ಕರ್ನಾಟಕ

karnataka

ಕಡೂರು ಕಳಪೆ ಕಾಮಗಾರಿ: ರಸ್ತೆಯಲ್ಲಿ ಗುಂಡಿಯೋ, ಗುಂಡಿಯಲ್ಲಿ ರಸ್ತೆಯೋ..!

By

Published : Aug 20, 2021, 3:54 PM IST

ಅದು ಬರೋಬ್ಬರಿ ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ, ನಿರ್ಮಾಣವಾದ ಮೂರೇ ವರ್ಷಕ್ಕೆ ಅದೆಷ್ಟು ಬಾರಿ ಹಾಳಾಗಿದೆಯೋ ಗೊತ್ತಿಲ್ಲ. ರಸ್ತೆಯಲ್ಲಿ ಆಳುದ್ದದ ಗುಂಡಿ ಬಿದ್ದು ಆಸ್ಪತ್ರೆ ಸೇರಿದವ್ರ ಸಂಖ್ಯೆ ಲೆಕ್ಕವಿಲ್ಲ. ಇನ್ನು ಅಧಿಕಾರಿಗಳೋ ಬರೀ ರೆಕಾರ್ಡ್ ಕೀಪಿಂಗ್ ಅಂಡ್ ಸ್ಲೀಪಿಂಗ್ ಮೋಡ್ ನಲ್ಲಿರ್ತಾರಂತೆ. ಅರೇ ಈ ರಸ್ತೆ ಯಾವ್ದಪ್ಪಾ ಅಂತೀರಾ?

jodihochihalli and nidaghatta road problem
ಕಡೂರು ಕಳಪೆ ರಸ್ತೆ ಕಾಮಗಾರಿ

ಚಿಕ್ಕಮಗಳೂರು: ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಜಿಲ್ಲೆಯ ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಹಾಗೂ ನಿಡಘಟ್ಟ ಗ್ರಾಮಗಳ ನಡುವಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯೇ ರಸ್ತೆಯ ಸದ್ಯದ ಪರಿಸ್ಥಿತಿಗೆ ಕಾರಣ ಎಂದು ಜನರು ದೂರಿದ್ದಾರೆ.

ಕಡೂರಿನಿಂದ ಪಕ್ಕದ ಹಾಸನ ಜಿಲ್ಲೆಯ ಜಾವಗಲ್ ಮುಖಾಂತರ ಇತಿಹಾಸ ಪ್ರಸಿದ್ಧ ಹಳೇಬೀಡು ಹಾಗೂ ಬೇಲೂರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು. ಸರಿ ಸುಮಾರು 500ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದೆ. ಕಡೂರು ತಾಲೂಕಿನ ತಂಗಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 206 ರಿಂದ ಬಳ್ಳೇಕೆರೆ ಮೂಲಕ ನೇರವಾಗಿ ಜಾವಗಲ್​ಗೆ ಸಂಪರ್ಕವನ್ನು ಕಲ್ಪಿಸುವ ಈ ರಸ್ತೆಯಲ್ಲಿ ದಿನವೊಂದಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಕಡೂರು ಕಳಪೆ ರಸ್ತೆ ಕಾಮಗಾರಿ

ಈ ರಸ್ತೆಯಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡಬೇಕಾಗಿದೆ. ಅಲ್ಲದೇ, ಸಖರಾಯಪಟ್ಟಣ ದಿಂದ ಜೋಡಿಹೋಚಿಹಳ್ಳಿ ಮಾರ್ಗವಾಗಿ ನಿಡಘಟ್ಟ, ಎಸ್. ಬಿದರೆ, ಸಿಂದಿಗೆರೆ, ನೇರ್ಲಿಗೆ ಮೂಲಕ ಜಾವಗಲ್ ಸಂಪರ್ಕ ಸಾಧಿಸುವ ಈ ರಸ್ತೆ ಹಳೇಬೀಡು - ಬೇಲೂರುಗಳಿಗೆ ಹೋಗುವ ಪ್ರವಾಸಿಗರು ಆಯ್ಕೆ ಮಾಡಿಕೊಳ್ಳುವ ಪ್ರಮುಖ ಶಾರ್ಟ್ ಕಟ್ ವೇ ಸಹ ಹೌದು.

ಆದರೆ, ಕಳೆದ ಮೂರು ವರ್ಷಗಳ ಹಿಂದೆ ಪ್ರಭಾವಿ ಗುತ್ತಿಗೆದಾರರೊಬ್ಬರಿಗೆ ಈ ರಸ್ತೆಯ ಟೆಂಡರ್ ಆಗಿದ್ದು, ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ. ಆದ್ರೆ ಅಧಿಕಾರಿಗಳು ಕೇವಲ ರೆಕಾರ್ಡ್ ಕೀಪಿಂಗ್ ಅಂಡ್ ಸ್ಲೀಪಿಂಗ್​​​ಗೆ ಮಾತ್ರ ಸೀಮಿತವಾಗಿದ್ದಾರೆ ಅಂತಾರೆ ಸ್ಥಳೀಯರು.

ಇನ್ನು, ಅದೆಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಕ್ಯಾರೇ ಅನ್ನುತ್ತಿಲ್ಲವಂತೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಕೂಡಾ ಏನೂ ಪ್ರಯೋಜನವಾಗಿಲ್ಲ. ನಿತ್ಯ ಇಲ್ಲಿ ಬಿದ್ದು ಏಳುವವರನ್ನ ನೋಡಿ ನಮಗೇ ಬೇಜಾರಾಗಿದೆ. ನಾವೇ ಎಷ್ಟೋ ಮಂದಿಯನ್ನ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.

ಒಟ್ಟಾರೆಯಾಗಿ, ಅದೇನೋ ಹೇಳ್ತಾರಲ್ಲ ಮೇಲಿನ ಅಧಿಕಾರಿಗಳು ಬಾಚಿ ಬಳಿಯೋರಾದ್ರೆ ಅವ್ರ ಕೆಳಗಿನವ್ರು ಕಿತ್ತು ತಿನ್ನೋರು ಅನ್ನೋ ಮಾತನ್ನ ಈ ರಸ್ತೆ ನೋಡಿದ ತಕ್ಷಣ ಎಂತಹವರಿಗಾದ್ರೂ ನೆನಪಿಗೆ ಬಾರದೇ ಇರಲಾರದು. ಏನಾದ್ರೂ ಆಗ್ಲಿ‌ ಈಗಲಾದ್ರೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ನಮ್ಮ ಈ ರಸ್ತೆ ಸರಿಪಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಿ ಅನ್ನೋದು ಸ್ಥಳೀಯರ ಆಶಯ.

ABOUT THE AUTHOR

...view details