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಸೂಚನೆ: ಮುಂಜಾಗ್ರತ ಕ್ರಮ ಕೈಗೊಂಡ ಜಿಲ್ಲಾಧಿಕಾರಿ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿದರು

ಚಿಕ್ಕಮಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮುನ್ಸೂಚನೆ ಹಿನ್ನೆಲೆ ಚಿಕ್ಕಮಂಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಮುಂಜಾಗ್ರತ ಕ್ರಮವಾಗಿ 64 ಜೆಸಿಬಿ. 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್‍ಗಳ ಮೂಲಕ ಮಲೆನಾಡು - ಅರೆಮಲೆನಾಡು ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು. ಪ್ರವಾಹವನ್ನ ಎದುರಿಸಲು ತುರ್ತು ಸಂದರ್ಭದ ಅನುಕೂಲಕ್ಕಾಗಿ ಮತ್ತು ಲ್ಯಾಂಡ್ ಸ್ಲೈಡ್, ಪ್ರವಾಹ ಪ್ರದೇಶಗಳ ಮಾಹಿತಿಯೊಂದಿದೆ ಜಿಲ್ಲಾಡಳಿತ ಸಿದ್ಧವಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಫಿನಾಡಲ್ಲಿ ಮಳೆ ಅಬ್ಬರ ಹೇಳ ತೀರದ್ದಾಗಿದ್ದು, ಶತಮಾನಗಳ ಬದುಕು ಕಣ್ಣೆದುರೇ ಕೊಚ್ಚಿ ಹೋಗಿತ್ತು. ಜೀವ ಹಾನಿಯೂ ಸಂಭವಿಸಿತ್ತು. ಹಾಗಾಗಿ, ಈ ವರ್ಷವೂ ಮುಂಗಾರಿನ ಅಬ್ಬರ ಹೆಚ್ಚಿರುತ್ತೆ ಎಂಬ ಮಾಹಿತಿಯಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ. ಮುಂಜಾಗೃತ ಕ್ರಮವಾಗಿ 47 ಗ್ರಾಮ ಪಂಚಾಯಿತಿ ವ್ಯಾಪ್ತಿಯ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು ಗುರುತಿಸಿದೆ.

ಕಳೆದ ವರ್ಷದ ಮಳೆ ಸೃಷ್ಠಿಸಿದ ಅವಾಂತರ

ಎನ್​.ಆರ್.ಪುರ ​​ 21, ಮೂಡಿಗೆರೆ 33, ಚಿಕ್ಕಮಗಳೂರು 5, ಕೊಪ್ಪ 6, ಶೃಂಗೇರಿ 9, ಕಡೂರು 2, ತರೀಕೆರೆಯಲ್ಲಿ 1 ಗ್ರಾಮವನ್ನ ಜಿಲ್ಲಾಡಳಿತ ಅಪಾಯದ ಗ್ರಾಮಗಳೆಂದು ಗುರುತಿಸಿದೆ. ಮಳೆ ಹೆಚ್ಚಾಗಿ ಯಾವುದೇ ರೀತಿಯ ತೊಂದರೆಯಾದರೂ ಅಧಿಕಾರಿಗಳು ಅಲ್ಲಿರಬೇಕು ಎಂದು ಸೂಚಿಸಿ 64 ಜೆಸಿಬಿ. 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್​ಗಳನ್ನ ಪ್ರವಾಹವನ್ನ ಎದುರಿಸಲು ಸನ್ನದ್ಧವಾಗಿರುವಂತೆ ಆದೇಶಿಸಿದೆ. ಜೊತೆಗೆ, ಜಿಲ್ಲಾದ್ಯಂತ ಹೋಬಳಿವಾರು ತರಬೇತಿಯುಳ್ಳ 34 ತಂಡವನ್ನೂ ರಚಿಸಿದ್ದು, 290 ಹೋಂ ಗಾರ್ಡ್, 70 ಈಜು ತಜ್ಞರು ಹಾಗೂ 40 ಸ್ವಯಂ ಸೇವಕರನ್ನ ನಿಯೋಜಿಸಿದೆ.

ಕಳೆದ ವರ್ಷದ ಮಳೆ ಸೃಷ್ಠಿಸಿದ ಅವಾಂತರ

ಚಾರ್ಮಾಡಿ ಘಾಟ್ ಸೇರಿದಂತೆ ಜಲಪಾತ ಹಾಗೂ ಅಪಾಯದ ಸ್ಥಳಗಳಲ್ಲಿ ಜನಸಾಮಾನ್ಯರು, ಪ್ರವಾಸಿಗರು ಮೋಜು, ಮಸ್ತಿ ಮಾಡಲು ಹೋಗಿ ಅಪಾಯಕ್ಕೆ ಸಿಲುಕಬಹುದು. ಹಾಗಾಗಿ, ಅಂತಹಾ ಜಾಗದಲ್ಲಿ ಕಡ್ಡಾಯವಾಗಿ ನಾಮಫಲಕ ಹಾಕಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮಳೆ ಹೆಚ್ಚಾಗಿ ಆಪಾಯದ ಮುನ್ಸೂಚನೆ ಸಿಕ್ಕರೆ ಕೂಡಲೇ ಜನಸಾಮಾನ್ಯರನ್ನ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಒಟ್ಟಾರೆಯಾಗಿ, ಕಳೆದ ಮೂರ್ನಾಲ್ಕು ವರ್ಷದ ಮಳೆ ಮಲೆನಾಡಿಗರ ಬದುಕನ್ನ ಮೂರಾ ಬಟ್ಟೆಯನ್ನಾಗಿಸಿತ್ತು. ಎಲ್ಲ ಇದ್ದವರು ಎಲ್ಲಾ ಕಳೆದುಕೊಂಡು ಏನೂ ಇಲ್ಲದವರಂತೆ ನಿರ್ಗತಿಕರಾಗಿದ್ದರು. ನಿಮ್ಮ ಜೊತೆ ಸರ್ಕಾರ ಇದೆ ಎಂದ ಜನ ಪ್ರತಿನಿಧಿಗಳು ಮಳೆ ಮುಗಿದ ಬಳಿಕ ಕೊಟ್ಟ ಮಾತನ್ನ ಮರೆತಿರೋದು ದುರಂತ. ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಆದರೆ, ಮನೆ, ಮಠ, ಆಸ್ತಿ, ಪಾಸ್ತಿ ಎಲ್ಲಾ ಕಳೆದುಕೊಂಡು ಮೇಲೆ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಜೀವ ಉಳಿಸಿಕೊಂಡು ಉಪಯೋಗವೇನು ಎಂಬ ಪ್ರಶ್ನೆ ಮಲೆನಾಡಿಗರದ್ದು. ಹಾಗಾಗಿ, ಸರ್ಕಾರ ಪ್ರವಾಹದಿಂದ ಜನರನ್ನ ರಕ್ಷಣೆ ಮಾಡುವುದರ ಜೊತೆ ಎಲ್ಲ ಕಳೆದುಕೊಂಡವರಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ನೀಡಲಿ ಅನ್ನೋದು ಜನರ ಆಗ್ರಹವಾಗಿದೆ.

ಇದನ್ನೂ ಓದಿ:ಚಾಮರಾಜನಗರ: ಪೂರ್ವ ಮುಂಗಾರು ಜೋರು - ರಸ್ತೆಯಲ್ಲಿ ನಿಂತ ನೀರಿನಿಂದ ಪರದಾಡಿದ ವಾಹನ ಸವಾರರು

Last Updated : May 30, 2023, 9:15 PM IST

ABOUT THE AUTHOR

...view details