ಚಿಕ್ಕಮಗಳೂರು:ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಾಕಿದವರು ಯಾರು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆ ಮಾಡಿದ್ದಾರೆ.
ಅಖಂಡ ಮನೆಗೆ ಬೆಂಕಿ ಹಚ್ಚಿದ ವಿಚಾರ: ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆ ಹಾಕಿದ ಸಿ.ಟಿ.ರವಿ
ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದ ವಿಚಾರವಾಗಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ಪ್ರಕಾರ ಏನು ಶಿಕ್ಷೆ ಮಾಡಬೇಕೋ ಮಾಡುತ್ತೇವೆ ಎಂದಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬೆಂಕಿ ಹಾಕಿದ್ದ, ಒಂದು ವೇಳೆ ಬಿಜೆಪಿಯವರು ಬೆಂಕಿ ಹಾಕಿದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಇದು ಅಂತಾರಾಷ್ಟ್ರೀಯ ಸುದ್ದಿ ಆಗೋ ರೀತಿಯಲ್ಲಿ ಹೋರಾಟ ಮಾಡುತ್ತಿದ್ದರು. ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಸಿದ್ದರಾಮಯ್ಯ ಅವರು ಆಕಾಶ ತಲೆಯ ಮೇಲೆ ಕಳಚಿ ಬಿದ್ದಿದೆ ಎನ್ನುವ ರೀತಿ ಮಾಡುತ್ತಿದ್ದರು. ಈಗ ಯಾಕೇ ಎಲ್ಲರೂ ಮೌನವಾಗಿದ್ದಾರೆ. ಅವರ ಪಕ್ಷದವರೇ ಬೆಂಕಿ ಹಾಕಿದ್ದರೇ ಸಹಿಸಿಕೊಳ್ಳುವ ಸಂಗತಿಯೇ. ಅಪರಾಧಿಗೆ ರಕ್ಷಣೆ ಕೊಡುವ ಮನಸ್ಥಿತಿ ಯಾರಿಗೂ ಒಳ್ಳೆಯದಲ್ಲ. ಕಾಂಗ್ರೆಸ್ನಲ್ಲಿರುವ ಎರಡೂ ಗುಂಪಿನ ಜಗಳ ತನ್ನ ಪಕ್ಷದ ಶಾಸಕನ ಮನೆಗೆ ಬೆಂಕಿ ಹಾಕುವ ಅತಿರೇಕಕ್ಕೆ ಹೋಗುತ್ತೇ ಎನ್ನುವುದಾದರೆ ಇದರಲ್ಲಿ ಬಿಜೆಪಿಯವರ ಕೈವಾಡ ಏನಿದೆ. ಕಾನೂನು ತನ್ನ ಕೆಲಸ ಮಾಡಬಾರದಾ?. ಡಿ.ಕೆ. ಶಿವಕುಮಾರ್ ಅವರ ಕಡೆಯವರು ಎಂದೂ ಹೇಳಿ ಮೌನವಾಗಿರಬೇಕಾ?. ಏನೇ ಮಾಡಿದರೂ ಸಹಿಸಿಕೊಳ್ಳಬೇಕು ಎಂದೂ ಕಾನೂನಿನಲ್ಲಿ ತಿದ್ದುಪಡಿ ಆಗಿದ್ಯಾ. ಅವರು ಸಮರ್ಥನೆಗೆ ನಿಂತಿರೋದು ಕಾಂಗ್ರೆಸ್ ಯಾವ ಸ್ಥಿತಿಗೆ ಹೋಗಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಇವರ ಒಳಜಗಳಕ್ಕಾಗಿ ಅಮಾಯಕ ಶಾಸಕನ ಮನೆ ಬೆಂಕಿಗೆ ಆಹುತಿಯಾಗಿದೆ. ಅವರು ನ್ಯಾಯ ಕೇಳುತ್ತಿದ್ದಾರೆ. ಸಂಪತ್ರಾಜ್ಗೆ ಯಾರೂ ರಕ್ಷಣೆ ನೀಡಿದ್ದರು. ಎಲ್ಲಿ ತಲೆ ಮರೆಸಿ ಕೊಂಡಿದ್ದರು. ತಪ್ಪು ಮಾಡಿಲ್ಲ ಎಂದಾದರೇ ಏಕೆ ತಲೆ ಮರಿಸಿಕೊಳ್ಳಬೇಕು. ಕಾನೂನಿನ ಪ್ರಕಾರ ಅಖಂಡ ಶ್ರೀನಿವಾಸ್ ಮೂರ್ತಿ ರಕ್ಷಣೆ ನೀಡುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಡಿ.ಕೆ. ಶಿವಕುಮಾರ್ ಕಡೆಯವರಾದರೂ ಬಿಡೋಲ್ಲ. ಸಿದ್ದರಾಮಯ್ಯ ಕಡೆಯವರು ಆದರೂ ಬಿಡೋದಿಲ್ಲ. ಪಾಕಿಸ್ತಾನದಲ್ಲಿ ಅವಿತು ಕುಳಿತಿದ್ದರೂ ಒದ್ದು ಎಳೆದುಕೊಂಡು ಬಂದು ಕಾನೂನಿನ ಪ್ರಕಾರ ಏನು ಶಿಕ್ಷೆ ಮಾಡಬೇಕೋ ಮಾಡುತ್ತೇವೆ ಎಂದೂ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.